Advertisement

3 ಕಡಲತೀರಕ್ಕೆ ಶೀಘ್ರ ಹೊಸ ಮೆರುಗು: ತಣ್ಣೀರುಬಾವಿಗೆ ಬ್ಲೂಫ್ಲ್ಯಾಗ್‌, ಪಣಂಬೂರು, ಸಸಿಹಿತ್ಲು ಬೀಚ್‌ಗಳಿಗೂ ಯೋಜನೆ

09:03 PM Dec 12, 2022 | Team Udayavani |

ಮಹಾನಗರ : ಕರಾವಳಿ ಪ್ರವಾಸೋದ್ಯಮದ ಪ್ರಮುಖ ಭಾಗವಾಗಿರುವ ಜಿಲ್ಲೆಯ 3 ಕಡಲ ತೀರಗಳನ್ನು ಆಕರ್ಷಕಗೊಳಿಸುವ ಮೂಲಕ ಪ್ರವಾಸಿಗರನ್ನು ಸೆಳೆಯಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ.

Advertisement

ಮಂಗಳೂರಿನ ತಣ್ಣೀರುಬಾವಿ ಕಡಲತೀರ ಈಗಾಗಲೇ ಬ್ಲೂಫ್ಲ್ಯಾಗ್‌ ಯೋಜನೆಯಡಿ ಆಯ್ಕೆಯಾಗಿದ್ದರೆ, ಅತ್ಯಧಿಕ ಜನರನ್ನು ಆಕರ್ಷಿಸುವ ಪಣಂಬೂರು ಕಡಲತೀರದ ಅಭಿವೃದ್ಧಿಗೂ ಪಿಪಿಪಿ ಅಡಿಯಲ್ಲಿ ಯೋಜನೆ ಜಾರಿಗೊಂಡಿದೆ. ಇನ್ನು ಸರ್ಫಿಂಗ್‌ ಖ್ಯಾತಿಯ ಸಸಿಹಿತ್ಲು ಬೀಚ್‌ನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜಂಗಲ್‌ ಲಾಡ್ಜಸ್‌ ಅಭಿವೃದ್ಧಿಗೆ ಮುಂದಾಗಿದೆ.

ತಣ್ಣೀರುಬಾವಿ ಕಡಲತೀರದ ಅಭಿವೃದ್ಧಿ ಕಾರ್ಯ ಈಗಾಗಲೇ ಆರಂಭವಾಗಿದೆ. ವೃಕ್ಷೋದ್ಯಾನದ ಜತೆಗೆ ಈ ಕಡಲತೀರ ಹೆಚ್ಚು ಸ್ವತ್ಛವಾಗಿರುವುದು ಹಾಗೂ ಬ್ಲೂಫ್ಲ್ಯಾಗ್‌ ಗುರು
ತಿಸುವಿಕೆಗೆ ಪೂರಕ ಅರ್ಹತೆಗಳನ್ನು ಹೊಂದಿದ್ದ ಕಾರಣ ಆಯ್ಕೆ ಮಾಡಲಾಗಿದೆ. ಅದರ ಅಭಿವೃದ್ಧಿ ಕಾರ್ಯವನ್ನೂ ಕೇಂದ್ರ ಸರಕಾರವೇ ಟೆಂಡರ್‌ ಮೂಲಕ ಬಿವಿಜಿ ಕಂಪೆನಿಗೆ ನೀಡಿದೆ.

ಈಗಾಗಲೇ ಈ ಕಡಲತೀರವನ್ನು ಬ್ಲೂಫ್ಲ್ಯಾಗ್‌ ಮಾನದಂಡಗಳಿಗೆ ಅನುಗುಣವಾಗಿ ಪೂರ್ಣವಾಗಿ ಪರಿವರ್ತಿಸುವ ಕೆಲಸ ಪ್ರಾರಂಭಗೊಂಡಿದೆ. ಸೆಪ್ಟಂಬರ್‌ನಲ್ಲಷ್ಟೇ ಕಾರ್ಯಾದೇಶ ನೀಡಲಾಗಿತ್ತು. ಯಾವುದೇ ರೀತಿಯಲ್ಲೂ ಕರಾವಳಿ ನಿಯಂತ್ರಣ ವಲಯದ ಮಾರ್ಗಸೂಚಿಯನ್ನು ಉಲ್ಲಂಘಿಸದೆ ಬಿದಿರು ಮುಂತಾದ ಪರಿಸರ ಪೂರಕ ವಸ್ತುಗಳನ್ನು ಬಳಸಿ ಕೊಂಡು ಶೌಚಾಲಯ, ವಸ್ತ್ರ ಬದಲಾವಣೆ ಕೊಠಡಿ, ವೀಕ್ಷಣ ಗೋಪುರ, ಸೋಲಾರ್‌ ಟವರ್‌, ತ್ಯಾಜ್ಯ ಸಂಸ್ಕರಣ ಘಟಕಗಳನ್ನು ನಿರ್ಮಿಸ ಲಾಗುತ್ತದೆ. 2 ವರ್ಷ ಪೂರ್ಣ ನಿರ್ವ ಹಣೆಯ ಬಳಿಕ ಬಿವಿಜಿ ಕಂಪೆನಿ ಇದನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಿದೆ.

ಪಣಂಬೂರು ಬೀಚ್‌ಗೆ ವಾಟರ್‌ಸ್ಪೋರ್ಟ್
ಪಣಂಬೂರು ಬೀಚ್‌ ಹೆಚ್ಚು ಮಂದಿಯನ್ನು ಸೆಳೆಯುವ ಬೀಚ್‌ ಆಗಿದ್ದರೂ ಕೆಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಸೊರಗಿತ್ತು. ಈ ಬಾರಿ ಜಿಲ್ಲಾಡಳಿತ ಇದರ ನಿರ್ವಹಣೆಯ ಹೊಣೆಯನ್ನು ಭಂಡಾರಿ ಬಿಲ್ಡರ್ಗೆ ನೀಡಿದೆ.

Advertisement

10 ವರ್ಷಗಳ ಕಾಲ ಈ ಸಂಸ್ಥೆ ಪಣಂಬೂರು ಬೀಚ್‌ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡಲಿದೆ. ಮುಖ್ಯವಾಗಿ ಕಯಾಕಿಂಗ್‌, ಜೆಟ್‌ ಸ್ಕೀಯಿಂಗ್‌, ಬನಾನಾ ರೈಡ್‌ ಸಹಿತ ಹಲವು ರೀತಿಯ ಸಮುದ್ರ ಕ್ರೀಡೆಗಳನ್ನು ಪರಿಚಯಿಸಲಿದೆ. ಸೀಪ್ಲೇನ್‌ ಕೂಡ ಪರಿಚಯಿಸುವ ಸಾಧ್ಯತೆ ಇದೆ.

ಸುಸಜ್ಜಿತ ಮಳಿಗೆಗಳು, ಕಾಟೇಜ್‌ಗಳು, ಸಿಸಿ ಕೆಮರಾ, ಹೈಮಾಸ್ಟ್‌ ದೀಪಗಳ ಅಳವಡಿಕೆ, ಗಾರ್ಡ್‌ ಟವರ್‌, ಶೌಚಾಲಯ, ಡ್ರೈನೇಜ್‌ ಸಂಸ್ಕರಣ ಸ್ಥಾವರ ಅಳವಡಿಸಲಾಗುತ್ತದೆ. ಮುಖವಾಗಿ ಪಣಂಬೂರು ಬೀಚ್‌ ಅಪಾಯಕಾರಿಯಾಗಿರುವುದರಿಂದ ಜನರ ಸುರಕ್ಷೆಗಾಗಿ ಜೀವ ರಕ್ಷಕರ ತಂಡವನ್ನೂ ನಿಯೋಜಿಸಲಾಗುತ್ತದೆ. ಭಂಡಾರಿ ಸಂಸ್ಥೆಗೆ ನವೆಂಬರ್‌ನಲ್ಲಿ ಕಾರ್ಯಾದೇಶ ನೀಡಲಾಗಿದೆ.

ಸಸಿಹಿತ್ಲುಗೆ ಜಂಗಲ್‌ ಲಾಡ್ಜಸ್‌
ಪ್ರವಾಸಿಗರಿಗೆ ಸುವಿಹಾರಿ ವ್ಯವಸ್ಥೆಗಳನ್ನು ಕಲ್ಪಿಸಬೇಕು ಹಾಗೂ ಅವರನ್ನು ಕಡಲತೀರಕ್ಕೆ ಸೆಳೆಯುವ ಸಲುವಾಗಿ ಸಸಿಹಿತ್ಲುವಿನ ಸುಮಾರು 29.5 ಎಕ್ರೆಯಷ್ಟು ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದೊಂದಿಗೆ ಜಂಗಲ್‌ ಲಾಡ್ಜಸ್‌ ರಿಸಾರ್ಟ್‌ ನಿರ್ಮಾಣಕ್ಕೆ ಮುಂದಾಗಿವೆ. 10 ಕೋಟಿ ರೂ. ಯೋಜನೆಗಾಗಿ ಈಗಾಗಲೇ 5 ಕೋಟಿ ರೂ. ಮಂಜೂರಾಗಿದೆ. ಇದರ ಡಿಪಿಆರ್‌ಇನ್ನಷ್ಟೇ ತಯಾರಾಗಬೇಕಿದೆ.

ಬ್ಲೂಫ್ಲ್ಯಾಗ್‌ ನಿಗಾ
ಈ ಬಾರಿ ಇಡೀ ದೇಶದಲ್ಲೇ ಬ್ಲೂಫ್ಲ್ಯಾಗ್‌ ಕಾರ್ಯಕ್ರಮದಡಿ ಆಯ್ಕೆಯಾದ ಮೂರು ಬೀಚ್‌ಗಳಲ್ಲಿ ಒಂದು ತಣ್ಣೀರುಬಾವಿ. ಕರಾವಳಿಯಲ್ಲಿ ಸದ್ಯ ಇರುವ ಇಂತಹ ಇನ್ನೊಂದು ಬೀಚ್‌ ಪಡುಬಿದ್ರಿ. ಇದೇ ಕಾರ್ಯಕ್ರಮಕ್ಕೆ ಇಡ್ಯಾ ಬೀಚ್‌ನ ಪ್ರಸ್ತಾವನೆ ಸಲ್ಲಿಸಿದ್ದರೂ ಆಯ್ಕೆಯಾಗಿರಲಿಲ್ಲ. ಸ್ವತ್ಛತೆ, ಕಡಲ ನೀರಿನ ಸ್ವತ್ಛತೆ ಅತಿ ಮುಖ್ಯವಾಗಿದ್ದು, ಆಗಾಗ ಅದನ್ನು ತಜ್ಞರ ತಂಡ ಪರಿಶೀಲಿಸುತ್ತದೆ. ಮಾನದಂಡಕ್ಕನುಗುಣವಾಗಿ ಇರಲೇಬೇಕಾಗುತ್ತದೆ. ಮುಖ್ಯವಾಗಿ ಬ್ಲೂಫ್ಲ್ಯಾಗ್‌ ಬೀಚ್‌ನ ವ್ಯಾಪ್ತಿಯ ಸುಮಾರು 400 ಮೀಟರ್‌ ವ್ಯಾಪ್ತಿಯ ಸಮುದ್ರದಲ್ಲಿ
ಬೋಟ್‌ ಸಂಚರಿಸುವುದಕ್ಕೂ ಅವಕಾಶವಿಲ್ಲ, ಮಾಲಿನ್ಯವಾಗ ಬಾರದು ಎಂಬುದು ಉದ್ದೇಶ.

ಪ್ರವಾಸೋದ್ಯಮ ಏರುಗತಿಯಲ್ಲಿರು ವಾಗಲೇ ನಮ್ಮ ವ್ಯಾಪ್ತಿ ಯಲ್ಲಿಯ ಮೂರು ಬೀಚ್‌ಗಳನ್ನು ಪ್ರವಾಸಿ ಸ್ನೇಹಿ ಹಾಗೂ ಆಕರ್ಷಕಗೊಳಿಸಲಿದ್ದೇವೆ, ಪ್ರವಾಸಿಗರು ಇಲ್ಲಿನ ಕಡಲಿನ ಸೌಂದರ್ಯ ಸವಿಯುವ ನಿಟ್ಟಿನಲ್ಲಿ ಈ ಯೋಜನೆಗಳಿವೆ.
-ಎನ್‌. ಮಾಣಿಕ್ಯ, ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಮಂಗಳೂರು

– ವೇಣುವಿನೋದ್‌ ಕೆ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next