Advertisement

ದಲಿತ ಮಹಿಳೆ ಅಂಗಡಿ ತೆರವಿಗೆ ಒತ್ತಡ: ಪ್ರತಿಭಟನೆ

10:53 PM Sep 21, 2019 | mahesh |

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾತ್ಮಕ ವಿಚಾರಗಳಲ್ಲಿ ಸ್ಥಳೀಯ ಮಾಸ್ಟರ್‌ ಪ್ಲಾನ್‌ ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ದಲಿತ ಸಂಘಟನೆ ಮುಖಂಡರು ದೇಗುಲದ ಕಚೇರಿ ಮುಂಭಾಗದಲ್ಲಿ ಶನಿವಾರ ಧರಣಿ ಸತ್ಯಾಗ್ರಹ ನಡೆಸಿ ಆರೋಪಿಸಿದರು.

Advertisement

ಕಾರ್ತಿಕೇಯ ವಸತಿಗೃಹದ ಎದುರುಗಡೆ ದಲಿತೆ ಲಕ್ಷ್ಮೀ ಅವರು ಹೂವಿನ ಸ್ಟಾಲ್‌ ತೆರೆದಿದ್ದರು. ಅದು ಅನಧಿಕೃತ ಎಂದು ಹೇಳಿ, ತೆರವಿಗೆ ಸೂಚಿಸಿ, ಸುಬ್ರಹ್ಮಣ್ಯ ಠಾಣೆಗೆ ದೇವಸ್ಥಾನದಿಂದ ಲಕ್ಷ್ಮೀ ವಿರುದ್ಧ ದೂರು ನೀಡಲಾಗಿತ್ತು. ದೇವಸ್ಥಾನದ ಮಾಸ್ಟರ್‌ ಪ್ಲಾನ್‌ ಮೇಲ್ವಿಚಾರಕ‌ ಸಮಿತಿ ಮಾಜಿ ಸದಸ್ಯ ಶಿವರಾಮ ರೈ ಅವರೇ ಈ ನಿಟ್ಟಿನಲ್ಲಿ ಇಒ ಮೇಲೆ ಒತ್ತಡ ತಂದಿದ್ದಾರೆ. ಒತ್ತಾಯದಿಂದಲೇ ದೂರು ಕೊಡಿಸಿದ್ದಾರೆ. ಶಿವರಾಮ ರೈ ಅವರು ನನಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಆದಿ ದ್ರಾವಿಡ ಸಮುದಾಯದ ಲಕ್ಷ್ಮೀ ಆರೋಪಿಸಿದರು. ದೇವಸ್ಥಾನದ ಪರಿಸರದಲ್ಲಿ ಅನಧಿಕೃತ ಅಂಗಡಿಗಳು ಸಾಕಷ್ಟಿವೆ. ಎಲ್ಲವನ್ನೂ ತೆರವುಗೊಳಿಸಿ ಎಂದು ಒತ್ತಾಯಿಸಿದರು.

ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರ ಮುಗ್ಧತೆಯನ್ನು ಶಿವರಾಮ ರೈ ಹಾಗೂ ದಿನೇಶ್‌ ಶಿರಾಡಿ ಮುಂತಾದವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಒ ಅವರನ್ನೂ ಬ್ಲಾಕ್‌ವೆುಲ್‌ ಮಾಡುತ್ತಿದ್ದಾರೆ ಎಂದು ಲಕ್ಷ್ಮೀ ಆರೋಪಿಸಿದರು.

ಆಡಳಿತ ಮಂಡಳಿಯ ಸಭೆ, ನಿರ್ಣಯಗಳಲ್ಲೂ ಶಿವರಾಮ ರೈ ಮೂಗು ತೂರಿಸುತ್ತಾರೆ ಎಂದು ಕ.ರಾ.ದ. ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಆನಂದ ಬೆಳ್ಳಾರೆ ಆರೋಪಿಸಿದರು. ಲಕ್ಷ್ಮೀ ಅವರ ವಿರುದ್ಧ ನೀಡಿರುವ ದೂರನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿದರು.

ದೇವಸ್ಥಾನದ ಕಚೇರಿ ಮುಂದೆ ಬೆಳಗ್ಗೆ ಪ್ರತಿಭಟನೆ ಕುಳಿತ ದಲಿತ ಸಂಘದ ಮುಖಂಡರ ಜತೆ ದೇವಸ್ಥಾನದ ಸಿಇಒ ರವೀಂದ್ರ ಎಂ.ಎಚ್‌. ಮಾತುಕತೆ ನಡೆಸಿದರು. ಸಂಜೆ ಅಧ್ಯಕ್ಷರು ಬರುತ್ತಾರೆ ಎಂದು ಸಿಇಒ ಭರವಸೆ ನೀಡಿದ ಮೇರೆಗೆ ಧರಣಿಯನ್ನು ಸ್ಥಗಿತಗೊಳಿಸಲಾಯಿತು.

Advertisement

ಕೊಠಡಿ ನೀಡುವ ಭರವಸೆ
ಸಂಜೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಆಗಮಿಸಿ ಸಿಇಒ ಸಮ್ಮುಖ ಧರಣಿ ನಿರತ ಮುಖಂಡರ ಜತೆ ಮಾತುಕತೆ ನಡೆಸಿದರು. ಲಕ್ಷ್ಮೀ ಅವರು ದೇವಸ್ಥಾನಕ್ಕೆ ಅರ್ಜಿ ಸಲ್ಲಿಸಿದರೆ, ಜಿಲ್ಲಾಧಿಕಾರಿಗೆ ಕಳುಹಿಸಿ ಸ್ಟಾಲ್‌ ಇರುವ ಜಾಗದಲ್ಲೇ ದೇವಸ್ಥಾನದಿಂದಲೇ ಕೊಠಡಿ ನಿರ್ಮಿಸಿಕೊಡುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ದಲಿತ ಸಂಘಟನೆಗಳ ಮುಖಂಡರಾದ ಮೋನಪ್ಪ ಆರ್‌.ಬಿ., ದಿನೇಶ್‌, ಉಮೇಶ್‌ ಅಲೆಕ್ಕಾಡಿ, ಕುಸುಮಾಧರ, ಜಗದೀಶ ಮಲ್ಲೇಶ್‌ ಕುಡೆಕಲ್ಲು, ಸತೀಶ್‌ ಬಿಳಿಯಾರು, ಚಂದ್ರಕಾಂತ ಮೂಡಾಯಿ ತೋಟ, ಉಮೇಶ್‌ ಬೂಡು ಉಪಸ್ಥಿತರಿದ್ದರು.

ಮಲೆಕುಡಿಯರ ಮನವಿ
ಸುಬ್ರಹ್ಮಣ್ಯ ಪರಿಸರದಲ್ಲಿ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಸುಬ್ರಹ್ಮಣ್ಯ ಮಲೆಕುಡಿಯ ಸಮುದಾಯದವರು ಶನಿವಾರ ದೇವಸ್ಥಾನಕ್ಕೆ ಮನವಿ ಸಲ್ಲಿಸಿ ದರು. ಸಮುದಾಯ ಭವನ ನಿರ್ಮಾಣಕ್ಕೂ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next