ಪಣಜಿ : ‘ದಲಾಯಿ ಲಾಮಾ ಪರಂಪರೆಯು ಈಗ ರಾಜಕೀಯವಾಗಿ ಅಪ್ರಸ್ತುತವಾಗಿದೆ. ಆದುದರಿಂದ ಈ ಪ್ರಾಚೀನ ಪರಂಪರೆಯನ್ನು ಉಳಿಸಿಕೊಳ್ಳಬೇಕೋ ಬೇಡವೋ ಎಂಬುದನ್ನು ಟಿಬೆಟ್ ಜನರೇ ತೀರ್ಮಾನಿಸಬೇಕು’ ಎಂದು 83ರ ಹರೆಯದ ಟಿಬೆಟ್ ಬೌದ್ಧ ಧರ್ಮಗುರು ದಲಾಯಿ ಲಾಮಾ ಹೇಳಿದ್ದಾರೆ.
“ಚೀನ ಸರಕಾರಕ್ಕೆ ರಾಜಕೀಯ ಕಾರಣಗಳಿಗಾಗಿ ನನಗಿಂತಲೂ ಹೆಚ್ಚಿನ ಕಾಳಜಿ ದಲಾಯಿ ಲಾಮಾ ಪರಂಪರೆಯ ಬಗ್ಗೆ ಇದೆ’ ಎಂದು ಅವರು ಹೇಳಿದರು.
ಪರಂಪರೆಯಲ್ಲಿ ಹದಿನಾಲ್ಕನೆಯವರಾಗಿರುವ ಮತ್ತು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರೂ ಆಗಿರುವ ದಲಾಯಿ ಲಾಮಾ ಅವರು ಗೋವಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ದಲಾಯಿ ಲಾಮಾ ಎನ್ನುವುದು ಟಿಬೆಟ್ ಬೌದ್ಧ ಧರ್ಮದ ಗೆಲೂಗ್ ಧಾರ್ಮಿಕ ಚಿಂತನ ಪೀಠವು ತನ್ನಲ್ಲಿನ ಅತೀ ಮುಖ್ಯ ಸನ್ಯಾಸಿಗೆ ನೀಡುವ ಪಾರಂಪರಿಕ ಬಿರುದಾಗಿದೆ.
ದಲಾಯಿ ಲಾಮಾ ತಮ್ಮ ಭಾಷಣವನ್ನು ಮುಂದುವರಿಸಿ ಹೀಗೆ ಹೇಳಿದರು : ”1969ರಷ್ಟು ಹಿಂದೆಯೇ ನಾನು ದಲಾಯಿ ಲಾಮಾ ಪರಂಪರೆ ಮುಂದುವರಿಯಬೇಕೇ ಬೇಡವೇ ಎಂಬುದನ್ನು ಟಿಬೆಟ್ ಜನರೇ ತೀರ್ಮಾನಿಸಬೇಕು ಎಂದು ಔಪಚಾರಿಕವಾಗಿ ಹೇಳಿದ್ದೆ. 2011ರಲ್ಲಿ ನಾನು ರಾಜಕೀಯ ಹೊಣೆಗಾರಿಕೆಯಿಂದ ಸಂಪೂರ್ಣವಾಗಿ ನಿವೃತ್ತನಾದೆ. ಈಗ ಚುನಾಯಿತ ರಾಜಕೀಯ ನಾಯಕತ್ವವು ಈ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದೆ. ನಾನು ಅವರ ಯಾವುದೇ ನಿರ್ಧಾರದಲ್ಲಿ ಶಾಮೀಲಾಗಿರುವುದಿಲ್ಲ; ಈಗಂತೂ ದಲಾಯಿ ಲಾಮಾ ಪರಂಪರೆ ರಾಜಕೀಯವಾಗಿ ಪ್ರಸ್ತುತವಾಗಿಲ್ಲ.”
1959ರ ದಂಗೆಯಲ್ಲಿ ಟಿಬೆಟ್‌ನಿಂದ ಪಲಾಯನ ಮಾಡಿ ಭಾರತದಲ್ಲಿ ಆಸರೆ ಪಡೆದಿರುವ ದಲಾಯಿ ಲಾಮಾ ಅವರಿಗೆ 1989ರಲ್ಲಿ ಶಾಂತಿ ನೊಬೆಲ್ ಪುರಸ್ಕಾರ ಸಂದಿದೆ.