ಮಂಗಳೂರು: ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿರುವಂತೆಯೇ ಜಾರಿಗೊಂಡಿರುವ ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಗೋಡೆ ಬರಹ, ಪೋಸ್ಟರ್‌ಗಳು, ಬ್ಯಾನರ್ ಹಾಗೂ ಇತರ ಕಟೌಟ್‌ಗಳು ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿದ್ದ ಒಟ್ಟು 4308 ಹಾಗೂ ಖಾಸಗಿ ಸ್ಥಳದಲ್ಲಿದ್ದ 494 ಜಾಹೀರಾತುಗಳನ ನು ತೆರವುಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಗುರುವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.
ಸಾರ್ವಜನಿಕ ಸ್ಥಳದಲ್ಲಿದ್ದ 507 ಗೋಡೆಬರಹಗಳು, 1421 ಪೋಸ್ಟರ್‌ಗಳು, 1746 ಬ್ಯಾನರ್‌ಗಳು ಹಾಗೂ ಇತರ 634 ಜಾಹೀರಾತುಗಳನ್ನು ನೀತಿ ಸಂಹಿತೆ ಜಾರಿಯ 24 ಗಂಟೆಗಳಲ್ಲಿ ತೆರವುಗೊಳಿಸಲಾಗಿದೆ. ಇದೇ ವೇಳೆ ಖಾಸಗಿ ಆಸ್ತಿಯಲ್ಲಿದ್ದ 21 ಗೋಡೆ ಬರಹ, 272 ಪೋಸ್ಟರ್‌ಗಳು, 184 ಬ್ಯಾನರ್‌ಗಳು, ಇತರ 17 ಜಾಹೀರಾತುಗಳನ್ನು ತೆರವುಗೊಳಿಸುವ ಕಾರ್ಯವನ್ನು ಅಧಿಕಾರಿಗಳು ನಡೆಸಿದ್ದಾರೆ ಎಂದರು.
ಬಂಟ್ವಾಳದಲ್ಲಿ ಅತೀ ಹೆಚ್ಚು ಯುವ ಮತದಾರರು
ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಈವರೆಗೆ 33577 ಯುವ ಮತದಾರರಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಂಟ್ವಾಳದಲ್ಲಿ 4715 ಯುವ ಮತದಾರರಿದ್ದಾರೆ. ಉಳಿದಂತೆ ಬೆಳ್ತಂಗಡಿ- 4180, ಮೂಡುಬಿದಿರೆ- 3612, ಮಂಗಳೂರು ಉತ್ತರ- 4455, ಮಂಗಳೂರು ದಕ್ಷಿಣ- 3462, ಮಂಗಳೂರು- 4509, ಪುತ್ತೂರು 4412, ಸುಳ್ಯ- 4232 ಯುವ ಮತದಾರರಿದ್ದಾರೆ.
ಜಿಲ್ಲಾ ನೋಡಲ್ ಅಧಿಕಾರಿಯಾಗಿ ದ.ಕ. ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕುಮಾರ ಅವರು ಕಾರ್ಯ ನಿರ್ವಹಿಸಲಿದ್ದು, ಉಳಿದಂತೆ ವಿಧಾನಸಭಾ ಕ್ಷೇತ್ರದ ಮಟ್ಟದ ನೋಡಲ್ ಅಧಿಕಾರಿಗಳಲ್ಲದೆ, 24 ವೀಡಿಯೋ ಸರ್ವೆಲೆನ್ಸ್ ತಂಡ, 60 ಫ್ಲೈಯಿಂಗ್ ಸ್ಕ್ವಾಡ್‌ಗಳು, 60 ಸ್ಟಾಟಿಕ್ ತಂಡ, 184 ಸೆಕ್ಟರ್ ಅಧಿಕಾರಿಗಳ ತಂಡ, 8 ವೀಡಿಯೋ ವೀಕ್ಷಣಾ ತಂಡ, 8 ಎಂಸಿಸಿ ನೋಡಲ್ ಅಧಿಕಾರಿಗಳು, 8 ಅಕೌಂಟಿಂಗ್ ತಂಡಗಳು ಹಾಗೂ 8 ಮಂದಿ ಸಹಾಯಕ ವೆಚ್ಚ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.