Advertisement

ಗುಂಡ್ಲುಪೇಟೆ ದಲಿತ ವ್ಯಕ್ತಿಯ ಬೆತ್ತಲೆ ಮೆರವಣಿಗೆ: ಸಿಎಂ ಖಂಡನೆ

09:56 AM Jun 13, 2019 | Vishnu Das |

ಬೆಂಗಳೂರು: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ವೀರನ ಪುರದಲ್ಲಿ ದೇವರ ವಿಗ್ರಹ ಧ್ವಂಸಗೊಳಿಸಿದ್ದಾನೆ ಎಂಬ ಆರೋಪದಲ್ಲಿ 38 ರ ಹರೆಯದ ದಲಿತ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಥಳಿಸಿದ ಕೃತ್ಯವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಖಂಡಿಸಿದ್ದು, ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದಾರೆ.

Advertisement

ಸಿಎಂ ಖಂಡನೆ
‘ಗುಂಡ್ಲಪೇಟೆ ತಾಲ್ಲೂಕಿನಲ್ಲಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಅತ್ಯಂತ ಅಮಾನವೀಯ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಸಮಾಜದಲ್ಲಿ ಜಾತಿ ವೈಷಮ್ಯ ಇನ್ನೂ ಮುಂದುವರಿದಿರುವುದು ದುರದೃಷ್ಟಕರ. ಇಂಥ ಕೃತ್ಯಗಳನ್ನು ಒಕ್ಕೊರಲಿನಿಂದ ವಿರೋಧಿಸಬೇಕು.’ ಎಂದು ಟ್ವೀಟ್‌ ಮಾಡಿದ್ದಾರೆ.

ತಡವಾಗಿ ಬೆಳಕಿಗೆ
ಘಟನೆ ಜೂನ್‌ 2 ರಂದು ತಡರಾತ್ರಿ ನಡೆದಿದ್ದು, ಸೋಮವಾರ ಸಾಮಾಜಿಕ ತಾಣಗಳಲ್ಲಿ ಅಮಾನವೀಯ ಹಲ್ಲೆ ನಡೆಸಿದ ದೃಶ್ಯಗಳು ವೈರಲ್‌ ಆಗಿದ್ದವು. ಆ ಬಳಿಕ ಹಲ್ಲೆಗೊಳಗಾದ  ವ್ಯಕ್ತಿಯ ಸಂಬಂದಿಯೊಬ್ಬರು ಗುಂಡ್ಲುಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ದರೋಡೆಕೋರರಿಂದ ತಪ್ಪಿಸಿಕೊಂಡು ದೇವಸ್ಥಾನ ಪ್ರವೇಶ

Advertisement

ಮೈಸೂರಿನಿಂದ ರಾತ್ರಿ ಸ್ಕೂಟರ್‌ನಲ್ಲಿ ಬರುತ್ತಿದ್ದ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಚಿನ್ನದ ಸರ ಮತ್ತು ಹಣವನ್ನು ಕಸಿದಿದ್ದಾರೆ. ಬಳಿಕ ಮಾಡ್ರಹಳ್ಳಿ ಬಳಿಯಿರುವ ಕಬ್ಬೆಕಟ್ಟೆ ಶನೇಶ್ವರ ದೇವಸ್ಥಾನದ ಆವರಣಕ್ಕೆ ಬಂದು ಮಲಗಿದ್ದರು. ಬೆಳಗ್ಗೆ ಅರ್ಚಕರು ಬಂದಾಗ ದಲಿತನೆಂದು ತಿಳಿದು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಹಲ್ಲೆಗೊಳಗಾದ ವ್ಯಕ್ತಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ.

ನಾಲ್ವರು ಪರಾರಿ
ಪ್ರಕರಣಕ್ಕೆ ಸಂಬಂಧಿಸಿ ಅರ್ಚಕ ಶಿವಪ್ಪ ಸೇರಿ ಇಬ್ಬರನ್ನು ಪೊಲೀರು ಬಂಧಿಸಿದ್ದು, ಇನ್ನುಳಿದ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next