ಬಳ್ಳಾರಿ: ಕಾಂಗ್ರೆಸ್‌ನವರಿಗೆ ತಾಕತ್ತಿದ್ದರೆ ದಲಿತ ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ನಾಯಕರನ್ನು ನೇಮಿಸಲಿ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಸವಾಲೆಸೆದಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಯ್ಬಿಟ್ಟರೆ ಜಾತ್ಯತೀತ ಎನ್ನುವ ಕಾಂಗ್ರೆಸ್, ಮುಂದಿನ ಮುಖ್ಯಮಂತ್ರಿಯಾಗಿ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ| ಜಿ. ಪರಮೇಶ್ವರ್ ಹೆಸರನ್ನು ಘೋಷಿಸಲಿ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪೂರ್ಣ ಜಾತಿ ರಾಜಕಾರಣದಲ್ಲಿ ತೊಡಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿಯವರ ಬಗ್ಗೆ ಬಾಯಿಗೆ ಬಂದಂತೆ ಟೀಕಿಸುವುದನ್ನು ಬಿಡಲಿ. ತಾವೊಬ್ಬ ಮಾಜಿ ಮುಖ್ಯಮಂತ್ರಿ ಎಂಬುದನ್ನೂ ಮರೆತಿರುವ ಸಿದ್ದರಾಮಯ್ಯನವರು ಸೂಟ್‌ಕೇಸ್, ಗಿರಾಕಿ, ಕಂಬಳಿ ಮುಂತಾದ ಭಾಷೆ ಬಳಸುತ್ತಿದ್ದಾರೆ. ಜಾತ್ಯತೀತ ವ್ಯಕ್ತಿ ಎಂದು ಹೇಳಿಕೊಳ್ಳುವ ಇವರು ಈ ರೀತಿ ಜಾತಿಗಳ ಬಗ್ಗೆ ಮಾತನಾಡಿ ಯಾರಿಗೆ ಆದರ್ಶವಾಗಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಅವರನ್ನು ಡೀಲಿಂಗ್ ಸಿಎಂ, ಪ್ರಧಾನಿಯವರನ್ನು ಗಿರಾಕಿ ಎನ್ನುವ ಮೂಲಕ ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವವನ್ನು ಎಂಬುದನ್ನು ಜನರೆದುರು ಅನಾವರಣಗೊಳಿಸಿದ್ದಾರೆ. ಕೇವಲ ಚುನಾವಣೆ ಬಂದಾಗ ಮಾತ್ರ ಅಹಿಂದ ಹೆಸರಲ್ಲಿ ಎಲ್ಲ ಜಾತಿಗಳು ಸಿದ್ದರಾಮಯ್ಯರಿಗೆ ನೆನಪಾಗುತ್ತವೆ ಎಂದರು.
ಮುಂದೊಂದು ದಿನ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾದರೆ ನನಗೂ ಅವಕಾಶ ಸಿಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.