Advertisement

5ಜಿ ಅಪ್‌ಡೇಟ್‌ ನೆಪದಲ್ಲಿ ವಂಚನೆ ಸಾಧ್ಯತೆ : ಲಿಂಕ್‌, ಒಟಿಪಿ ನೀಡಬೇಡಿ: ಪೊಲೀಸರ ಎಚ್ಚರಿಕೆ

09:00 AM Oct 08, 2022 | Team Udayavani |

ಮಂಗಳೂರು : ಇತ್ತೀಚೆಗೆ ದೇಶದಲ್ಲಿ 5ಜಿ ಸೇವೆಗೆ ಚಾಲನೆ ನೀಡಲಾಗಿದ್ದು ಇದನ್ನೇ ಮುಂದಿಟ್ಟುಕೊಂಡು ವಂಚಕರು ಸಾರ್ವಜನಿಕರಿಂದ ಹಣ ದೋಚುವ ಸಾಧ್ಯತೆ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Advertisement

ಜಿಯೋ, ಏರ್‌ಟೆಲ್‌ ಮತ್ತು ವೋಡಾಫೋನ್‌ ಕಂಪೆನಿಗಳ 5ಜಿ ಸೇವೆ ಆರಂಭವಾಗಿದೆ. ಈ ಸೇವೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಲಭ್ಯವಾಗಲಿದೆ. ಇದನ್ನೇ ಅಸ್ತ್ರವಾಗಿಸಿ ಸೈಬರ್‌ ವಂಚಕರು ಮೋಸ ಮಾಡುವ ಸಾಧ್ಯತೆ ಇದೆ. ತಮ್ಮನ್ನು ಏರ್‌ಟೆಲ್‌, ವೋಡಾಫೋನ್‌ ಮೊದಲಾದ ಕಂಪೆನಿಯವರೆಂದು ಪರಿಚಯಿಸಿಕೊಂಡು ಸಾರ್ವಜನಿಕರಿಗೆ ಕರೆ ಮಾಡಿ “ನಿಮ್ಮ ಸಿಮ್‌ ಅನ್ನು 4ಜಿಯಿಂದ 5ಜಿಗೆ ಅಪ್‌ಡೇಟ್‌ ಮಾಡುತ್ತೇವೆ’ ಎಂದು ಹೇಳಿ ಒಟಿಪಿ ಪಡೆದು ಅಥವಾ ಲಿಂಕ್‌ ಕಳುಹಿಸಿ ಅದರ ಮೂಲಕ ಹಣ ದೋಚುವ ಸಾಧ್ಯತೆ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಒಟಿಪಿ ನೀಡಬಾರದು ಮತ್ತು ಲಿಂಕ್‌ಗಳನ್ನು ಒತ್ತಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಒಟಿಪಿ ನೀಡಬೇಕಾಗಿಲ್ಲ
ಇಂತಹ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿರುವ ಸೈಬರ್‌ ಭದ್ರತಾ ತಜ್ಞ ಡಾ| ಅನಂತಪ್ರಭು ಗುರುಪುರ ಅವರು, 4 ಜಿಯಿಂದ 5 ಜಿಗೆ ಅಪ್ ಗ್ರೇಡ್ ಮಾಡಲು ಒಟಿಪಿ ನೀಡುವ ಅಗತ್ಯವಿರುವುದಿಲ್ಲ. ಈ ಬಗ್ಗೆ ಅನುಮಾನ ಬೇಡ ಎಂದು ಹೇಳಿದ್ದಾರೆ.

ಸಿಮ್‌ಸ್ವಾಪ್‌ ಮಾದರಿ ವಂಚನೆ
ಸೈಬರ್‌ ವಂಚಕರು ಸಾರ್ವಜನಿಕ ಗ್ರಾಹಕರನ್ನು ಸಂಪರ್ಕಿಸಿ ಹಲವು ವಂಚನಾ ಮಾರ್ಗಗಳ ಮೂಲಕ ಸಾರ್ವಜನಿಕ ಗ್ರಾಹಕರ ಮೊಬೈಲಿಗೆ ಒಟಿಪಿ ಬರುವಂತೆ ಮಾಡುತ್ತಾರೆ. ಆ ಒಟಿಪಿ ಪಡೆದು ಮಾಹಿತಿಗಳನ್ನು ಕದಿಯುತ್ತಾರೆ. ಕೆಲವೊಮ್ಮೆ ಅಪ್‌ಡೇಟ್‌/ಅಪ್ ಗ್ರೇಡ್ ನೆಪದಲ್ಲಿ ಗ್ರಾಹಕರ ಹಳೆಯ ಸಿಮ್‌ಕಾರ್ಡ್‌ ಅನ್ನು ವಂಚಕರೇ ಬಳಸಿಕೊಳ್ಳುವ ಅಪಾಯವೂ ಇರುತ್ತದೆ. ಇದು ಸಿಮ್‌ ಸ್ವಾಪ್‌ ಮಾದರಿಯ ವಂಚನೆ. 5 ಜಿ ಅಪ್ ಗ್ರೇಡ್ ಸಂದರ್ಭ ಇಂತಹ ವಂಚನೆ ಆಗಬಹುದು ಎಂಬುದಾಗಿ ಆರಂಭದಲ್ಲಿ ನಿರೀಕ್ಷಿಸಲಾಗಿತ್ತು. ಹಾಗಾಗಿ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದೆವು. ಆದರೆ ಇತ್ತೀಚಿನ ವರದಿಗಳ ಪ್ರಕಾರ ಕೆಲವು ಕಡೆ ಇಂತಹ ವಂಚನೆ ಈಗಾಗಲೇ ನಡೆದಿದೆ. ಹಾಗಾಗಿ ಹೆಚ್ಚಿನ ಜಾಗರೂಕತೆ ಅಗತ್ಯ ಎಂದು ಡಾ| ಅನಂತ ಪ್ರಭು ಅವರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಪೊಲೀಸರೊಂದಿಗೆ ಸಹಕರಿಸಿ ಎಸ್.ಪಿ. ಆರ್.ಚೇತನ್ ಮನವಿ

Advertisement
Advertisement

Udayavani is now on Telegram. Click here to join our channel and stay updated with the latest news.

Next