Advertisement

ದಕ್ಷಿಣ ಕನ್ನಡ  ಉಡುಪಿ  ಕೊಡಗು : 3 ಜಿಲ್ಲೆಗಳಲ್ಲಿ ಶಾಲಾರಂಭ ಇಲ್ಲ 

12:35 AM Aug 22, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಮತ್ತು ಸೋಂಕುಪೀಡಿತರ ಸಾವು ಏರಿಳಿಕೆಯಾದರೂ ಸತತ ಒಂದು ವಾರದಿಂದ ಪರೀಕ್ಷೆಗಳ ಪಾಸಿಟಿವಿಟಿ ದರ ಶೇ. 1ಕ್ಕಿಂತಲೂ ಕಡಿಮೆ ವರದಿಯಾಗುತ್ತಿದೆ. ಈ ಮೂಲಕ ಮೂರನೇ ಅಲೆ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ.

Advertisement

ಇದರ ಮಧ್ಯೆ ಸೋಮವಾರದಿಂದ ರಾಜ್ಯದಲ್ಲಿ ಶಾಲಾರಂಭ ಆಗಲಿದ್ದರೂ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳಲ್ಲಿ ಮಾತ್ರ ತರಗತಿ ಆರಂಭವಾಗುವುದಿಲ್ಲ ಎಂದು ಸರಕಾರ ಹೇಳಿದೆ. ಈ ಮೊದಲು ಶೇ. 2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಐದು ಜಿಲ್ಲೆಗಳಲ್ಲಿ ಶಾಲೆ ಆರಂಭಿಸುವುದಿಲ್ಲ ಎಂದಿತ್ತು. ಆದರೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಶೇ. 2ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಕಂಡುಬಂದ ಹಿನ್ನೆಲೆಯಲ್ಲಿ ಇಲ್ಲಿ ಸೋಮವಾರ ತರಗತಿ ಆರಂಭಿಸಲಾಗುತ್ತಿದೆ. ಪ್ರಸಕ್ತ ವಾರದ ಕೊರೊನಾ ವಾರ್‌ ರೂಂ ಬುಲೆಟಿನ್‌ ಪ್ರಕಾರ, ದಕ್ಷಿಣ ಕನ್ನಡ (ಶೇ. 3.2), ಉಡುಪಿ (ಶೇ. 2.8), ಕೊಡಗು (ಶೇ. 2.3) ಜಿಲ್ಲೆಗಳು ಮಾತ್ರ ಶೇ. 2ಕ್ಕಿಂತ ಅಧಿಕ ಪಾಸಿಟಿವಿಟಿ ದರ ಹೊಂದಿವೆ.

ಶನಿವಾರ ರಾಜ್ಯದಲ್ಲಿ 1,350 ಮಂದಿಗೆ ಸೋಂಕು ತಗಲಿದ್ದು, 18 ಸೋಂಕುಪೀಡಿತರು ಸಾವಿಗೀಡಾಗಿದ್ದಾರೆ. ಶುಕ್ರವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 15 ಸಾವಿರ ಕಡಿಮೆಯಾಗಿದ್ದು, ಹೊಸ ಪ್ರಕರಣಗಳ ಸಂಖ್ಯೆ 103 ಇಳಿಕೆಯಾಗಿವೆ. ಸೋಂಕುಪೀಡಿತರ ಸಾವು ಒಂದು ಹೆಚ್ಚಾಗಿದ್ದು, ಪಾಸಿಟಿವಿಟಿ ದರ ಶೇ. 0.8 ಇದೆ. ಮರಣ ದರ ಶೇ. 1.3 ಇದೆ.

ಆಗಸ್ಟ್‌ ಮೂರನೇ ವಾರ ರಾಜ್ಯದಲ್ಲಿ ಸೋಂಕು ಹೆಚ್ಚಾಗುತ್ತದೆ ಎಂದು ಕೆಲವು ತಜ್ಞರು ಅಂದಾಜಿಸಿದ್ದರು. ಪ್ರಸಕ್ತ ವಾರ ಪೂರ್ತಿ ಹೊಸ ಪ್ರಕರಣಗಳು ಒಂದು ಸಾವಿರದಿಂದ ಒಂದೂವರೆ ಸಾವಿರ ಮಧ್ಯೆ ಏರಿಳಿಕೆಯಾಗುತ್ತಲೆ ಇವೆ. ಸಾವು 20ರ ಆಸುಪಾಸಿಗೆ ತಗ್ಗಿದೆ. ಆದರೆ ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಮಾತ್ರ ಕಳೆದ ವಾರ ಸರಾಸರಿ ಶೇ. 1.1 ಇದ್ದುದು ಸದ್ಯ ಶೇ. 0.9ಕ್ಕೆ ತಗ್ಗಿದೆ. ಸತತ ಒಂದು ವಾರದ ಅವಧಿಯಲ್ಲಿ ಶೇ. 1ಕ್ಕಿಂತಲೂ ಕಡಿಮೆ ಇತ್ತು. ಈ ಮೂಲಕ ಮೂರನೇ ಅಲೆಯ ಆತಂಕ ಸದ್ಯದ ಮಟ್ಟಿಗೆ ದೂರವಾಗಿದೆ.

ಶನಿವಾರ ಅತೀ ಹೆಚ್ಚು ದಕ್ಷಿಣ ಕನ್ನಡದಲ್ಲಿ 320, ಬೆಂಗಳೂರಿನಲ್ಲಿ 260, ಉಡುಪಿಯಲ್ಲಿ 177, ಮೈಸೂರಿನಲ್ಲಿ 102, ಹಾಸನದಲ್ಲಿ 101 ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ ಅತೀ ಹೆಚ್ಚು, ನಾಲ್ಕು ಮಂದಿ ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next