ಬೆಂಗಳೂರು: “ದಲಿತರಿಗೆ ಈ ಬಾರಿ ವಿಶೇಷ ಬಜೆಟ್ ಮಂಡನೆ ಮಾಡಬೇಕು ಹಾಗೂ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನ ಶೇ.25ರಷ್ಟು ಹಣವನ್ನು ಮೀಸಲಿಡಬೇಕು,” ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬುಧವಾರ ನಗರದ ಪುರಭವನ ಮುಂಭಾಗ ಪ್ರತಿಭಟನೆ ನಡೆಸಿದರು.
“ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೇಲ್ನೋಟಕ್ಕೆ ಭಾರೀ ಯೋಜನೆ, ಕಾರ್ಯಕ್ರಮಗಳನ್ನು ಘೋಷಿಸಿದರೂ ಅವುಗಳಿಗೆ ಸೂಕ್ತ ಅನುದಾನ ಬಿಡುಗಡೆಯಾಗಲಿ, ಬಿಡುಗಡೆಯಾದ ಅನುದಾನ ಸಮರ್ಪಕ ಬಳಕೆಯಾಗಲಿ ಮಾಡುತ್ತಿಲ್ಲ. ಇದರಿಂದ ಪರಿಶಿಷ್ಟರ ಅಭಿವೃದ್ಧಿ ಮರೀಚಿಕೆಯಾಗಿಯೇ ಉಳಿದಿದೆ,” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಮಿತಿಯ ರಾಜ್ಯಾಧ್ಯಕ್ಷ ಡಾ.ಎನ್.ಮೂರ್ತಿ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎಸ್‌ಇಪಿ ಟಿಎಸ್‌ಪಿ ಕಾಯ್ದೆಯಡಿ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟರಿಗೆ 19,300 ಕೋಟಿ ರೂ. ಮೀಸಲಿಟ್ಟರೂ, ಅದರಲ್ಲಿ ಪರಿಶಿಷ್ಟರಿಗೆ ಬಳಕೆಯಾಗಿರುವುದು ಕೇವಲ 9 ಸಾವಿರ ಕೋಟಿ ರೂ. ಉಳಿದ 10 ಸಾವಿರ ಕೊಟಿ ರೂ.ಗಳನ್ನು ಬೇರೆ ಬೇರೆ ಕಾರ್ಯಗಳಿಗೆ ಬಳಸಲಾಗಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಹಣ ಅವರಿಗಾಗಿಯೇ ಖರ್ಚು ಮಾಡಲು ಕಾಯ್ದೆ ತಂದರೂ ಪ್ರಯೋಜನವಾಗಿಲ್ಲ. ಈ ಕಾಯ್ದೆಯಲ್ಲಿನ ಕೆಲ ನಿಯಮಗಳ ಲೋಪದಿಂದಾಗಿ ಪರಿಶಿಷ್ಟರಿಗೆ ಪೂರ್ಣ ಹಣ ಬಳಕೆಯಾಗುತ್ತಿಲ್ಲ,” ಎಂದು ದೂರಿದರು.
“ರಾಜ್ಯ ಸರ್ಕಾರ ಮುಂದಿನ ಬಜೆಟ್‌ನಲ್ಲಿ ಪರಿಶಿಷ್ಟರ ಜನಸಂಖ್ಯೆ ಆಧರಿಸಿ ಬಜೆಟ್‌ನ ಶೇ.25ರಷ್ಟು ಹಣವನ್ನು ಈ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಸಬೇಕು. ಅದೇ ರೀತಿ ದಲಿತರಿಗೆ ವಿಶೇಷ ಬಜೆಟ್ ಮಂಡಿಸಬೇಕು. ದಲಿತರ ಅಭಿವೃದ್ಧಿಗಾಗಿ ನ್ಯಾ.ಎ.ಜೆ.ಸದಾಶಿವ ಆಯೋಗ ಮತ್ತು ಕಾಂತರಾಜ್ ಅವರ ವರದಿಗಳನ್ನು ಜಾರಿಗೆ ತರಬೇಕು,” ಎಂದು ಒತ್ತಾಯಿಸಿದರು.