Advertisement
ಮುಂಬೈ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ನನ್ನ ಮಗ ವಿಶಾಲ್, ಈಚೆಗೆ Dalit Millionaires ಎಂಬ ಇಂಗ್ಲಿಷ್ ಪುಸ್ತಕ ತಂದು ಇದನ್ನು ಓದಲೇಬೇಕು ಎಂದು ನನಗೆ ಆಜ್ಞೆಯನ್ನೇ ಮಾಡಿದ. ಬಡತನ, ಜಾತಿ ಕೀಳರಿಮೆ, ಉಳ್ಳವರ ದರ್ಪ, ಅಧಿಕಾರಿಗಳ ಕಿರುಕುಳ ಎಲ್ಲವನ್ನೂ ಧೈರ್ಯವಾಗಿ ಗೆದ್ದು ಮುಂದೆ ಬಂದ 15 ಯುವ ಉದ್ಯಮಿಗಳ ಸಾಹಸದ ಕಥೆಗಳು ಈ ಪುಸ್ತಕದಲ್ಲಿವೆ. ಈ ಕೃತಿಯ ಪ್ರತಿಯೊಂದು ಲೇಖನ ಹೊಸ ಜಗತ್ತನ್ನು ತೆರೆದಿಡುತ್ತದೆ. ಇನ್ಫೋಸಿಸ್‌ನ ನಂದನ್ ನಿಲೇಕಣಿ ಈ ಪುಸ್ತಕ ಮೆಚ್ಚಿ ಒಂದು ಟಿಪ್ಪಣಿ ಕೂಡ ಬರೆದಿದ್ದಾರೆ ಎಂದು ವಿಶಾಲ್ ವಿವರಿಸಿದ. ಅವನ ಮಾತು ಕೇಳಿ ತುಂಬ ಸಂತೋಷವಾಯಿತು. ಎಲ್ಲ ಒತ್ತಡಗಳನ್ನು ಪಕ್ಕಕ್ಕೆ ಸರಿಸಿ ಬಹಳ ಆಸಕ್ತಿಯಿಂದ ಓದಿದೆ.
Related Articles
Advertisement
ತಮ್ಮ ಹುಟ್ಟೂರಿನಿಂದ ಆಗಮಿಸಿದ ಹಿರಿಯರನ್ನು ಉದ್ಯಮಿ ಅಶೋಕ್ ಖಾಡೆ ತುಂಬ ಪ್ರೀತಿ , ಗೌರವದಿಂದ ಸ್ವಾಗತಿಸಿದರು. ಸ್ವತಃ ಉಪಹಾರ, ಟೀ ಕೊಟ್ಟು ಅತಿಥಿ ಸತ್ಕಾರ ಮಾಡಿದರು. ಎಲ್ಲ ಶಿಷ್ಟಾಚಾರ ಮುಗಿದ ಮೇಲೆ ಹಿರಿಯರು ತಾವು ಬಂದ ಉದ್ದೇಶ ವಿವರಿಸಿ “ದೇವಸ್ಥಾನ ಜೀರ್ಣೋದ್ಧಾರಕ್ಕೆ 10 ಲಕ್ಷ ರೂ. ದೇಣಿಗೆ ನೀಡಬೇಕು’ ಎಂದು ಮನವಿ ಸಲ್ಲಿಸಿದರು.
ಅಶೋಕ್ ತಮ್ಮ ಚೆಕ್‌ಬುಕ್ ತಂದು 1 ಕೋಟಿ ರೂ. ಚೆಕ್ ಬರೆದು ಹಿರಿಯರ ಕೈಗೆ ನೀಡಿದರು! ಹತ್ತು ಲಕ್ಷ ರೂ. ಕೇಳಿದರೆ ಐದು ಲಕ್ಷವಾದರೂ ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದ ಹಿರಿಯರಿಗೆ ತುಂಬ ಅಚ್ಚರಿಯಾಯಿತು. “”ಸಿದ್ದೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮಾಡಿ ಚೆನ್ನಾಗಿ ಕಟ್ಟಬೇಕು. ಇನ್ನೂ ಹೆಚ್ಚಿಗೆ ಹಣ ಬೇಕಾದರೆ ನಾನು ಕೊಡಲು ಸಿದ್ಧ” ಎಂದು ಅಶೋಕ್ ಹೇಳಿದರು. ಸ್ವಲ್ಪ ತಡೆದು “”ನನ್ನದೊಂದು ಸಲಹೆ ಇದೆ. ನೀವು ಹಿರಿಯರು ಪಾಲಿಸಬೇಕು” ಎಂದು ಅಶೋಕ್ ಕೇಳಿಕೊಂಡರು.
“”ಖಂಡಿತವಾಗಿ ಪಾಲಿಸುತ್ತೇವೆ. ಹೇಳಿ, ಏನು ನಿಮ್ಮ ಸಲಹೆ?” ಎಂದು ಎಲ್ಲ ಹಿರಿಯರು ಒಂದೇ ಧ್ವನಿಯಲ್ಲಿ ಕೇಳಿದರು. ಅಶೋಕ್ ಒಂದು ಕ್ಷಣ ಮೌನವಾಗಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ನಿಧಾನವಾಗಿ ಹೇಳಿದರು-“”ನಮ್ಮದು ದಲಿತ ಕುಟುಂಬ. ನಾನು ಚಮ್ಮಾರನ ಮಗ ಎಂಬ ಕಾರಣಕ್ಕೆ ಸಿದ್ದೇಶ್ವರ ಗುಡಿಯ ಪ್ರವೇಶಕ್ಕೆ ಬಿಟ್ಟಿಲ್ಲ. ನನಗೆ ಸಿದ್ದೇಶ್ವರ ದರ್ಶನವೇ ಆಗಿಲ್ಲ. ನನ್ನ ತಂದೆಗೆ ಈ ಗುಡಿಯ ರಸ್ತೆಯಲ್ಲಿ ಬರಲೂ ಅವಕಾಶ ಸಿಕ್ಕಿಲ್ಲ. “ಗುಡಿಯಲ್ಲಿ ಎಲ್ಲರಿಗೂ ಪ್ರವೇಶವಿದೆ’ ಎಂದು ಬೋರ್ಡ್ ಹಾಕಿರಿ. ಹಾಗೆಯೇ ಎಲ್ಲರ ಪ್ರವೇಶಕ್ಕೆ ಮುಕ್ತ ಅವಕಾಶ ಮಾಡಿರಿ” ಎಂದರು ಅಶೋಕ್.ದೇವಸ್ಥಾನ ಜೀರ್ಣೋದ್ಧಾರ ಕೆಲಸ ಸಕಾಲಕ್ಕೆ ಮುಗಿಯಿತು. ಈಗ ಗುಡಿಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಲಭ್ಯವಾಗಿದೆ. ಊರ ಹಿರಿಯರೆಲ್ಲ ಸೇರಿ ಅಶೋಕ್ ಅವರನ್ನು ಗ್ರಾಮಕ್ಕೆ ಆಮಂತ್ರಿಸಿ ಗುಡಿಯಲ್ಲಿಯೇ ಸನ್ಮಾನಿಸಿದರು. ವಿದ್ಯಾರ್ಥಿಯಾಗಿದ್ದಾಗ ಗುಡಿ ಪ್ರವೇಶ ನಿರಾಕರಿಸಿದವರೇ ಈಗ ಗುಡಿಯ ಒಳಗಡೆ ಕರೆದು ಸನ್ಮಾನಿಸಿದ್ದಕ್ಕೆ ಅಶೋಕ್ ಅವರಿಗೆ ಬಹಳ ಸಂತೋಷವಾಯಿತು. ಅಶೋಕ್ ಅವರು ಗ್ರಾಮದ ನೂರಾರು ಬಡ ಮಕ್ಕಳ ಓದಿಗೆ ಆರ್ಥಿಕ ನೆರವು ನೀಡುತ್ತಿದ್ದಾರೆ. ಈ ಗ್ರಾಮದಲ್ಲಿ ಅಸ್ಪೃಶ್ಯತೆಯ ಆಚರಣೆ ಪೂರ್ಣ ತೊಡೆದು ಹಾಕಲಾಗಿದೆ. ತಮ್ಮ ಗಳಿಕೆಯ ಸಂಪತ್ತನ್ನು ಸಾಮಾಜಿಕ ಕ್ರಾಂತಿ ಹಾಗೂ ಬದಲಾವಣೆಗೆ ಅಶೋಕ್ ಅವರು ಬಳಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅಶೋಕ್ ಅವರ ತಂದೆ ಮೋಚಿಯಾಗಿ ಕೆಲಸ ಮಾಡಿ ಬದುಕು ಸಾಗಿಸಿದರು. ಒಂದು ಮರದ ಕೆಳಗೆ ಕುಳಿತು ಅವರು ಕೆಲಸ ಮಾಡುತ್ತಿದ್ದರು. ಅಶೋಕ್ ಅವರು ಇಂದಿಗೂ ಆ ಮರವನ್ನು ಸ್ಮರಿಸುತ್ತಾರೆ ಮತ್ತು ಆರಾಧಿಸುತ್ತಾರೆ. ಅಮೆರಿಕದ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಅವರ ತಂದೆ ಕೂಡ ಮೋಚಿಯಾಗಿ ಕೆಲಸ ಮಾಡುತ್ತಿದ್ದರು. ಅಪಮಾನ ಮಾಡುವ ಉದ್ದೇಶದಿಂದ ಅಮೆರಿಕೆಯ ಲೋಕಸಭೆಯಲ್ಲಿ ಕೆಲವು ಸದಸ್ಯರು “ಲಿಂಕನ್ ಮೋಚಿಯ ಮಗ’ ಎಂದು ಹೀಯಾಳಿಸಿ ಮಾತನಾಡಿದರು. ಲಿಂಕನ್ ಸ್ವಲ್ಪವೂ ವಿಚಲಿತರಾಗದೆ “”ಹೌದು ನಾನು ಮೋಚಿಯ ಮಗ. ನನ್ನ ತಂದೆ ಅತ್ಯಂತ ಶ್ರದ್ಧೆಯಿಂದ ಕಲಾತ್ಮಕವಾಗಿ ಚಪ್ಪಲಿ ಹೊಲಿಯುತ್ತಿದ್ದರು. ಇದು ನನಗೆ ಹೆಮ್ಮೆಯ ಸಂಗತಿ!” ಎಂದು ಉತ್ತರಿಸಿದರು. ವಿರೋಧಿಸಿದವರ ಧ್ವನಿ ಅಡಗಿತು. ದಲಿತ ಸಮಾಜಕ್ಕೆ ಸೇರಿದ ಇನ್ನೊಬ್ಬ ಉದ್ಯಮಿ ಭಿಂಗರದೇವಯ್ಯ ಅವರು “ಖಂಡೋಬಾ ಪ್ರಸನ್ನ ಸಹಕಾರಿ ಸಕ್ಕರೆ ಕಾರ್ಖಾನೆ’ ಕಟ್ಟಿದ ಕತೆಯನ್ನು ಲೇಖಕರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಭಿಂಗರದೇವಯ್ಯಗೆ ಕಾರ್ಖಾನೆ ಕಟ್ಟುವುದಕ್ಕೆ ಮೊದಲು ಅನುಮತಿ ನಿರಾಕರಿಸಲಾಗುತ್ತದೆ. ಅವರು ಅರ್ಜಿಯನ್ನು ಹಿಡಿದುಕೊಂಡು ಅಧಿಕಾರಿಗಳ ಬಳಿ ಹೋದರೆ ಯಾರೂ ಮುಖ ಎತ್ತಿ ನೋಡಲಿಲ್ಲ. ದಲಿತ ಎನ್ನುವ ಕಾರಣಕ್ಕೆ ಅವರ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಒಪ್ಪಿಗೆ ಸಿಗದ ಕಾರಣ ದೇವಯ್ಯ, ಸಕ್ಕರೆ ಕಾರ್ಖಾನೆಯ ಬದಲಾಗಿ ಒಂದು ಸಣ್ಣ ಡಿಸ್ಟಿಲರಿ ಕಟ್ಟಿದರು. ಈ ಸಾಧನೆಯನ್ನು ಗಮನಿಸಿದ ಸರ್ಕಾರಿ ಅಧಿಕಾರಿಗಳು ಸಕ್ಕರೆ ಕಾರ್ಖಾನೆ ಕಟ್ಟುವುದಕ್ಕೆ ಅನುಮತಿ ನೀಡಿದರು. ಭಿಂಗರದೇವಯ್ಯ ಅವರು ಈಗ ಮಹಾರಾಷ್ಟ್ರದ ನಂಬರ್ 1 ಕೈಗಾರಿಕಾ ಉದ್ಯಮಿ ಯಾಗಿ ಬೆಳೆದಿದ್ದಾರೆ. ಕಾರ್ಖಾನೆಯ ಸುತ್ತಮುತ್ತಲಿನ ಬಡಮಕ್ಕಳಿಗೆ ಶಿಕ್ಷಣಕ್ಕೆ ಉದಾರವಾಗಿ ನೆರವು ನೀಡುತ್ತಿದ್ದಾರೆ. 40 ದಲಿತ ಯುವತಿಯರನ್ನು ದತ್ತು ಪಡೆದು ಸ್ನಾತಕೋತ್ತರದವರೆಗೆ ಓದಿಸಿದ್ದಾರೆ! ಕಲ್ಪನಾ ಸರೋಜ್ ಮತ್ತು ಸಾವಿತ್ರಿಬೇನ್ ಪರಮಾರ ಎಂಬ ಇಬ್ಬರು ಮಹಿಳೆಯರು ಮುಂಬೈ ನಗರದ ಪ್ರಮುಖ ಉದ್ಯಮಿಗಳಾಗಿ ಬೆಳೆದಿರುವ ಕಥೆ ನನ್ನ ಮನಸ್ಸನ್ನು ಆಳವಾಗಿ ತಾಕಿದೆ. ಕಲ್ಪನಾ ಅಂಕೋಲಾದವರು. ತಮ್ಮ 13ನೆಯ ವಯಸ್ಸಿಗೆ ವಿವಾಹವಾಗಿ ಮುಂಬೈಗೆ ತೆರಳಿದರು. ಕೌಟುಂಬಿಕ ಕಿರುಕುಳ ತಾಳಲಾರದೆ ವಿಚ್ಛೇದನ ಪಡೆದರು. ಮುಂದೆ ದಿನಕ್ಕೆ 2 ರೂ ಪಗಾರ ಪಡೆದು ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದರು. ನಂತರದ ವರ್ಷಗಳಲ್ಲಿ ಹಣ ಕೂಡಿಟ್ಟು ಮುಂಬೈ ನಗರದ ಕಲ್ಯಾಣದಲ್ಲಿ 2.50 ಲಕ್ಷ ರೂ. ಕೊಟ್ಟು ಒಂದು ಸಣ್ಣ ನಿವೇಶನ ಖರೀದಿಸಿದರು. ಸಹೋದರನ ನೆರವಿನಿಂದ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಕಟ್ಟಡ ನಿರ್ಮಿಸಿದರು. ವಿಚಿತ್ರ ಎಂದರೆ ಅದು 4.5 ಕೋಟಿಗೆ ಮಾರಾಟ ವಾಯಿತು. ಇದೇ ಅವರ ಟರ್ನಿಂಗ್ ಪಾಯಿಂಟ್ ಆಯಿತು. ಅವರಿಗೆ ಮುಂಬೈ ನಗರದ ಭೂಗತ ಪಾತಕಿಗಳು ಕಿರುಕುಳ ಕೊಡತೊಡಗಿದರು. ಕಲ್ಪನಾ ನೇರವಾಗಿ ಸೋನಿಯಾ ಗಾಂಧಿ ಅವರನ್ನು ಭೇಟಿಮಾಡಿ ರಕ್ಷಣೆಗೆ ಮನವಿ ಮಾಡಿದರು. ನಂತರ ಅವರು “ಕಮಾನಿ ಟ್ಯೂಟ್ಸ್’ ಕಂಪನಿ ಕಟ್ಟಿದ್ದು. ಅಹಮ್ಮದನಗರ ಜಿಲ್ಲೆಯಲ್ಲಿ ಎರಡು ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿದ್ದಾರೆ. ಹೆಚ್ಚಿನ ಶೇರ್ ಹಣವನ್ನೂ ಅವರೇ ಹೂಡಿದ್ದಾರೆ. ಅವರಿಗೆ 2013ರಲ್ಲಿ ಪದಶ್ರೀ ಪ್ರಶಸ್ತಿ ಬಂದಿದೆ. ಸಾವಿತ್ರಿಬೇನ್ ಪರಮಾ ಕಥೆ, ಮನೆಗೆಲಸ ಮಾಡಿ ಬದುಕುವವರಿಗೆ ಒಂದು ಸ್ಫೂರ್ತಿಯ ಸಂದೇಶವಾಗಿದೆ. ಪರಮಾರವರ ಪತಿ ಅಹಮದಾಬಾದ್‌ನಲ್ಲಿ ಸಣ್ಣ ವಾಹನ ಚಾಲಕರಾಗಿ ದುಡಿಯುತ್ತಿದ್ದರು. ಅಲ್ಪ ಸಂಬಳದಲ್ಲಿಯೇ ಸಾವಿತ್ರಿ ಬೇನ್ ಕುಟುಂಬವನ್ನು ಸಲಹುತ್ತಿದ್ದರು. ಅವರ ಅಕ್ಕ ಉರುವಲ ಕಟ್ಟಿಗೆ ಮತ್ತು ಕಲ್ಲಿದ್ದಲು ವ್ಯಾಪಾರ ಮಾಡುತ್ತಿದ್ದರು. ಸಾವಿತ್ರಿ ಬೇನ್ ಅವರಿಂದ ಕಟ್ಟಿಗೆ ಮತ್ತು ಕಲ್ಲಿದ್ದಲು ಕೈಗಡ ಪಡೆದು ಮಾರಾಟ ಮಾಡತೊಡಗಿದರು. ಬ್ಯಾಂಕಿನಿಂದ ಸಾಲ ಪಡೆದು ಕಲ್ಲಿದ್ದಲು ಮಾರಾಟ ಪ್ರಮಾಣವನ್ನು ವಿಸ್ತರಿಸಿದರು. ಇವರ ಪರಿಶ್ರಮವನ್ನು ಗಮನಿಸಿದ ದಲಿತ ವರ್ಗಕ್ಕೆ ಸೇರಿದ ಕೆಲವು ಹಿರಿಯರು ಕಲ್ಲಿದ್ದಲು ಆಮದು ಮತ್ತು ರಫ್ತು ವ್ಯವಹಾರ ಮಾಡಲು ಸಲಹೆ ಮಾಡಿದರು. ಬ್ಯಾಂಕಿನವರು ಸಾಲ ನೀಡಲು ನಿರಾಕರಿಸಿದರು. ಖಾಸಗಿ ವ್ಯಕ್ತಿಗಳ ಬಳಿ ಹೆಚ್ಚು ಬಡ್ಡಿದರದಲ್ಲಿ ಸಾಲ ಪಡೆದು ವ್ಯವಹಾರ ಅಭಿವೃದ್ಧಿ ಪಡಿಸಿದರು. ಈ ಉದ್ಯಮ ಎಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ ಎಂದರೆ ಇಂದು ಅವರ ಬಳಿ 200 ಯುವಕರು ದುಡಿಯುತ್ತಿದ್ದಾರೆ. ಈಚೆಗೆ ಅವರು ಸೆರಾಮಿಕ್ಸ್ ಕಾರ್ಖಾನೆ ಸ್ಥಾಪಿಸಿದ್ದಾರೆ. ಈ ಕಾರ್ಖಾನೆಯ ಉದ್ಘಾಟನೆ ಸಂದರ್ಭದಲ್ಲಿ “ನೀವು ಉದ್ಯಮಿಯಾಗಿ ಬೆಳೆಯುವುದಕ್ಕೆ ಯಾರು ಸ್ಫೂರ್ತಿ ?’ ಎಂದು ಕೇಳಿದಾಗ 72 ವರ್ಷದ ಈ ಅಜ್ಜಿ ಬಾಯ್ತುಂಬ ನಗುತ್ತ ಹೇಳಿದರು- “ನನಗೆ ನಾನೇ ಸ್ಫೂರ್ತಿ. ಹೊರಗೆ ಸ್ಫೂರ್ತಿ ಯನ್ನು ಹುಡುಕಿದರೆ ಸಿಗುವುದಿಲ್ಲ. ಅದು ಅಂತರಂಗದ ಆಸ್ತಿ’. ಈ ಮಾತು ಉದ್ಯಮಿಯಾಗ ಬಯಸುವವರಿಗೆಲ್ಲ ಅನ್ವಯಿಸುತ್ತದೆ. ರತಿಲಾಲ ಮಕ್ವಾನ್, ಮಲ್ಕಿತ್ ಚಾಂದ, ಭಗವಾನ ಗಾವಿ, ಹರ್ಷ ಭಾಸ್ಕರ್, ದೇವಜಿಭಾಯಿ ಮಕ್ವಾನ್, ಹರಿಕೃಷ್ಣ ಪಿಪ್ಪಲ್, ಅತುಲ್ ಪಾಸ್ವಾನ್ ದೇವಕಿನಂದನ, ಜೆ.ಎಸ್. ಫಲಿಯಾ, ಶರತ್‌ಬಾಬು ಮತ್ತು ಸಂಜಯ ಕ್ಷೀರಸಾಗರ…ಹೀಗೆ ಉದ್ಯಮಿಗಳಾಗಿ ಬೆಳೆದವರ ಕಥೆಗಳು ತುಂಬ ರೋಚಕವಾಗಿವೆ. ದಲಿತ ವರ್ಗದ ಉದ್ಯಮಿಗಳೆಲ್ಲ ಸೇರಿ ದಲಿತ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಕಟ್ಟಿರುವುದು ಒಂದು ಉತ್ತಮ ಬೆಳವಣಿಗೆ. ಈ ಸಂಸ್ಥೆ ದೇಶದ ದಲಿತ ವರ್ಗದ ಯುವಕರು ಉದ್ಯಮಿಗಳಾಗಿ ಬೆಳೆಯುವುದಕ್ಕೆ ನೆರವಾಗುತ್ತಿದೆ. ಬ್ಯಾಂಕ್‌ಗಳನ್ನು, ಶಿಕ್ಷಣ ಸಂಸ್ಥೆಗಳನ್ನು, ದವಾಖಾನೆಗಳನ್ನು ದಲಿತ ಉದ್ಯಮಿಗಳು ಕಟ್ಟಿದ್ದಾರೆ. ಇವುಗಳ ಮೂಲಕ ಜಾತಿ ಮತ್ತು ಧರ್ಮದ ಪರಿಗಣನೆ ಇಲ್ಲದೆ ಎಲ್ಲರಿಗೂ ನೆರವಾಗುತ್ತಿದ್ದಾರೆ. ಕೈಗಾರಿಕೆಗಳು ಜಾತ್ಯತೀತ ಸಂಸ್ಥೆಗಳು. ಕೌಶಲ್ಯ ಇದ್ದವರಿಗೆ ಕಾರ್ಖಾನೆಗಳ ಬಾಗಿಲುಗಳು ಸದಾ ತೆರೆದಿರುತ್ತವೆ. ಈ ಕೃತಿಯಲ್ಲಿ ಮೂಡಿ ಬಂದ ನಾಯಕರೆಲ್ಲ ಹುಟ್ಟಿನಿಂದ ಶ್ರೀಮಂತರಲ್ಲ. ಆದರೆ ಅವರಿಗೆ ಕನಸುಗಳಿದ್ದವು. ಹಣ ಒಂದೇ ಬಂಡವಾಳ ಅಲ್ಲ. ಅದಮ್ಯ ಉತ್ಸಾಹ, ಸಾಧಿಸುವ ಹಂಬಲ, ಕನಸುಗಳು ಬಹಳ ಮುಖ್ಯ ಎಂಬುದನ್ನು ಈ ಕೃತಿ ಸ್ಪಷ್ಟವಾಗಿ ಹೇಳುತ್ತದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಇವರೆ ಲ್ಲರು ತಾವು ಗಳಿಸಿದ ಸಂಪತ್ತನ್ನು ಸಮಾಜದ ಉನ್ನತಿಗೆ ಬಳಸುತ್ತಿರುವುದು ಪ್ರೇರಣಾದಾಯಕ ಸಂಗತಿ. -ಮುರುಗೇಶ ಆರ್ ನಿರಾಣಿ
ಶಾಸಕರು, ಅಧ್ಯಕ್ಷರು ನಿರಾಣಿ ಉದ್ಯಮ ಸಮೂಹ