ನವದೆಹಲಿ: ದಲಿತ ಸಮುದಾಯದಿಂದ ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮಕ್ಕೆ ಮತಾಂತರವಾದರೆ ಅಂಥವರು ಪರಿಶಿಷ್ಟ ಜಾತಿ (ಎಸ್ಸಿ) ಮಾನ್ಯತೆಯನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗೆಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ.
ಅಸ್ಪೃಶ್ಯತೆಯನ್ನು ಪ್ರತಿಬಂಧಿಸುವ ಕಾಯ್ದೆ ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತೆ ರಚಿಸಿ, ಜಾರಿ ಮಾಡಲಾಗಿದೆ ಎಂದು ಸರ್ಕಾರ ಅರಿಕೆ ಮಾಡಿದೆ. ಜತೆಗೆ ಈ ಎರಡು ಧರ್ಮಗಳಲ್ಲಿ ಅಸ್ಪೃಶ್ಯತೆ ಎಂಬ ಪರಿಕಲ್ಪನೆಯೇ ಇಲ್ಲ. ಹೀಗಾಗಿಯೇ ಅವರು ಈ ಧರ್ಮಗಳಿಗೆ ಮತಾಂತರಗೊಂಡಿರಬಹುದು. ಸಿಖ್ ಅಥವಾ ಬೌದ್ಧ ಧರ್ಮಕ್ಕೆ ಮತಾಂತರಗೊಂಡವರಿಗೆ ಮತ್ತು ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳಿಗೆ ಮತಾಂತರಗೊಂಡವರಿಗೆ ಹೋಲಿಕೆ ಮಾಡಲೇಬಾರದು. 1956ರಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸುವ ಬಗ್ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಸ್ವಯಂಪ್ರೇರಿತರಾಗಿ ಅದನ್ನು ಸ್ವೀಕರಿಸಿದ್ದರು ಎಂದು ಪ್ರಮಾಣ ಪತ್ರದಲ್ಲಿ ಉಲ್ಲೇಖೀಸಲಾಗಿದೆ. ಈ ಅಂಶವನ್ನು ಕ್ರಿಶ್ಚಿಯನ್ ಮತ್ತು ಇಸ್ಲಾಂ ವಿಚಾರದಲ್ಲಿ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದೆ ಕೇಂದ್ರ ಸರ್ಕಾರ.