Advertisement
ಕೇರಳ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ಹಾಗೂ ಇದಕ್ಕೆ ಹೊಂದಿಕೊಂಡಂತೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ದ.ಕ. ಸೇರಿದಂತೆ ಕೇರಳ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ರಾಜ್ಯದ ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂವನ್ನು ಆ.7ರಿಂದ ಅನ್ವಯಿಸಿ ಆ.16ರವರೆಗೆ ಜಾರಿಗೊಳಿಸಿ ರಾಜ್ಯ ಸರಕಾರ ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ.
ಈ ವೀಕೆಂಡ್ ಕರ್ಫ್ಯೂ ಪ್ರಕಾರ, ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ದ.ಕ. ಜಿಲ್ಲೆಯಲ್ಲಿ ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ಕಾರ್ಯ-ಚಟುವಟಿಕೆಗಳಿಗೆ ಹಾಗೂ ಜನರ ಓಡಾಟಕ್ಕೆ ನಿರ್ಬಂಧ ಹಾಕಲಾಗಿದೆ. ಆ ಪ್ರಕಾರ, ಆಹಾರ, ದಿನಸಿ, ಹಣ್ಣು-ತರಕಾರಿ, ಮೀನು-ಮಾಂಸ, ಹಾಲು, ಪಡಿತರ ಸಾಮಾಗ್ರಿಗಳ ವಿತರಣೆ ಅಂಗಡಿ, ಪ್ರಾಣಿಗಳ ಮೇವು ಮಾರಾಟ ಮಳಿಗೆ, ಬೀದಿಬದಿ ವ್ಯಾಪಾರವನ್ನು ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ತೆರೆಯಲು ಅವಕಾಶವಿದೆ. ಮದ್ಯದಂಗಡಿಗಳಲ್ಲಿ ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆವರೆಗೆ ಪಾರ್ಸೆಲ್‌ಗಳನ್ನು ತೆಗೆದುಕೊಂಡು ಹೋಗಲು ಮಾತ್ರ ಅನುಮತಿ ನೀಡಲಾಗಿದೆ. ಹೊಟೇಲ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಹಾಗೆಯೇ, ಆಹಾರ ಖಾದ್ಯಗಳ ಹೋಂ ಡೆಲಿವರಿಯನ್ನು ದಿನದ 24 ಗಂಟೆ ನಡೆಸಬಹುದಾಗಿದೆ. ಇದನ್ನೂ ಓದಿ :‘ಬಾರ್’ ಬೇಡ ಎಂದ ಮಹಿಳಾ ಮಣಿಗಳು, ಬೇಕು ಅಂತಾ ಧರಣಿ ನಡೆಸಿದ ಮದ್ಯಪ್ರಿಯರು
Related Articles
ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲ ರೀತಿಯ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪೂರ್ವ ನಿಗದಿತ ಮದುವೆ ಮತ್ತು ಕೌಟುಂಬಿಕ ಸಮಾರಂಭಗಳನ್ನು ರಾಜ್ಯ ಆದೇಶದಲ್ಲಿ 100 ಮಂದಿ ಸೇರಲು ಅವಕಾಶ ನೀಡಲಾಗಿದ್ದರೂ ದಕ್ಷಿಣ ಜಿಲ್ಲೆಗೆ ಸಂಬಂಧಪಟ್ಟಂತೆ ಇದರಲ್ಲಿ ಮಾರ್ಪಾಡು ಮಾಡಲಾಗಿದ್ದು, ಕೇವಲ 50 ಮಂದಿಯನ್ನು ಮೀರದಂತೆ ನಡೆಸಬಹುದು. ಅಂತ್ಯಸಂಸ್ಕಾರಗಳಲ್ಲಿ ಜನರ ಮಿತಿಯನ್ನು 20ಕ್ಕೆ ಸೀಮಿತಗೊಳಿಸಲಾಗಿದೆ.
Advertisement
ತುರ್ತು ಸೇವೆಗೆ ಅವಕಾಶರೋಗಿಗಳು ಮತ್ತು ಅವರ ಸಹಾಯಕರು, ಲಸಿಕೆ ಪಡೆಯಲು ಹೋಗುವವರು ಅದಕ್ಕೆ ಪೂರಕವಾದ ದಾಖಲೆಗಳನ್ನು ತೋರಿಸಿ ಸಂಚರಿಸಬಹುದು. ರೈಲು ಮತ್ತು ವಿಮಾನ ಹಾರಾಟ ಅಬಾಧಿತವಾಗಿರಲಿದೆ. ಬಸ್ಸುಗಳು ಸೇರಿದಂತೆ ಸಾರ್ವಜನಿಕ ಸಾರಿಗೆ, ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ರೈಲು, ಬಸ್, ವಿಮಾನ ನಿಲ್ದಾಣಗಳಿಗೆ ಹೋಗಿ, ಬರುವ ಖಾಸಗಿ ವಾಹನಗಳು ಹಾಗೂ ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು ಸಂಚಾರದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಎಲ್ಲ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳು ಹಾಗೂ ಅವುಗಳ ಸ್ವಾಯತ್ತ ಸಂಸ್ಥೆಗಳ ಕಚೇರಿಗಳು ತೆರೆದಿರಲಿವೆ. ಅಗತ್ಯ ಸೇವೆಗಳನ್ನು ಒದಗಿಸುವ ಕೈಗಾರಿಕೆಗಳು, ಕಂಪೆನಿಗಳು, ಸಂಸ್ಥೆಗಳು ದಿನವಿಡಿ ತೆರೆಯಲು ಅನುಮತಿಸಲಾಗಿದೆ. ಈ ಸಂಸ್ಥೆಗಳ ಸಿಬ್ಬಂದಿ ಕಚೇರಿಯ ಗುರುತು ಕಾರ್ಡ್ ತೋರಿಸಿ ಸಂಚರಿಸಬಹುದು. ಟೆಲಿಕಾಂ, ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳ ಸಿಬ್ಬಂದಿ ಮತ್ತು ವಾಹನಗಳು ತಮ್ಮ ಐಡಿ ಕಾರ್ಡ್ ತೋರಿಸಿ ಸಂಚರಿಸಬಹುದು. ಐಟಿ ಕಂಪೆನಿಗಳ ಅವಶ್ಯಕ ಸಿಬ್ಬಂದಿ ಮಾತ್ರ ಸಂಚರಿಸಲು ಅವಕಾಶ, ಉಳಿದವರು ಮನೆಯಿಂದಲೇ ಕೆಲಸ ನಿರ್ವಹಿಸಲು ಸೂಚನೆ ನೀಡಲಾಗಿದೆ. ದೇವರ ದರ್ಶನಕ್ಕೆ ಅವಕಾಶ ಇಲ್ಲ
ದೇವಾಲಯಗಳು ಸೇರಿದಂತೆ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಬಹುದು. ಆದರೆ ಯಾವುದೇ ರೀತಿಯಲ್ಲೂ ಜನರು ಜಮಾವಣೆಯಾಗುವುದು, ಜಾತ್ರೆ, ಹಬ್ಬಗಳು, ಮೆರವಣಿಗೆ ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಾಲಯಗಳಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು ದೇವಾಲಯಗಳಲ್ಲಿ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶವಿರುವುದಿಲ್ಲ.