ದೇವನಹಳ್ಳಿ: ಭೂಮಿ, ವಸತಿ, ವಿದ್ಯಾರ್ಥಿ ವೇತನ ಹಾಸ್ಟೆಲ್‌ಗಳ ಮೂಲಸೌಲಭ್ಯ, ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗಳಿಗೆ ಆಗ್ರಹಿಸಿ, ಜಿಲ್ಲಾ ಮತ್ತು ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ದಲಿತ ಸಂಘರ್ಷ ಸಮಿತಿ ಸಂಘ ಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಶಿಕ್ಷಣತಜ್ಞರಲ್ಲದ ರೋಹಿತ್ ಚಕ್ರ ತೀರ್ಥ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡಿರುವ ಪಠ್ಯಪುಸ್ತಕವನ್ನು ರದ್ದುಗೊಳಿಸಬೇಕು. ಬಡವರ, ದಲಿತರ ಬವಣೆ, ಸಂಕಷ್ಟಗಳು ದಿನದಿನಕ್ಕೂ ಬಿಗಡಾಯಿಸುತ್ತಿವೆ. ನಾಗರಿಕ ಸರ್ಕಾರಗಳು ಎಂದು ಹೇಳಿಕೊಳ್ಳುವ ಜಾತಿಯನ್ನು ಉಸಿರಾಡುವ ಈ ಪ್ರಭುತ್ವ ದಲಿತರ ಅಭಿವೃದ್ಧಿಗೆ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದವೆಂದು ವಂಚನೆಯ ಮಾತು ಆಡುತ್ತಿವೆ. ಅಲ್ಪಸ್ವಲ್ಪ ಕೊಟ್ಟಿರುವುದನ್ನೇ ದೊಡ್ಡಮಟ್ಟದಲ್ಲಿ ಪುಕ್ಕಟೆ ಪ್ರಚಾರವನ್ನು ಲಕ್ಷಾಂತರ ರೂ. ಜಾಹೀರಾತುಗಳ ಮೂಲಕ ನೀಡುತ್ತಿದೆ. ಆದರೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಧ್ಯಯನಗಳು ನೀಡುವ ವಾಸ್ತವ ಚಿತ್ರಣವೇ ಬೇರೆಯಾಗಿದೆ ಎಂದರು.
ಕಾನೂನು ಕ್ರಮ ಜರುಗಿಸಿ: ವಿಭಾಗೀಯ ಸಂಘಟನಾ ಸಂಚಾಲಕ ಕೆ.ಆರ್.ಮುನಿಯಪ್ಪ ಮಾತನಾಡಿ, ಪಿಟಿಸಿಎಲ್ ಕಾಯ್ದೆ ತಿದ್ದುಪಡಿ ಆಗಬೇಕು. ಈಗಾಗಲೇ ನ್ಯಾಯಾಲಯಗಳಲ್ಲಿ ಪರಿಶಿಷ್ಟರ ವಿರುದ್ಧ ನೀಡಿರುವ ತೀರ್ಪು ರದ್ದಾಗಬೇಕು. ಪಿಟಿಸಿಎಲ್ ಕಾಯ್ದೆಯಂತೆ ಮರು ಮಂಜೂರಾತಿದಾರರಿಗೆ ಮಂಜೂರು ಮಾಡ ಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ರಕ್ಷಣಾತ್ಮಕ ಅಧಿಕಾರ ನೀಡಬೇಕು. ಬೇಡ ಜಂಗಮ ಹಾಗೂ ಇತರೆಯವರು ಪಡೆದಿರುವ ಸಾವಿರಾರು ಸುಳ್ಳು ಜಾತಿ ಪತ್ರ ರದ್ದುಪಡಿಸಬೇಕು, ಪಡೆದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮೀಸಲಾತಿ ಪ್ರಮಾಣ ಹೆಚ್ಚಿಸಿ: ಪ.ಜಾತಿ, ವರ್ಗ ಮತ್ತು ಹಿಂದುಳಿದ ಜಾತಿಗಳಿಗೆ ಸೇರಿದ ವಿದ್ಯಾರ್ಥಿಗಳ ತಡೆಹಿಡಿದಿರುವ ವಿದ್ಯಾರ್ಥಿವೇತನ ಕೂಡಲೇ ಮಂಜೂರು ಆಗಬೇಕು. ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ನ್ಯಾಯಮೂರ್ತಿ ನಾಗಮೋಹನದಾಸ್ ನೀಡಿರುವ ವರದಿಯಂತೆ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಳವಾಗಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ನೀಡಿದರು. ಜಿಲ್ಲಾ ಪ್ರಧಾನ ಸಂಚಾಲಕ ಬಿಸ್ನಳ್ಳಿ ಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ಕೊರಳೂರು ಶ್ರೀನಿವಾಸ್, ಜೋಗಿಹಳ್ಳಿ ನಾರಾಯಣಸ್ವಾಮಿ, ಆವತಿ ತಿಮ್ಮರಾಯಪ್ಪ, ರಾಜುಸಣ್ಣಕ್ಕಿ, ಜಿಲ್ಲಾ ಸಮಿತಿ ಸದಸ್ಯ ನಾರಾಯಣಸ್ವಾಮಿ, ನಾಗರಾಜ್, ಡಿ.ಕೆ.ವೇಲು, ಮುತ್ಸಂದ್ರ ಶಂಕರ್, ಸಿ.ಮುನಿ ರಾಜು, ವಿ.ರಮೇಶ್, ಸಿ.ವಿ.ಮೋಹನ್, ಖಜಾಂಚಿ ಸಿ.ಎಂ.ಮುರಳೀಧರ, ಸದಸ್ಯ ವಿ.ವೆಂಕಟೇಶ್ ಇದ್ದರು.