ಬಾಳೆಹೊನ್ನೂರು: ನರಸಿಂಹರಾಜಪುರ ತಾಲೂಕಿನ 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಕುಟುಂಬಗಳಿಗೆ ನಮೂನೆ 50, 53 ಹಾಗೂ 94 ಸಿ ಮತ್ತು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರೂ ಸರಕಾರ ಹಕ್ಕುಪತ್ರ ವಿತರಿಸಿಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಮರ್ಲೆ ಅಣ್ಣಯ್ಯ ಆರೋಪಿಸಿದರು.
ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರ ಅಧ್ಯಕ್ಷತೆ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರನ್ನು ಅಕ್ರಮ ಸಕ್ರಮ ಸಮಿತಿಅಧ್ಯಕ್ಷರನ್ನಾಗಿ ನೇಮಿಸಿ ಸರಕಾರ ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ. ನೂರಾರು ವರ್ಷಗಳಿಂದ ಅರಣ್ಯ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರ ನೀಡುತ್ತಿಲ್ಲ, ದಲಿತರ ಭೂಮಿ ಖರೀದಿಸಬಾರದೆಂದು ಸರಕಾರದ ಆದೇಶವಿದ್ದರೂ ದಲಿತರ ಭೂಮಿ ಹಾಗೂ ಮನೆಗಳನ್ನು ಖರೀದಿ ಮಾಡುತ್ತಿದ್ದಾರೆ. ಎಸ್ಸಿಗೆ ಮೀಸಲಿಟ್ಟ ಸ್ಮಶಾನ ಜಾಗವನ್ನು ಒತ್ತುವರಿಮಾಡಿದ್ದು, ಈ ಸಂಬಂಧ ಗ್ರಾ.ಪಂ ಮುಂಭಾಗದಲ್ಲಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.
ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮೀಸಲಾತಿ ಹಿಡಿತಗೊಳಿಸಿ ಬೇರೆಯವರನ್ನುಓಲೈಸಲು ಹೊರಟಿದ್ದಾರೆ ಎಂದು ಆರೋಪಿಸಿದರು.ಶೃಂಗೇರಿ ಕ್ಷೇತ್ರದ ವಾಲ್ಮೀಕಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಎಸ್ಸಿ, ಎಸ್ಟಿ ಪಂಗಡದವರನ್ನು ಸರಕಾರವು ಹಿಂದಿನಿಂದಲೂಕಡೆಗಾಣಿಸುತ್ತಾ ಬಂದಿದೆ. ಬುಡಕಟ್ಟು ಜನರಿಗೆ ಪೌಷ್ಟಿಕ ಆಹಾರ ವಿತರಣೆಯಲ್ಲಿ ವಿಳಂಬ, ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ನೀಡುವಲ್ಲಿ ಸರಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆಎಸ್ಸಿ, ಎಸ್ಟಿ ಜನಾಂಗದವರು ಮುಂಬರುವ ಗ್ರಾಪಂ ಚುನಾವಣೆ ಬಹಿಷ್ಕಾರದೊಂದಿಗೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ಜಿಲ್ಲಾ ಸಂಚಾಲಕ ಗಂಗರಾಜು ಮಾತನಾಡಿ, ದಲಿತರ ಭೂಮಿ ಕಭಳಿಸಲು ಭೂ ಸುಧಾರಣಾ ಕಾಯ್ದೆ ಜಾರಿಗೆ ತರುತ್ತಿದ್ದಾರೆ. ರಾಜಕಾರಣಿಗಳಿಗೆ ಬೇಕಾದಂತೆ ಕಾನೂನು ತಿದ್ದುಪಡಿ ಮಾಡಿ ಅನ್ಯಾಯವೆಸಗುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಿಂದಲೂ ಎಸ್ಟಿ ಜನಾಂಗದವರು ಆರಾಧಿಸಿಕೊಂಡು ಬರುತ್ತಿರುವ ಕುಡ್ಲೂರಮ್ಮ ದೇವಸ್ಥಾನಗಳಿಗೆ ಇಲ್ಲಿಯವರೆಗೂ ಸಹಾಯಧನ ನೀಡಿರುವುದಿಲ್ಲ ಎಂದು ತಿಳಿಸಿದರು.
ಸಂಚಾಲಕ ಡಿ.ರಾಮು ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಟುಕುಡಿಗೆ ಗ್ರಾಮದ ಸರ್ವೇ ನಂ.195, ಸರ್ವೇ ನಂ.89, ಬನ್ನೂರು ಗ್ರಾಮದ ಸರ್ವೇ ನಂ.95 ಹಾಗೂ ಹಲಸೂರು ಗ್ರಾಮದ ಕಬ್ಬಿನಮನೆ ಗ್ರಾಮದ ಸರ್ವೇ ನಂ.55 ರಲ್ಲಿ 50ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ಹಾಗೂ ಹಿರೇಗದ್ದೆ ಗ್ರಾಪಂನ 40 ಕುಟುಂಬಗಳಿಗೆ ಕುಡಿಯುವ ನೀರು ಹಾಗೂ ಮೂಲಸೌಕರ್ಯ ಒದಗಿಸಬೇಕು. ಗ್ರಾಪಂ ವ್ಯಾಪ್ತಿಯಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಮಹೇಂದ್ರಸ್ವಾಮಿ, ಹೇಮಂತ್, ಗಂಗಯ್ಯ, ಪ್ರವೀಣ, ನಾಗರಮಕ್ಕಿ ಸುನಂದ, ದೊಡ್ಡಯ್ಯ, ದಸಂಸ ಕಾರ್ಯಕರ್ತರು ಉಪಸ್ಥಿತರಿದ್ದರು.