Advertisement

ದ.ಕ., ಉಡುಪಿ: “112′ನೆರವಿಗೆ 42 ಸಾವಿರಕ್ಕೂ ಅಧಿಕ ಕರೆ

01:26 AM May 02, 2023 | Team Udayavani |

ಮಂಗಳೂರು: ಪೊಲೀಸ್‌ ಸೇರಿದಂತೆ ಯಾವುದೇ ತುರ್ತು ಸಹಾಯಕ್ಕಾಗಿ ಅಸ್ತಿತ್ವಕ್ಕೆ ಬಂದಿರುವ “112 ತುರ್ತು ಸ್ಪಂದನೆ ಸಹಾಯ ವ್ಯವಸ್ಥೆ’ಯ(ಇಆರ್‌ಎಸ್‌ಎಸ್‌- ಎಮರ್ಜೆನ್ಸಿ ರೆಸ್ಪಾನ್ಸ್‌ ಸಪೋರ್ಟ್‌ ಸಿಸ್ಟಂ) ಸೇವೆ ವ್ಯಾಪಕಗೊಂಡಿದೆ.

Advertisement

ಈ ಹಿಂದೆ ಇದ್ದ “100′ ಸಹಾಯವಾಣಿಯ ಬದಲು ಈಗ “112′ ಇಆರ್‌ಎಸ್‌ಎಸ್‌ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಸೇವೆಗಳು ಮಾತ್ರ ದೊರೆಯುತ್ತಿದ್ದ “112’ನಲ್ಲಿ ಈಗ ಪೊಲೀಸ್‌ ಸೇವೆಯ ಜತೆಗೆ ಅಗ್ನಿಶಾಮಕ ಹಾಗೂ ಇತರ ವಿಪತ್ತುಗಳಿಗೆ ಸಂಬಂಧಿಸಿದ ಸೇವೆ ಸೇರ್ಪಡೆಗೊಳಿಸಲಾಗಿದೆ. ಸೇವೆಗಳನ್ನು ಆಯಾ ಇಲಾಖೆಗೆ ವರ್ಗಾಯಿಸಲಾಗುತ್ತಿದೆ.

42,721 ಕರೆ
ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ 112 ಸಹಾಯವಾಣಿಗೆ ಈ ಹಿಂದೆ ದಿನಕ್ಕೆ ಸರಾಸರಿ 30 ಕರೆಗಳು ಬರುತ್ತಿದ್ದರೆ ಈಗ 40ಕ್ಕೆ ಏರಿದೆ. ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ದಿನಕ್ಕೆ ಸರಾಸರಿ 20ರಿಂದ 25, ಉಡುಪಿ ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 10  -15 ಕರೆಗಳು ಬರುತ್ತಿದ್ದುದು ಈಗ 20ರಿಂದ 25ಕ್ಕೇರಿವೆ.

ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 2020ರ ನ. 14ರಂದು ಈ ಸೇವೆ ಆರಂಭಗೊಂಡಿದ್ದು ಇದುವರೆಗೆ 10,369ಕ್ಕೂ ಅಧಿಕ ಕರೆಗಳಿಗೆ ಸ್ಪಂದಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 2020ರ ಡಿಸೆಂಬರ್‌ನಲ್ಲಿ 112 ಸೇವೆ ಆರಂಭಗೊಂಡಿದ್ದು 8,928ಕ್ಕೂ ಅಧಿಕ ಕರೆಗಳಿಗೆ ಹಾಗೂ ಮಂಗಳೂರು ಕಮಿಷನರೆಟ್‌ನಲ್ಲಿ 2020ರ ಡಿಸೆಂಬರ್‌ನಿಂದ ಇದುವರೆಗೆ 23,424 ಕರೆಗಳಿಗೆ ಸ್ಪಂದಿಸಲಾಗಿದೆ. ಎರಡು ಜಿಲ್ಲೆಗಳಲ್ಲಿ ಇದುವರೆಗೆ ಒಟ್ಟು 42,721 ಕರೆಗಳಿಗೆ ಸ್ಪಂದಿಸಲಾಗಿದೆ. ದ.ಕ. ಜಿಲ್ಲೆಯಲ್ಲಿ 112ಗೆ ಬಂದಿರುವ ಕರೆಗಳ ಪೈಕಿ ಕೌಟುಂಬಿಕ ಕಲಹ ಸೇರಿದಂತೆ ಗಲಾಟೆಗಳು (ಶೇ. 40), ಜಾಗದ ತಕರಾರು (ಶೇ. 30), ಅಪಘಾತ (ಶೇ. 20), ಕಳ್ಳತನ (ಶೇ. 3) ಮೊದಲಾದವುಗಳಿಗೆ ಸಂಬಂಧಿಸಿದ ಕರೆಗಳು ಸೇರಿವೆ.

ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 10, ಮಂಗಳೂರು ಕಮಿಷನರೆಟ್‌ನಲ್ಲಿ 19 ಮತ್ತು ಉಡುಪಿ ಜಿಲ್ಲಾ ಪೊಲೀಸ್‌ ವ್ಯಾಪ್ತಿ ಯಲ್ಲಿ 12 ಇಆರ್‌ಎಸ್‌ಎಸ್‌ ವಾಹನಗಳು 112 ಸೇವೆಯಡಿ ಕಾರ್ಯನಿರ್ವಹಿಸುತ್ತಿವೆ. “ರೆಸ್ಪಾನ್ಸ್‌ ಟೈಮ್‌’ (ಕರೆ ಸ್ವೀಕರಿಸಿದ ಘಟನೆ ನಡೆದ ಸ್ಥಳ ತಲುಪುವ ಸಮಯ) ಮಂಗಳೂರು ಕಮಿಷನರೆಟ್‌ ವ್ಯಾಪ್ತಿಯಲ್ಲಿ ಸರಾಸರಿ 11 ನಿಮಿಷ, ಉಡುಪಿ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ 15-20 ನಿಮಿಷ, ದ.ಕ. ಜಿಲ್ಲಾ ವ್ಯಾಪ್ತಿಯಲ್ಲಿ 15-17 ನಿಮಿಷವಿದೆ.

Advertisement

ಸಂಪರ್ಕ ಹೇಗೆ?
ದಿನದ 24 ಗಂಟೆಯೂ ಸೇವೆ ದೊರೆಯುತ್ತದೆ. ಸೇವೆ ಪಡೆಯಲು 112ಗೆ ಕರೆ ಮಾಡಬಹುದು ಅಥವಾ ಛಿrss112kಠಿkಃksಟ.ಜಟv.ಜಿn ಇ-ಮೇಲ್‌ ಮಾಡಬಹುದು ಅಥವಾ “112 ಐNಈಐಅ’ ಮೊಬೈಲ್‌ ಆ್ಯಪ್‌ ಮೂಲಕ ಸಂಪರ್ಕಿಸಬಹುದು.

112 ಬಳಕೆ ಹೆಚ್ಚಳ
112 ಸಹಾಯವಾಣಿ ಬಳಕೆ ವ್ಯಾಪಕವಾಗಬೇಕೆಂಬ ಉದ್ದೇಶದಿಂದ ದಿನಕ್ಕೆ 100ಕ್ಕೂ ಅಧಿಕ ಕಡೆಗಳಲ್ಲಿ ತಿಳಿವಳಿಕೆ ಕಾರ್ಯಕ್ರಮಗಳನ್ನು ಕೂಡ ನಡೆಸಲಾಗುತ್ತಿದೆ. ಈಗ 112ಗೆ ಬರುವ ಕರೆಗಳ ಸಂಖ್ಯೆ ಹೆಚ್ಚಾಗಿದೆ. ಸಾರ್ವಜನಿಕರು ನಮಗೆ ನೇರವಾಗಿ 112ಗೆ ಮಾಹಿತಿ ನೀಡಬಹುದು.
– ಕುಲದೀಪ್‌ ಕುಮಾರ್‌ ಆರ್‌.ಜೈನ್‌, ಪೊಲೀಸ್‌ ಆಯುಕ್ತರು, ಮಂಗಳೂರು

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next