ಪಾಟ್ನಾ: ಬಿಹಾರದ ಸೀತಾಮರ್ಹಿಯಲ್ಲಿ ದಲಿತ ಮಹಿಳೆಯೊಬ್ಬರನ್ನು ಪೊಲೀಸ್ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಥಳಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ವಿಡಿಯೋದಲ್ಲಿ, ಸಮವಸ್ತ್ರದಲ್ಲಿದ್ದ ರಾಜ್ ಕಿಶೋರ್ ಸಿಂಗ್ ಎಂಬ ಪೊಲೀಸ್ ಅಧಿಕಾರಿಯು ಮಹಿಳೆಯನ್ನು ಸಾರ್ವಜನಿಕವಾಗಿ ಕೋಲಿನಿಂದ ಹೊಡೆಯುವುದನ್ನು ತೋರಿಸುತ್ತದೆ ಮತ್ತು ಇತರರು ನೋಡುತ್ತಾ ನಿಂತಿದ್ದಾರೆ.
ಮಹಿಳೆ ಮತ್ತು ಇನ್ನೊಬ್ಬ ಮಹಿಳೆ ಸಾರ್ವಜನಿಕವಾಗಿ ಜಗಳವಾಡಿದ ನಂತರ ಪೊಲೀಸ್ ಅಧಿಕಾರಿ ಮಹಿಳೆಗೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ವಿಡಿಯೋವನ್ನು ಖಚಿತಪಡಿಸಿಲ್ಲ. ಅಧಿಕಾರಿ ತಪ್ಪಿತಸ್ಥರೆಂದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೀತಾಮರ್ಹಿ ಎಸ್ಪಿ ಮನೋಜ್ ಕುಮಾರ್ ತಿವಾರಿ ಪ್ರತಿಕ್ರಿಯಿಸಿದ್ದಾರೆ. ವೀಡಿಯೊದ ಸತ್ಯಾಸತ್ಯತೆ ಇನ್ನಷ್ಟೇ ತಿಳಿದುಬರಬೇಕಿದೆ.
ಘಟನೆಯ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಪ್ರತಿಕ್ರಿಯಿಸಿ, ಬಿಹಾರದಲ್ಲಿ ಕ್ರಿಮಿನಲ್‌ಗಳು ಸ್ವತಂತ್ರವಾಗಿ ತಿರುಗಾಡುತ್ತಿದ್ದು, ಇನ್ನೊಂದೆಡೆ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.