Advertisement

ದಲಿತರಿಗೆ ಅರ್ಚಕ ಹುದ್ದೆ, ಧ್ವನಿ ಹೊಸತಲ್ಲ

11:52 AM Nov 04, 2017 | |

ಮುಜರಾಯಿ ಇಲಾಖೆ ಹಾಗೂ ಧಾರ್ಮಿಕ ಪರಿಷತ್‌ ಕೆಲವು ವೇದಪಾಠ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಿರುವುದು, ಕೆಲವರಿಗಾದರೂ ಸಂಸ್ಕೃತ ಸಂಸ್ಕಾರ ಒದಗುವ ನಿಟ್ಟಿನಲ್ಲಿ ಶ್ಲಾಘನೀಯ. ಆದರೆ ಈ ನಿರ್ಧಾರವು ಹೊಸದೊಂದು ಕ್ರಾಂತಿಕಾರಿ ಅವಿಷ್ಕಾರವೆಂದು ಬೆನ್ನು ತಟ್ಟಿಕೊಳ್ಳುವ ಆವಶ್ಯಕತೆ ಇಲ್ಲ. ಏಕೆಂದರೆ 1981ರಲ್ಲೇ ಇಂತಹ ಒಂದು ಗಂಭೀರ ಪ್ರಯತ್ನವು ಸರಕಾರದ ಕಡೆಯಿಂದ ಅಲ್ಲದಿದ್ದರೂ “ವಿಶ್ವಹಿಂದೂ ಪರಿಷತ್‌’ನ ಕರ್ನಾಟಕ ಘಟಕದ ಕಡೆಯಿಂದ ನಡೆದಿತ್ತು.

Advertisement

ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ರಾಜ್ಯ ದಲ್ಲಿರುವ ತಮ್ಮ ಆಡಳಿತ ವ್ಯಾಪ್ತಿಗೆ ಒಳಪಟ್ಟ ದೇವಾಲಯಗಳಲ್ಲಿ ಅರ್ಚಕ ಹುದ್ದೆಗಳನ್ನು ಭರ್ತಿ ಗೊಳಿಸಲು ಚಿಂತನೆ ನಡೆಸಿ ರುವುದು ಸ್ತುತ್ಯರ್ಹ. ಬಹುಶಃ ಯುವ ಜನತೆಯ ನಿರುದ್ಯೋಗ ಸಮಸ್ಯೆಗೆ ಇದೊಂದು ಒಳ್ಳೆಯ ಪರಿಹಾರವೆಂದೆನಿಸಲು ಸಾಧ್ಯವಿದೆ. 

ಅರ್ಚಕ ಹುದ್ದೆಗೆ ತೀರಾ ಅನಿವಾರ್ಯವೆನಿಸಿರುವ ಸಂಸ್ಕೃತ ಭಾಷೆ ಹಾಗೂ ವೇದ ಮಂತ್ರಗಳಲ್ಲಿ “ಅಹಿಂದ’ ವರ್ಗಕ್ಕೆ ಕಲಿ
ಸುವ ಯತ್ನಕ್ಕೆ ಪೂರಕವಾಗಿ ರಾಜ್ಯದ ವಿವಿಧೆಡೆ ಐದು ಸಂಸ್ಕೃತ ವೇದ ಪಾಠ ಶಾಲೆಗಳನ್ನು ಆರಂಭಿಸಲು ಮುಜರಾಯಿ ಇಲಾ ಖೆಯು ಮುಂದಾಗಿರುವುದು ಸಂಸ್ಕೃತವಾದಿಗಳ ಮೂಲಭೂತ ಉದ್ದೇಶಕ್ಕೆ ಪರೋಕ್ಷವಾಗಿ ದೊರೆತ ಅನುಕೂಲ ಎಂದೆನ್ನಲು ಸಾಧ್ಯವಿದೆ.

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಜ್ಯದ ಒಟ್ಟು 34,543 ದೇವಾಲಯಗಳ ಪೈಕಿ ವಾರ್ಷಿಕ ಆದಾಯ ರೂಪಾಯಿ 25 ಲಕ್ಷಕ್ಕಿಂತ ಅಧಿಕವಾಗಿರುವ ಬೆರಳೆಣಿಕೆಯ ದೇವಾಲ ಯಗಳಲ್ಲಿ ಹಾಗೂ ಸದ್ಯ ಆದಾಯ ತರುವ ದೇವಸ್ಥಾನಗಳಲ್ಲಿ ಮಾತ್ರ ದುಡಿಯಲು ಬಯಸುವವರೇ ಅಧಿಕ. ಇತರ ಸಾಮಾನ್ಯ ಆದಾಯ ದೇವಾಲಯಗಳಲ್ಲಿ ಅರ್ಚಕ – ಉಪ ಅರ್ಚಕ, ಶಾಂತಿ ಕೆಲಸಗಳನ್ನು ನಿರ್ವಹಿಸಲು ಬ್ರಾಹ್ಮಣರು ಹಿಂದೇಟು ಹಾಕುತ್ತಿರುವುದು ಮುಜರಾಯಿ ಇಲಾಖೆಯ ಆಡಳಿತಕ್ಕೊಳಪಟ್ಟ ಸಾವಿರಾರು ದೇವಾಲಯ ಗಳಿಗೆ ಒಂದು ಕಗ್ಗಂಟು ಸಮಸ್ಯೆಯೇ ಆಗಿದೆ. ದೇವಾಲಯದ ಅರ್ಚಕ ಸಿಬಂದಿ ವರ್ಗಕ್ಕೆ ನಿಗದಿ ಪಡಿಸಿರುವ ಮಾಸಿಕ ವೇತನವು ಸರಕಾರಿ ಸಮಾನಾಂತರ ಹುದ್ದೆಯ ಪ್ರಕಾರ ಅನ್ವಯಿಸಲಾಗದೆ ಇರುವುದು ಕೂಡ ದೇವಾಲಯದ ಅರ್ಚಕರು ಹಾಗೂ ಅನ್ಯ ಸಿಬಂದಿ ವರ್ಗದ ತತ್ವಾರ ದೃಷ್ಟಿಯಿಂದ ಗಮನಿಸಬೇಕಾಗುತ್ತದೆ. ಅದೇನಿದ್ದರೂ ಮುಜರಾಯಿ ಇಲಾಖೆ ಹಾಗೂ ಧಾರ್ಮಿಕ ಪರಿಷತ್‌ ಕೆಲವು ವೇದಪಾಠ ಶಾಲೆಗಳನ್ನು ಆರಂಭಿಸಲು ಉದ್ದೇಶಿಸಿರುವುದು, ಕೆಲವರಿಗಾದರೂ ಸಂಸ್ಕೃತ ಸಂಸ್ಕಾರ ಒದಗುವ ನಿಟ್ಟಿನಲ್ಲಿ ಶ್ಲಾಘನೀಯ.

ದಲಿತರಿಗೆ ಅರ್ಚಕ ತರಬೇತಿ ಹೊಸದೇನಲ್ಲ
ಕರ್ನಾಟಕ ಸರಕಾರ ಧಾರ್ಮಿಕ ದತ್ತಿ ಇಲಾಖೆಯು ಧಾರ್ಮಿಕ ಪರಿಷತ್‌ ಸದಸ್ಯರ ಸಭೆಯಲ್ಲಿ ತೆಗೆದುಕೊಂಡ ಹಲವು ನಿರ್ಣಯಗಳಲ್ಲಿ ಬ್ರಾಹ್ಮಣೇತರರಿಗೆ ಅರ್ಚಕ ವೃತ್ತಿಯನ್ನು ನೀಡುವುದು, ಸಂಸ್ಕೃತಾಭ್ಯಾಸ, ಅದರೊಂದಿಗೆ ಪೂಜಾ ಕೈಂಕರ್ಯ ಹಾಗೂ ಇತರ ಧಾರ್ಮಿಕ ಕರ್ಮಾಂಗಗಳ ಕುರಿತು ಶಿಕ್ಷಣ ನೀಡುವ ಪ್ರಸ್ತಾವನೆಗಳು ಮೂಡಿಬಂದಿವೆ. ಮುಜರಾಯಿ ಇಲಾಖೆಯ ಸಚಿವರಾದ ರುದ್ರಪ್ಪ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ “”ಕೇರಳ ದೇವಸ್ವಂ ಮಂಡಳಿ”ಯ ಕೆಲವು ನಿಯಮಗಳನ್ನು ಅನುಸರಿಸಲು ನಿರ್ಧರಿಸಿದ ಮುಜರಾಯಿ ಇಲಾಖೆಯು ಅರ್ಚಕ ವೃತ್ತಿಯನ್ನು ಬ್ರಾಹ್ಮಣ ವರ್ಗದಿಂದ ಕಸಿದುಕೊಳ್ಳುವುದನ್ನೇ ಒಂದು ಮುಖ್ಯ ಗುರಿಯನ್ನಾಗಿಸಿದಂತೆ ಸಂಶಯಗಳು ಮೂಡಿಬರುವಂತಾಗಿದೆ.

Advertisement

ವೇದ ಮಂತ್ರಗಳು ಹಾಗೂ ಸುಲಭ ಪೂಜಾ ವಿಧಾನಗಳನ್ನು ಬ್ರಾಹ್ಮಣೇತರರಿಗೆ ಕಲಿಸಲು ಯತ್ನಿಸುವ ಮುಜರಾಯಿ ಇಲಾಖೆ ಹಾಗೂ ಧಾರ್ಮಿಕ ಪರಿಷತ್ತಿನ ನಿರ್ಧಾರವು ಹೊಸದೊಂದು ಕ್ರಾಂತಿಕಾರಿ ಅವಿಷ್ಕಾರವೆಂದು ಬೆನ್ನು ತಟ್ಟಿಕೊಳ್ಳುವ ಆವಶ್ಯಕತೆ ಇಲ್ಲ. ಏಕೆಂದರೆ 1981ರಲ್ಲೇ ಅಂತಹ ಒಂದು ಗಂಭೀರ ಪ್ರಯತ್ನವು ಸರಕಾರದ ಕಡೆಯಿಂದ ಅಲ್ಲದಿದ್ದರೂ ವಿಶ್ವಹಿಂದೂ ಪರಿಷತ್‌ನ ಕರ್ನಾಟಕ ಘಟಕದ ಕಡೆಯಿಂದ ನಡೆದಿತ್ತು.

ಹೌದು, ಸುಮಾರು 37-38 ವರ್ಷಗಳ ಹಿಂದೆ ವಿಶ್ವಹಿಂದೂ ಪರಿಷತ್ತಿನ ಕರ್ನಾಟಕ ಘಟಕವು ರಾಜ್ಯವ್ಯಾಪಿ ತನ್ನ ಸಂಘಟನೆಯ ಮೂಲಕ ಒಂದು ಸಮೀಕ್ಷೆಯನ್ನು ನಡೆಸಿ ರಾಜ್ಯದ ಸಾವಿರಾರು ದೇವಾಲಯ, ಗುಡಿ, ಮಂದಿರಗಳಲ್ಲಿ ಪೂಜಾ ಕೈಂಕರ್ಯವು ಸರಿಯಾಗಿ ನೆರವೇರುತ್ತಿಲ್ಲ ಎನ್ನುವ ವಿಚಾರವನ್ನು ಗಮನಿಸಿತು. 

ಆ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಅಥವಾ ಮುಜರಾಯಿ ಇಲಾಖೆಯ ನೆಲೆಯಲ್ಲಿ ಯೋಜನೆಗಳು ನಡೆದಿರಲಿಲ್ಲ. ರಾಜ್ಯಾದ್ಯಂತದ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ದಯನೀಯ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ಪರಿಹಾರಾರ್ಥವಾಗಿ ಕೆಲವು ವಿಶಿಷ್ಟ ಚಿಂತನೆಗಳನ್ನು ರೂಪಿಸಿಕೊಂಡಿತು. ಆ ಸಂದರ್ಭದಲ್ಲಿ ಸದಾನಂದ ಕಾಕಡೆ ಎನ್ನುವ 70ರ ಹರೆಯದ ಓರ್ವ ಸಂಘಟಕರಿದ್ದರು. ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ವಿಶ್ವಹಿಂದೂ ಪರಿಷತ್ತಿಗೆ ಒಳ್ಳೆಯ ಚಾಲನೆ ನೀಡಿದರು. ಅವರೊಂದಿಗೆ ವಾದಿರಾಜ ಪಂಚಮುಖೀ, ಶಿವಮೊಗ್ಗದ ನರಸಿಂಹಮೂರ್ತಿ ಅಯ್ಯಂಗಾರ, ಭಜನಾ ಪ್ರಮುಖ್‌ ಗೋಕರೆ ಸುಬ್ಬರಾಮಯ್ಯ ಮೊದಲಾದವರು ಪರಿಷತ್ತಿಗೆ ಹೊಸ ಆಯಾಮ ನೀಡುವಲ್ಲಿ ಮುಂಚೂಣಿಯಲ್ಲಿದ್ದರು.

ರಾಜ್ಯದ ಕೆಲವು ದೇವಾಲಯಗಳು ಒಂದು ಹೊತ್ತಿನ ದೀಪ ಬೆಳಗುವಷ್ಟರ ಮಟ್ಟಿಗೂ ಸಂಪನ್ಮೂಲಗಳನ್ನು ಹೊಂದಿಲ್ಲ ಹಾಗೂ ಅಂತಹ ಕೈಂಕರ್ಯವನ್ನು ನಡೆಸುವ ವ್ಯಕ್ತಿಗಳೇ ಸಿಗುತ್ತಿಲ್ಲ. ಅವರ ಜತೆಗೆ ಅಂತಹ ಒಂದು ಪರಿಕಲ್ಪನೆಯೂ ಜನರಲ್ಲಿ ಇಲ್ಲದಿರುವುದು ಪರಿಷತ್ತಿನ ವಿಶ್ವಸ್ಥ ಮಂಡಳಿಯನ್ನು ಧೃತಿಗೆಡಿಸಿತು. ಈ ರೀತಿ ದೀಪ ಬೆಳಗದ – ಬಾಗಿಲು ತೆರೆಯದ ದೇವಾಲಯಗಳಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ ವಿ.ಹಿಂ.ಪರಿಷತ್‌ “”ಅರ್ಚಕರ ತರಬೇತಿ ಶಿಬಿರ”ವೊಂದನ್ನು ಸಂಘಟಿಸುವ ಯೋಜನೆಯನ್ನು ಆಯೋಜಸಿತು. ಈ ಶಿಬಿರದ ಉದ್ದೇಶಗಳು ಏನೆಂದರೆ:

1    ದೇವರ ಪೂಜಾ ವಿಧಾನಗಳನ್ನು ಮಂತ್ರ ಸಹಿತವಾಗಿ ಅತೀ ಸುಲಭ ರೀತಿಯಿಂದ ನೆರವೇರಿಸಲು ಯತ್ನಿಸುವುದು. ಇದರಿಂದಾಗಿ ಪೂಜಾವಿಧಾನವು ಕಗ್ಗಂಟಾಗದೆ ಎಲ್ಲರಿಗೂ ಮನದಟ್ಟಾಗುವಂತೆ ಮಾಡುವುದು.

2    ಬ್ರಾಹ್ಮಣೇತರರಿಗೂ ವೈದಿಕತೆಯತ್ತ ಒಲವು ಉಂಟಾಗುವಂತೆ ಮಾಡುವುದು.

3    ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳು ಪಾಳು ಬೀಳದಂತೆ ಕಾಪಾಡುವುದು.

4    ಪ್ರಾಥಮಿಕ ಶಿಕ್ಷಣವನ್ನು ಹೊಂದಿದ ನಿರುದ್ಯೋಗಿ ಯುವಕರು ದಾರಿ ತಪ್ಪದಂತೆ ಗೌರವಾನ್ವಿತವಾದ ಒಂದು ಜೀವನಕ್ಕೆ ಅನುವು ಮಾಡುವುದು.

5    ಎಲ್ಲಕ್ಕಿಂತಲೂ ಮುಖ್ಯವಾಗಿ ಹಿಂದೂ ಸಂಸ್ಕೃತಿಯನ್ನೂ ಬಲಪಡಿಸುವುದು.

6    ಭಜನೆ, ಸಂಕೀರ್ತನೆ, ಆರಾಧನೆ, ಮನೆ ಮದ್ದು, ತಕ್ಕಮಟ್ಟಿನ ಜ್ಯೋತಿಷ್ಯಗಳನ್ನು ವ್ಯಾಪಕಗೊಳಿಸುವ ಮೂಲಕ ಶ್ರದ್ಧಾಕೇಂದ್ರಗಳಿಗೆ ಹೊಸ ಆಯಾಮ ನೀಡುವುದು ಇತ್ಯಾದಿ.
ವಿಶ್ವಹಿಂದೂ ಪರಿಷತ್‌ ಈ ಮಹತ್ವದ ಜವಾಬ್ದಾರಿಯನ್ನು ಶಿವಮೊಗ್ಗದ ಕೋಟೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿದ್ದ ಪ್ರಸ್ತುತ ಕೀರ್ತಿಶೇಷರಾಗಿರುವ ನರಸಿಂಹ ಮೂರ್ತಿ ಅಯ್ಯಂಗಾರ ಅವರನ್ನು ಉಸ್ತುವಾರಿಯಾಗಿ ನಿಯಮಿಸಿತು. ರಾಜ್ಯಾದ್ಯಂತ ಫ‌ಲಾನುಭವಿಗಳಿಗಾಗಿ ವ್ಯಾಪಕ ಪ್ರಚಾರ ನಡೆಸಿ ಸುಮಾರು 200ರಷ್ಟು ಮಂದಿ ಈ ಶಿಬಿರದಲ್ಲಿ ಭಾಗವಹಿಸುವಂತಾಯಿತು.

ಪ್ರಖ್ಯಾತ ಆದಿಚುಂಚನಗಿರಿ ಕ್ಷೇತ್ರದಲ್ಲಿ ಒಂದು ತಿಂಗಳ ಕಾಲ ಈ ಶಿಬಿರವನ್ನು ಸಂಯೋಜಿಸಲಾಯಿತು. ಶಿಬಿರದಲ್ಲಿ ಪ್ರಾತಃಸ್ಮರಣೆ, ಭಜನೆ, ಕೀರ್ತನೆ, ಧ್ಯಾನ, ಯೋಗ, ಮುಖ್ಯವಾಗಿ ಸುಲಭ ಪೂಜಾಪದ್ಧತಿ, ಪಂಚಾಂಗ ಪಠಣ, ಆಯುರ್ವೇದ ಪರಿಚಯ ಇತ್ಯಾದಿಗಳನ್ನು ತಜ್ಞರೆಂದೆನಿಸಿದ ಕೆಲವರ ಮೂಲಕ ಕಲಿಸಲಾಗುತ್ತಿತ್ತು. ದಿ| ನರಸಿಂಹ ಮೂರ್ತಿ ಅಯ್ಯಂಗಾರ್‌ ಅವರಿಂದ ರಚಿಸಲ್ಪಟ್ಟ “”ಸುಲಭ ಪೂಜಾ ವಿಧಾನ” ಪುಸ್ತಕದ ಕರಡು ಪ್ರತಿಯ ನಿರ್ವಹಣೆಯಲ್ಲಿ ಈ ಲೇಖಕನೂ ಜವಾಬ್ದಾರನಾಗಿದ್ದ ಎನ್ನಲು ಸಂತೋಷವಾಗುತ್ತದೆ.

ಪರಮಪೂಜ್ಯ ಕೀರ್ತಿಶೇಷ ಬಾಲಗಂಗಾಧರನಾಥ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ ಅರ್ಚಕ ತರಬೇತಿ ಶಿಬಿರದಲ್ಲಿ ಬ್ರಾಹ್ಮಣರಾದಿಯಾಗಿ ಎಲ್ಲರೂ ಶಿಬಿರಾರ್ಥಿಗಳಿದ್ದರು. ಸುಮಾರು 60ರಷ್ಟು ಮಂದಿ ದಲಿತರು ಇದ್ದುದು ಒಂದು ವಿಶೇಷ.

ಪ್ರಸ್ತುತ ಸರಕಾರದ ನಿಲುವು ಅಂದಿನ ಆಯೋಜನೆಗೆ ಹೋಲುವಂತಾಗಿರುತ್ತಿದ್ದರೆ ಬಹುಶಃ ಬ್ರಾಹ್ಮಣ, ಅಬ್ರಾಹ್ಮಣ, ದೀನ, ದಲಿತ ಎಂಬ ಶಬ್ದಗಳ ಉಚ್ಚಾರವಿಲ್ಲದೆ ನೇರವಾಗಿ ಓರ್ವ ದೇವಾಲಯದ ಕಿಂಕರ ಎಂಬಷ್ಟರ ಮಟ್ಟಿಗೆ ಸಾರ್ಥಕಗೊಳ್ಳುತ್ತಿತ್ತೇನೋ?

ಮುಖ್ಯಮಂತ್ರಿ ಸಿದ್ಧರಾಮಯ್ಯನವರ “”ಅಹಿಂದ” ಜಪವು ಸಂಸ್ಕೃತ ಭಾಷೆಯಲ್ಲಿ ಆರಂಭಗೊಳ್ಳುವುದಕ್ಕೆ ಮುಜರಾಯಿ ಸಚಿವರು ಹಾಗೂ ಧಾರ್ಮಿಕ ಪರಿಷತ್‌ ಸದಸ್ಯರು “”ಓಂ” ಕಾರ ಪಠಿಸಿದ್ದಾರೆ. ಈ ನೆಲೆಯಲ್ಲಾದರೂ ಹಲವು ಸಂಸ್ಕೃತ ವಿದ್ಯಾಪೀಠಗಳು ಸ್ಥಾಪನೆಯಾಗುವುದು ಸಂತೋಷದ ಸಂಗತಿ.

ಮೋಹನದಾಸ ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next