ಬೆಂಗಳೂರು: ದಲಿತರ ಮೇಲಿನ ದೈಹಿಕ ಅಸ್ಪೃಶ್ಯತೆ ನಿವಾರಣೆಯಾಗಿದ್ದರೂ ಮಾನಸಿಕ ಅಸ್ಪೃಶ್ಯತೆ ಮುಂದುವರೆಯುತ್ತಲೇ ಇದೆ ಎಂದು ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ಬೇಸರ ವ್ಯಕ್ತಪಡಿಸಿದರು.
ಛತ್ರಪತಿ ಶಾಹು ಮಹಾರಾಜ್ ಜನ್ಮ ದಿನದ ಅಂಗವಾಗಿ ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಎಲ್ಲರಿಗೂ ಸಮಾನತೆ ದೊರೆಯುವಂತೆ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ರಚಿಸಿದರು.
ಸಾಮಾಜಿಕ ನ್ಯಾಯಕ್ಕೆ ಪ್ರಾಮುಖ್ಯತೆ ದೊರೆತಿದ್ದರಿಂದ ಹಿಂದುಳಿದ ವರ್ಗದವರು ವಿದ್ಯಾವಂತರಾಗಿ ಸಮಾಜದಲ್ಲಿ ಗೌರವಯುತ ಸ್ಥಾನ ಪಡೆಯಲು ಸಾಧ್ಯವಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆ ದಲಿತರಿಗೆ ಗೌರವಯುತ ಸ್ಥಾನಮಾನ ದೊರಕಿಸಿಕೊಟ್ಟರೂ ಮಾನಸಿಕವಾಗಿ ಅವು ಸಿಗುತ್ತಿಲ್ಲ ಎಂದು ಹೇಳಿದರು.
ಮೀಸಲಾತಿ ಬಗ್ಗೆ ಇತ್ತೀಚಿನ ದಿನಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ನ್ಯಾಯಾಂಗ, ಆಡಳಿತದ ಬಹಪಾಲು ಅಂಗಗಳು ಮೀಸಲಾತಿ ಬೇಕಿಲ್ಲ ಎಂದು ಅಭಿಪ್ರಾಯಪಡುತ್ತಿವೆ. ಅತ್ಯಂತ ಶ್ರೇಷ್ಠವೆಂದು ಭಾವಿಸಿರುವ ನ್ಯಾಯಾಂಗವೇ ಬಡ್ತಿ ಮೀಸಲಾತಿಗೆ ವಿರುದ್ಧವಾಗಿ ತೀರ್ಪು ನೀಡಿದೆ. ಸಾವಿರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ನೀಡಲಾಗಿರುವ ಮೀಸಲಾತಿ ಕುರಿತ ವಿಚಾರಗಳಲ್ಲಿ ನ್ಯಾಯಾಂಗಕ್ಕೆ ಸೂಕ್ಷ್ಮತೆ ಇರಬೇಕು ಎಂದರು.
ಮಹಾರಾಷ್ಟ್ರದ ಶಾಹು ಮಹಾರಾಜ್ ದೇಶದಲ್ಲೇ ಮೊದಲ ಬಾರಿ ದಲಿತರಿಗೆ ಮೀಸಲಾತಿ ಕಲ್ಪಿಸಿದವರು. ಸಾಹು ಮಹಾರಾಜ್‌ರಿಂದ ಸ್ಫೂರ್ತಿ ಪಡೆದು ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಮೈಸೂರು ಸಂಸ್ಥಾನದಲ್ಲಿ ಮೀಸಲಾತಿ ಸೌಲಭ್ಯ ನೀಡಿದ್ದರು ಎಂದು ತಿಳಿಸಿದರು.
ದಸಂಸ ರಾಜ್ಯ ಸಂಚಾಲಕ ಆರ್.ಮೋಹನ್‌ರಾಜ್, ತುಮಕೂರು ವಿವಿ ಪ್ರಾಧ್ಯಾಪಕ ಡಾ.ಲಿಂಗಣ್ಣ, ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆ ರಾಜ್ಯಾಧ್ಯಕ್ಷ ಬಸವರಾಜ್ ಕೌತಾಳ್, ವಿಚಾರವಾದಿ ಕಲೈಸೆಲ್ವಿ, ಡಿಎಸ್‌ಫೋರ್ ಸಂಘಟನೆಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಮತ್ತಿತರರು ಉಪಸ್ಥಿತರಿದ್ದರು.