ಮಧುಗಿರಿ: ಸಂವಿಧಾನ ಬದ್ಧವಾದ ಹಕ್ಕುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಅಂಬೇಡ್ಕರ್ ಪುತ್ಥಳಿಯ ಮುಂಭಾಗ ಅಹೋರಾತ್ರಿ ಧರಣಿ ಕೈಗೊಂಡ ಪ್ರೊ.ಬಿ.ಕೃಷ್ಣಪ್ಪ ಬಣದ ದಸಂಸ ಸದಸ್ಯರು ಅಹೋರಾತ್ರಿ ಧರಣಿ ಕುಳಿತರು.
ಸಂವಿಧಾನದ 39ನೇ ವಿಧಿಯಲ್ಲಿ ಭೌತಿಕ ಸಂಪತ್ತಿನ ಒಡೆತನ ಮತ್ತು ನಿಯಂತ್ರಣವು ಪ್ರತಿ ನಾಗರಿಕರಿಗೂ ಹಂಚಿಕೆಯಾಗಬೇಕು. ಆದರೆ ಇದು ಜಾರಿಯಾಗದೆ ಇಂದಿಗೂ ಸಮಾನ ಭೂಮಿ, ಸಂಪತ್ತು ಹಂಚಿಕೆಯಾಗದೆ ಬಡತನ ಹೆಚ್ಚಾಗಿದೆ. ಮೀಸಲಾತಿಯನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂದು ಆರೋಪಿಸಿದರು.
ಹಕ್ಕೋತ್ತಾಯಗಳು: ನಮೂನೆ 50-53 ರಲ್ಲಿ ಅರ್ಜಿ ಹಾಕಿರುವ ಸಾಗುವಳಿ ರೈತರಿಗೆ ಭೂಮಿ ಜೊತೆಗೆ ಸಾಗುವಳಿ ಚೀಟಿ ನೀಡಬೇಕು. ಎ.ಟಿ.ರಾಮಸ್ವಾಮಿ ಹಾಗೂ ಬಾಲಸುಬ್ರಹ್ಮಣ್ಯಂ ರವರು ನೀಡಿರುವ ವರದಿಯ ಆಧಾರದ ಮೇಲೆ ಭೂ ಕಬಳಿಕೆದಾರರ ಮೇಲೆ ಕ್ರಮ ಕೈಗೊಂಡು 30-40 ವರ್ಷದಿಂದ ಸಾಗುವಳಿ ಮಾಡಿರುವ ರೈತರಿಗೆ ನ್ಯಾಯ ಒದಗಿಸಬೇಕು. ನ್ಯಾ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿ ಪ.ಜಾತಿಗೆ ಒಳ ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ದಲಿತ ಸಮುದಾಯದ ಮೇಲೆ ಜರುಗುತ್ತಿರುವ ದೌರ್ಜನ್ಯವನ್ನು ಕಾನೂನು ಬದ್ಧವಾಗಿ ಹತ್ತಿಕಬೇಕು ಎಂದು ಒತ್ತಾಯಿಸಲಾಯಿತು.
ಧರಣಿ: ಭೂ ಸುಧಾರಣಾ ಕಾಯ್ದೆ, ಭೂ ಮಂಜೂರಾತಿ ಕಾಯ್ದೆ, ದೌರ್ಜನ್ಯ ವಿರೋಧಿ ಕಾಯ್ದೆಗಳನ್ನು ಯಥಾ ವತ್ತಾಗಿ ಜಾರಿಗೊಳಿಸಲು ಸರ್ಕಾರಗಳು ವಿಫಲವಾಗಿದ್ದು, ದಲಿತ ಸಮಾಜದ ಮತಗಳನ್ನಷ್ಟೇ ಬಯಸುತ್ತಿವೆ. ಸಮಾಜದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಸರ್ಕಾರಗಳು ನಿರ್ಲಕ್ಷಿಸುತ್ತಿದ್ದು, ಇದರ ವಿರುದ್ಧ ಧರಣಿ ಕೈಗೊಳ್ಳಲಾಗಿದೆ ಎಂದು ದಲಿತ ಮುಖಂಡ ದೊಡ್ಡೇರಿ ಕಣಿಮಯ್ಯ ಹೇಳಿದರು.
ಧರಣಿಯಲ್ಲಿ ದಲಿತ ಮುಖಂಡರಾದ ದೊಡ್ಡೇರಿ ಡಾ.ಕಣಿಮಯ್ಯ, ಸಿದ್ದಾಪುರ ರಂಗಶಾಮಣ್ಣ, ದೊಡ್ಡೇರಿ ಮಹಲಿಂಗ, ತಿಪ್ಪೇಸ್ವಾಮಿ, ಶಿವಣ್ಣ, ಸಂಜೀವಯ್ಯ, ರಂಗನಾಥ್, ಮಂಜುನಾಥ್, ಮೈಲಾರಪ್ಪ, ತಾಡಿ ನಾಗರಾಜು ಇತರರು ಇದ್ದರು.