Advertisement

ದ.ಕ. ಜಿಲ್ಲೆಯಲ್ಲಿ 1006 ಮಂದಿಗೆ ಕೋವಿಡ್ ದೃಢ; ದಾಖಲೆಯ 15 ಮಂದಿ ಸಾವು

08:38 PM Jun 18, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ತಪಾಸಣೆ ತೀವ್ರಗೊಳಿಸಲಾಗಿದ್ದು, ಪಾಸಿಟಿವ್‌ ಸಂಖ್ಯೆಯೂ ಏರತೊಡಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಕೆ ಮಾಡಿದರೆ ದ.ಕ. ಜಿಲ್ಲೆಯಲ್ಲಿ ಶುಕ್ರವಾರದಂದು 1006 ಮಂದಿಗೆ ಕೊರೊನಾ ದೃಢಪಟ್ಟಿದೆ. ಜತೆಗೆ, ಕೊರೊನಾದಿಂದಾಗಿ ಇದೇ ಮೊದಲು ಜಿಲ್ಲೆಯಲ್ಲಿ ಒಂದು ದಿನದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ.

Advertisement

ಶುಕ್ರವಾರದಂದು 665 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 87,350 ಮಂದಿ ಕೊರೊನಾ ಸೋಂಕಿಗೊಳಗಾಗಿದ್ದು, ಈ ಪೈಕಿ 79,395 ಮಂದಿ ಗುಣಮುಖರಾಗಿದ್ದಾರೆ. ಸದ್ಯ 6,931 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1024 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರದಂದು ಶೇ.10.07 ಪಾಸಿಟಿವಿಟಿ ದರ ದಾಖಲಾಗಿದೆ.

23 ಕಡೆ ಕಂಟೈನ್‌ಮೆಂಟ್‌ ವಲಯ
ದಕ್ಷಿಣ ಕನ್ನಡ ಜಿಲ್ಲೆಯ 23 ಕಡೆಗಳಲ್ಲಿ ಶುಕ್ರವಾರ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಮಂಗಳೂರಿನ 7, ಬೆಳ್ತಂಗಡಿ ತಾಲೂಕಿನ 8, ಪುತ್ತೂರು ಸುಳ್ಯ ತಾಲೂಕಿನಲ್ಲಿ ತಲಾ 2, ಬಂಟ್ವಾಳ ತಾಲೂಕಿನ 4 ಕಡೆಗಳಲ್ಲಿ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 15290 ಸೋಂಕಿತರು ಗುಣಮುಖ; 5783 ಹೊಸ ಪ್ರಕರಣ ಪತ್ತೆ

ಸರಾಸರಿ 10 ಸಾವಿರ ಪರೀಕ್ಷೆ
ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ತಪಾಸಣಾ ಪರೀಕ್ಷೆ ಏರಿಕೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಕಳೆದ ಕೆಲ ದಿನದಿಂದ ಪ್ರತೀ ದಿನ ಸರಾಸರಿ 10,000 ಮಂದಿಯ ತಪಾಸಣೆ ಮಾಡಲಾಗುತ್ತಿದೆ. ಶುಕ್ರವಾರದಂದು ಒಟ್ಟು 9984 ಮಂದಿಯ ತಪಾಸಣೆ ಮಾಡಲಾಗಿದ್ದು, ಇದರಲ್ಲಿ 1006 ಮಂದಿಗೆ ಕೊರೊನಾ ದೃಢಪಟ್ಟಿದೆ. ಅಪಾರ್ಟ್‌ಮೆಂಟ್‌ ವಾಸಿಗಳು ಕೊರೊನಾ ಪಾಸಿಟಿವ್‌ಗೆ ಒಳಗಾಗದಂತೆ ದ.ಕ. ಜಿಲ್ಲಾಡಳಿತ ಹೆಚ್ಚಿನ ನಿಗಾ ಇರಿಸಿದೆ. ಈ ಕಾರಣಕ್ಕೆ ಜಿಲ್ಲಾಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ರಿಂಗ್‌ ಸರ್ವೆಲೆನ್ಸ್‌ಗೆ ಆದ್ಯತೆ ನೀಡಲಾಗಿದೆ. ವಸತಿ ಸಮುತ್ಛಯಗಳಲ್ಲಿ ಕೊರೊನಾ ಪಾಸಿಟಿವ್‌ ಕಂಡು ಬಂದ ವ್ಯಕ್ತಿ ವಾಸಿಸುವ ಮಹಡಿ, ಮೇಲಿನ ಮಹಡಿ ಹಾಗೂ ಕೆಳಗಿನ ಮಹಡಿಗಳಲ್ಲಿ ವಾಸವಿರುವ ವ್ಯಕ್ತಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಕೋವಿಡ್‌ ಪ್ರಕರಣ ಕಂಡು ಬಂದ ಮನೆಯ ಸುತ್ತಲಿನ ಪ್ರದೇಶದ 50 ಮನೆಗಳ ಸದಸ್ಯರ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

Advertisement

ಬೆಂಗಳೂರು ಬಳಿಕ ದ.ಕ.ದಲ್ಲೇ ಅಧಿಕ !
ಕೊರೊನಾ ದೈನಂದಿನ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ನಗರದ ಬಳಿಕ ದ.ಕ. ಜಿಲ್ಲೆಯಲ್ಲೇ ಅತ್ಯಧಿಕ ಕೊರೊನಾ ಪ್ರರಕಣ ದಾಖಲಾಗುತ್ತಿದೆ. ಶುಕ್ರವಾರದಂದು ಬೆಂಗಳೂರು ನಗರದಲ್ಲಿ 1100 ದೈನಂದಿನ ಪ್ರಕರಣ ದಾಖಲಾಗಿ 39 ಮಂದಿ ಸಾವನ್ನಪ್ಪಿದ್ದಾರೆ. ಬಳಿಕ ದ.ಕ. ಜಿಲ್ಲೆಯಲ್ಲಿ 1006 ಮಂದಿಗೆ ಕೊರೊನಾ ದಾಖಲಾಗಿ 14 ಮಂದಿ ಸಾವನ್ನಪ್ಪಿದ್ದಾರೆ.

ತಪಾಸಣೆ ಹೆಚ್ಚಳ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ರೋಗ ತಪಾಸಣೆ ಏರಿಕೆ ಮಾಡಲಾಗಿದ್ದು ಪ್ರತೀ ದಿನ ಸರಾಸರಿ 10,000 ಮಂದಿಗೆಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಇದೇ ಕಾರಣಕ್ಕೆ ದೈನಂದಿನ ಪ್ರಕರಣದಲ್ಲಿಯೂ ಏರಿಕೆಯಾಗುತ್ತಿದೆ. ಸದ್ಯ ಖಾಸಗಿ ಮತ್ತು ಸರಕಾರಿ ಲ್ಯಾಬ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸ್ವಾಬ್‌ ಟೆಸ್ಟ್‌ ನಡೆಸಲಾಗುತ್ತಿದೆ.
– ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next