ಎಚ್.ಡಿ.ಕೋಟೆ: ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ ಮಾರಮ್ಮ ಜಾತ್ರಾ ಮಹೋತ್ಸವ ಗುರುವಾರದಿಂದ 12 ದಿನಗಳ ಕಾಲ ನಡೆಯಲಿದ್ದು, ಆಸ್ಪೃಶ್ಯತೆ ಆಚರಣೆ ವಿವಾದಕ್ಕೆ ಕಾರಣವಾಗಿದೆ. ದೇವಸ್ಥಾನಕ್ಕೆ ದಲಿತರ ಪ್ರವೇಶ ಮಾಡುವಂತಿಲ್ಲ ಎಂದು ಸವರ್ಣಿಯರು ತಿಳಿಸಿದ್ದಾರೆ ಎನ್ನಲಾಗಿದ್ದು, ಇದು ದಲಿತರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ನಡೆಯುವ ಜಾತ್ರೆಯಲ್ಲಿ ನಮಗೆ ಮುಕ್ತ ಅವಕಾಶ ನೀಡಬೇಕು ಎಂದು ದಲಿತ ಸಮುದಾಯದ ಮುಖಂಡರು ಪೊಲೀಸ್ ಠಾಣೆ ಮೆಟ್ಟಿಲಿರುವುದರ ಜೊತೆಗೆ ತಹಶೀಲ್ದಾರ್ ಗಮನ ಸೆಳೆದಿದ್ದಾರೆ. ಸಾಗರೆ ಗ್ರಾಮದಲ್ಲಿ ಮಾ.5ರಿಂದ ಆರಂಭಗೊಳ್ಳುವ ಜಾತ್ರಾ ಮಹೋತ್ಸವ 17ರಂದು ಮುಕ್ತಾಯಗೊಳ್ಳಲಿದೆ. ಜಾತ್ರೆ ಹಿನ್ನೆಲೆಯಲ್ಲಿ ಇತ್ತೀಚೆಗೆ ದೇವಸ್ಥಾನದ ಬಳಿ ಸಭೆ ನಡೆಸಿದ್ದ ಸವಣೀಯರು, “ಜಾತ್ರೆಯಲ್ಲಿ ದಲಿತರಿಗೆ ಅವಕಾಶ ನೀಡುವುದಿಲ್ಲ. ದೇವಾಲಯದಲ್ಲಿ ಪೂಜಾ ಕೈಂಕರ್ಯ ನಡೆಸುವಂತಿಲ್ಲ’ ಎಂದು ಸೂಚನೆ ನೀಡಿದ್ದಾರೆ ಎಂದು ದಲಿತರು ಆಪಾದಿಸಿದ್ದಾರೆ.
ಗ್ರಾಮದಲ್ಲಿ ಎಲ್ಲರಂತೆ ದಲಿತರಗೂ ಸಮಾನತೆ ಕಲ್ಪಿಸಬೇಕು. ದೇವಸ್ಥಾನ ಪೂಜಾ ಕೈಂಕರ್ಯ ಸೇರಿದಂತೆ ದೇವರ ದರ್ಶನಕ್ಕೆ ಅನುಮತಿ ನೀಡಬೇಕು. ಇದಕ್ಕೆ ಅವಕಾಶ ನೀಡಲು ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಹಶೀಲ್ದಾರ್ ಆರ್.ಮಂಜುನಾಥ್ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ ಅವರಿಗೆ ದಲಿತ ಸಮುದಾಯದ ಮುಖಂಡರು ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ.
ಅಸ್ಪೃಶ್ಯತೆ: ಸರಗೂರು ತಾಲೂಕಿನ ಸಾಗರೆ ಗ್ರಾಮದಲ್ಲಿ ಸುಮಾರು 12 ಕೋಮುಗಳ ಜನ ವಾಸವಾಗಿದ್ದಾರೆ. ಪ್ರಬಲ ಸಮುದಾಯಗಳ ಪಾರುಪತ್ಯ ಹೆಚ್ಚಿದ್ದು, ದಲಿತರನ್ನು ಅಸ್ಪೃಶ್ಯರನ್ನಾಗಿ ನೋಡಲಾಗುತ್ತಿದೆ. ದಲಿತರಿಗೆ ಕ್ಷೌರಿಕ ಅಂಗಡಿ, ಹೋಟೆಲ್, ಸಾರ್ವಜನಿಕ ದೇವಸ್ಥಾನ, ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೋಗದಂತೆ ನಿರ್ಬಂಧ ವಿ ಸಲಾಗಿದೆ ಎಂದು ಗ್ರಾಮದ ದಲಿತ ಸಮುದಾಯದವರು ಆರೋಪಿಸಿದ್ದಾರೆ.
ಅಲ್ಲದೇ ದಲಿತ ಮಹಿಳೆ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ತಯಾರಿಸಿದರೆ ಸವರ್ಣೀಯರು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ದೂರಿದ್ದಾರೆ. ಗ್ರಾಮದಲ್ಲಿ ಸವರ್ಣೀಯರು ಹಾಗೂ ದಲಿತ ಸಮುದಾಯಗಳ ನಡುವಿನ ಜಟಾಪಟಿ ಬೂದಿಮುಚ್ಚಿದ ಕೆಂಡದಂತಿದ್ದು, ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಾಲೂಕು ಅಡಳಿತ ಹಾಗೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡು ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಸೌಹಾರ್ದಯುತ ವಾತಾವರಣ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಅಸ್ಪೃಶ್ಯತೆ ಆಚರಿಸದಂತೆ ಮನವೊಲಿಕೆ – ತಹಶೀಲ್ದಾರ್: ಸಾರ್ವಜನಿಕ ಕ್ಷೇತ್ರಕ್ಕೆ ಯಾರಿಗೆ ಆದರೂ ಪ್ರವೇಶ ನಿರ್ಬಂಧಿಸುವುದು ಕಾನೂನು ಬಾಹಿರ. ಈ ವಿಚಾರವಾಗಿ ಬುಧವಾರ ಸಂಜೆ ಪೊಲೀಸರೊಡನೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಸರ್ವ ಸಮುದಾಯದವರೂ ಒಗ್ಗೂಡಿ ಜಾತ್ರೆ ನಡೆಸುವಂತೆ ಹಾಗೂ ಅಸ್ಪೃಶ್ಯತೆ ಆಚರಣೆ ಮಾಡದಂತೆ ಗ್ರಾಮಸ್ಥರ ಮನ ಒಲಿಸಿ ಕಾನೂನು ಸಲಹೆ ನೀಡಿ ಅರಿವು ಮೂಡಿಸಲಾಗುವುದು ಎಂದು ತಹಶೀಲ್ದಾರ್ ಆರ್.ಮಂಜುನಾಥ್ ತಿಳಿಸಿದ್ದಾರೆ.