Advertisement

ಅಲೆ.. ಬಲತ ಕರೆಟ್‌ ಮಿತ್ತಗುತ್ತುದ ಎರುಕ್ಕುಲು

12:45 AM Feb 03, 2024 | Team Udayavani |

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಈಗ ಕಂಬಳದ ಸಂಭ್ರಮ. ಒಟ್ಟು ಈ ಪ್ರದೇಶಗಳನ್ನು ಕರಾವಳಿ ಜಿಲ್ಲೆ ಯೆಂದು ಪರಿಗಣಿಸಿದರೆ ಇದು ವಸ್ತುಶಃ ಕಡಲ ತಡಿಯ ಕಂಬಳ ಕರೆಗಳಲ್ಲಿ ಜನಸಾಗರದ ನಡುವಿನ ಜನಪದ ಕ್ರೀಡೆ. ಜಿಲ್ಲೆಯಾದ್ಯಂತ ವಿವಿಧೆಡೆ ನಡೆಯುವ ಕಂಬಳದ ವೀಕ್ಷಣೆಗೆ ಅಪಾರ ಸಂಖ್ಯೆಯಲ್ಲಿ- ಕೆಲವೆಡೆ ಲಕ್ಷಕ್ಕೂ ಮೀರಿ ಅಭಿಮಾನಿಗಳು ಭಾಗವಹಿಸುವುದು ಈ ಜನಪ್ರಿಯ ಕ್ರೀಡೆಯ ಕುರಿತಾದ ಗೌರವದ ಪ್ರತೀಕ.
ಜೋಡಿ ಕೋಣಗಳನ್ನು ಕೆಸರು ನೀರಿನ ಕರೆಯಲ್ಲಿ ಸ್ಪರ್ಧಾತ್ಮಕವಾಗಿ ಓಡಿಸುವುದೇ ಕಂಬಳ. ಈ ಕಂಬಳ ಹೆಸರಿನ ಬಗ್ಗೆ ಸಾಕಷ್ಟು ಸಿದ್ಧಾಂತಗಳಿವೆ. ತುಳುವಿನ ಕಂಬುಲ ಎಂಬ ಶಬ್ದ ಕನ್ನಡದಲ್ಲಿ ಕಂಬಳ ಎಂದಾಗಿರಬಹುದೆಂದು ಅಭಿಪ್ರಾಯವೂ ಇದೆ.

Advertisement

ಕಂಬಳ ಜನಪದ ಕ್ರೀಡೆಯ ಪರಂಪರೆಗೆ ಸಹಸ್ರಮಾನದ ಇತಿಹಾಸವಿದೆ. ಕ್ರಿ.ಶ. 1122 ರ ಶಾಸನವೊಂದರಲ್ಲಿ ಕಂಬಳ ಕ್ರೀಡೆಯ ಕುರಿತಾದ ಉಲ್ಲೇಖವನ್ನು ಸಂಶೋಧಕರು ಗಮನಿಸಿದ್ದಾರೆ. ಆಗಿನ ಕಾಲದ ರಾಜ ಮಹಾರಾಜರ ಮತ್ತು ಜಿಲ್ಲೆಯಲ್ಲಿ ವಿಶೇಷವಾಗಿ ಆಳುಪ, ಬಂಗ, ಚೌಟ ಮುಂತಾದ ಅನೇಕ ಅರಸರ ಆಶ್ರಯದಲ್ಲಿ ಕಂಬಳ ನಡೆಯುತ್ತಿತ್ತು ಎಂಬ ಪ್ರತೀತಿ. ಮುಂದೆ ಕೃಷಿ ಪ್ರಧಾನವಾದ ಮಾಂಡಲಿಕರು, ಗುತ್ತುಗಳವರು, ಹಿರಿ ಮನೆತನಗಳು ಕಂಬಳ ಕ್ರೀಡೆಗೆ ಆದ್ಯತೆಯನ್ನು ನೀಡುತ್ತಾ ಬಂದರು. ಈ ಕುರಿತು ಕೆಲವು ಪರಂಪರೆಗಳು 400 ವರ್ಷಗಳ ಪೂರ್ಣ ದಾಖಲೆಗಳನ್ನು ಹೊಂದಿವೆ. ಇಂದಿಗೂ ಅಲ್ಲಿ ಕಂಬಳ ನಡೆಯುತ್ತಿರುವುದು ವಿಶೇಷ. ಆಧುನಿಕ ಕಾಲಘಟ್ಟದಲ್ಲಿ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಸ್ಥಳೀಯವಾದ ಕಂಬಳ ಸಂಘಟನ ಸಮಿತಿ ಯವರು ವರ್ಷಕ್ಕೊಮ್ಮೆ ಅದ್ದೂರಿಯಿಂದ ಕಂಬಳ ಏರ್ಪಡಿಸುತ್ತಾರೆ.

ದೀರ್ಘ‌ ಪರಂಪರೆ
ಪ್ರಾಚೀನ ಕಾಲದಿಂದಲೂ ಕೃಷಿಕರು ಭತ್ತದ ಬಿತ್ತನೆಯ ಕಾರ್ಯಕ್ಕೆ ಮುಂದಾಗುವಾಗ ಬೃಹತ್‌ ಗದ್ದೆಗಳಲ್ಲಿ ಅಥವಾ ಬಾಕಿಮಾರು ಗದ್ದೆಗಳಲ್ಲಿ ದೇವಸ್ಥಾನದ ಬಳಿ ಅಥವಾ ಬೃಹತ್‌ ಮನೆತನಗಳ ಅಥವಾ ಆಗಿನ ರಾಜ ಮನೆತನದವರ ನೇತೃತ್ವದಲ್ಲಿ ಕಂಬಳ ನಡೆಯುತ್ತ ಬಂದಿದೆ.

ಒಂದು ಕಾಲದಲ್ಲಿ ಮುಂಜಾನೆಯಿಂದ ಸಂಜೆಯವರೆಗೆ ಕಂಬಳ ನಡೆಯುತ್ತಿತ್ತು. ತೀರ್ಪುಗಾರರು ತಮ್ಮ ಕಣ್ಣೋಟದಿಂದಲೇ ನಿರ್ಧಾ ರವನ್ನು ಪ್ರಕಟಿಸುತ್ತಿದ್ದರು. ಅಂತೆಯೇ ಕೃಷಿ ಪರಿಕರಗಳು, ಕೃಷಿ ಉತ್ಪನ್ನಗಳ ಬಹುಮಾನಗಳನ್ನು ನೀಡಲಾಗುತ್ತಿತ್ತು.

ಈ ಕಂಬಳದ ಕೋಣಗಳನ್ನು ಅತ್ಯಂತ ಜಾಗ್ರತೆಯಿಂದ ಸಾಕ ಬೇಕಾಗಿದೆ. ಕಂಬಳ ಕೋಣಗಳ ನಿರ್ವಹಣೆಗೆ ಯಜಮಾನನಿಗೆ ವಾರ್ಷಿಕ ಲಕ್ಷಾಂತರ ರೂ. ವೆಚ್ಚ ತಗಲುತ್ತದೆ. ಪುಟ್ಟ ಪುಟ್ಟ ಕೆಸರು ಅಂಗ ಣಗಳಲ್ಲಿ, ಕೆರೆಗಳಲ್ಲಿ, ಅತ್ಯಂತ ಮೇಲ್ವಿಚಾರಣೆಯಲ್ಲಿ ಸಾಕುವುದು ಈ ಕಂಬಳದ ವೈಶಿಷ್ಟé. ಅವುಗಳ ಪಾಲನೆಗೆಂದೇ ಸಿಬಂದಿ ಇರುತ್ತಾರೆ.
ಕಂಬಳದ ಕೋಣಗಳ ಜೋಡಿಗಳ ಓಟವನ್ನು ನಿರ್ವಹಿಸುವುದು ಅತ್ಯಂತ ಕೌಶಲದ ಕೆಲಸವಾಗಿದೆ. ಅದಕ್ಕೆಂದೇ ಪರಿಣತರು ಇರುತ್ತಾರೆ. ಸಾಧಾರಣವಾಗಿ 120ರಿಂದ 140 ಮೀ. ಓಟದ ಕೆಸರಿನ ಕರೆಗಳು ಇರುತ್ತವೆ. ಇಲ್ಲಿ ಕರೆ ಅಂದರೆ ಕೋಣಗಳ ಓಟದ ವ್ಯಾಪ್ತಿ. ಒಂದು ಕಾಲಕ್ಕೆ ಒಂದೇ ಕರೆಯಲ್ಲಿ ಕಂಬಳ ನಡೆಯುತ್ತಿದ್ದರೆ ಈಗ ಬಹುತೇಕ ಜೋಡಿ ಕರೆಗಳಲ್ಲಿ ನಡೆಯುತ್ತದೆ.

Advertisement

ವಿದ್ಯುತ್‌ನ ಆವಿಷ್ಕಾರವಾದ ಬಳಿಕ ಕೆಲವೆಡೆ ರಾತ್ರಿ ಹೊನಲು ಬೆಳಕಿನ ಕಂಬಳದ ವ್ಯವಸ್ಥೆ ರೂಪುಗೊಂಡಿದೆ. ಈಗ ಶನಿವಾರ- ರವಿವಾರಗಳಂದು ಝಗಮಗಿಸುವ ವಿದ್ಯುತ್‌ ದೀಪಗಳೊಂದಿಗೆ ನಡೆ ಯುವ ಹೊನಲು ಬೆಳ ಕಿನ ಕಂಬಳವೆಂದರೆ ಅದು ವಸ್ತುಶಃ ಜನಪದ ಉತ್ಸವ. ಆಧುನಿಕತೆಯ ಪರಿಣಾಮ ವಾಗಿ ಈಗ ಫೋಟೋ ಫಿನಿಶ್‌ ಮೂಲಕ ತೀರ್ಪು ನೀಡಲಾಗುತ್ತದೆ. ಪ್ರಾಚೀನ ಕಾಲದಲ್ಲಿ ನಿರ್ಧಾರ ಅಸಾಧ್ಯ ವಾದಾಗ ಸಮ ಸಮ ಎಂಬ ತೀರ್ಪು ನೀಡುತ್ತಿದ್ದರೆಂದು ದಾಖ ಲೆಗಳಿವೆ.

ಈಗ ಕಂಬಳವು ರಾಜ್ಯದ ರಾಜಧಾನಿಯನ್ನೂ ತಲುಪಿದೆ. ರಾಷ್ಟ್ರದ ರಾಜಧಾನಿಯನ್ನೂ ತಲುಪುವ ಸೂಚನೆಗಳಿವೆ.
ಹಿಂದೆ ಗದ್ದೆಯನ್ನು ಭತ್ತದ ಕೃಷಿಗಾಗಿ ಉತ್ತ ಬಳಿಕ ಹದಗೊಳಿಸಲು ಕೋಣಗಳಿಗೆ ಹಲಗೆಯನ್ನು ಕಟ್ಟಿ ಅದರ ಮೇಲೆ ರೈತ ನಿಂತು ಕೆಲವು ಸುತ್ತು ಬಂದಾಗ ಗದ್ದೆ ಹದಗೊಂಡು ಭತ್ತದ ಬೀಜ ಬಿತ್ತನೆಗೆ ಸಿದ್ಧವಾಗುತ್ತಿತ್ತು. ಇದೇ ಮುಂದೆ ಕಂಬಳದ ಪರಿಕಲ್ಪನೆಗೆ ನಾಂದಿ ಯಾಗಿ ರಬಹುದೆಂಬ ಅಭಿಪ್ರಾಯವನ್ನು ಮಾನ್ಯ ಮಾಡಬಹುದಾಗಿದೆ.
ಸಾಮಾನ್ಯವಾಗಿ ಕಂಬಳದಲ್ಲಿ 4 ವಿಧಗಳಿವೆ. ಹಗ್ಗ (ಹಿರಿಯ-ಕಿರಿಯ), ನೇಗಿಲು (ಹಿರಿಯ-ಕಿರಿಯ), ಅಡ್ಡ ಹಲಗೆ, ಕನೆ ಹಲಗೆ. ಈ ಪೈಕಿ ಕನೆ ಹಲಗೆಯು ವಿಶೇಷ ಆದ್ಯತೆಯನ್ನು ಹೊಂದಿರುತ್ತದೆ. ಏಕೆಂದರೆ ಇಲ್ಲಿ ಕರೆಯ ನಡುವಣ ಸುಮಾರು 20 ಅಡಿ ಎತ್ತರದಲ್ಲಿರುವ ಶ್ವೇತ ವಸ್ತ್ರದ ನಿಶಾನೆಗೆ ಕೆಸರು ನೀರು ಚಿಮ್ಮಬೇಕು. ಇದು ಅತೀ ರೋಮಾಂಚಕವಾದ ಕ್ಷಣಗಳೂ ಹೌದು. ಓಟ ಪೂರೈಸಿದ ಕೋಣಗಳು ಗದ್ದೆಗಿಂತ ಸ್ವಲ್ಪ ಎತ್ತರದ ಮಂಜೊಟ್ಟಿ ಎಂಬ ಪ್ರದೇಶದಲ್ಲಿ ಆರೈಕೆದಾರರ ನೆರವಿನಿಂದ ನಿಲುಗಡೆಗೊಳ್ಳುತ್ತದೆ. ಕಂಬಳದ ಯಜಮಾನರು ಬಳಸುವ ಗೌರವದ ನಾಗರಬೆತ್ತವು ಅತ್ಯಾಕರ್ಷ ಕವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಾನೂನು ಮಾನ್ಯತೆಯಿಂದ ಅಹಿಂಸಾತ್ಮಕವಾಗಿ ಕೋಣಗಳನ್ನು ಓಡಿಸುವುದು ಸಂಪ್ರದಾಯವಾಗಿದೆ.

ಈ ಹಿಂದೆ ಒಂದೇ ದಿನ 2-3 ಕಡೆಗಳಲ್ಲಿ ಕಂಬಳ ನಡೆಯುತ್ತಿತ್ತು. ಆಗ ಕೆಲವು ಯಜಮಾನರು ತಮ್ಮ ಕೋಣಗಳನ್ನು ಒಂದೇ ಕಡೆ ಕಣಕ್ಕೆ ಇಳಿಸುವ ಅನಿವಾರ್ಯವಿತ್ತು. ಈಗ ಕಂಬಳ ಸಂಘಟನೆಗೆ ಜಿಲ್ಲಾಮಟ್ಟದ ಸಮಿತಿಯು ರಚನೆಯಾಗಿದೆ. ಆಯಾ ಪ್ರದೇಶಗಳಿಗೆ ಕಂಬಳದ ದಿನಾಂಕಗಳನ್ನು ಈ ಸಮಿತಿಯವರೇ ನೀಡುವುದರಿಂದ ಎಲ್ಲ ಕಂಬಳಗಳಲ್ಲೂ ಯಜಮಾನರು ತಮ್ಮ ಕೋಣಗಳನ್ನು ಓಡಿಸಲು ಸಾಧ್ಯವಾಗುತ್ತದೆ.

ದೇವರ ಕಂಬಳ, ಧೂಳು ಕಂಬಳ, ಅರಮನೆ ಕಂಬಳ ಮುಂತಾದ ವೈವಿಧ್ಯಗಳೂ ಇವೆ. ಕಂಬಳ ಮುಕ್ತಾಯದ ಅನಂತರ ಆ ಗದ್ದೆ ಅಥವಾ ಕರೆಗಳಲ್ಲಿ ಹೂವಿನ ಅಲಂಕಾರದ ಪೂಕರೆಯನ್ನು ಇರಿಸಲಾಗುತ್ತದೆ. ಕಂಬಳದ ಜೋಡಿಗಳನ್ನು ಆಯಾ ಮನೆಗಳಿಂದ ಕಳಿಸುವ, ಗದ್ದೆಗೆ ಇಳಿಸುವ ಸಂದರ್ಭವೂ ವಿಧಿವಿಧಾನಗಳಿಂದ ಕೂಡಿರುತ್ತವೆ.

ಜಗತ್ತಿನ ಕೆಲವು ಪ್ರದೇಶಗಳಲ್ಲೂ ಈ ಕಂಬಳ ಸ್ವರೂಪದ ಕ್ರೀಡೆ ಇದೆ. ದಕ್ಷಿಣ ಅಮೆರಿಕದ ಮಾಯಾ ಜನಾಂಗದವರು ಆಚರಿಸುತ್ತಾ ಬಂದಿ ದ್ದಾರೆ. ಇಲ್ಲಿ ಕಂಬಳಕ್ಕೆ ಆಂಗ್ಲ ಭಾಷೆಯಲ್ಲಿ ಬಫೆಲ್ಲೋ ರೇಸ್‌ ಎಂಬ ಹೆಸರು ಬಂದಿದೆ.

ಅಂದಹಾಗೆ ಸೆಲೆಬ್ರಿಟಿಗಳ ಹಾಗೆ ಕಂಬಳದ ಕೋಣಗಳು ಕೂಡ ಅಪಾರ ಜನಪ್ರಿಯತೆ ಹೊಂದಿವೆ. ಇಂತಹ ಯಜಮಾನರ ಇಂತಹ ಜೋಡಿಗಳು ಇಂತಿಂಥ ಕಡೆ ಚಿನ್ನದ ಪದಕ ಪಡೆದಿವೆ ಎಂಬೆಲ್ಲ ಈ ಕೋಣಗಳ ಸಾಧನೆಯ ವಿವರಗಳು ಅಭಿಮಾನಿಗಳಲ್ಲಿ ಇರುತ್ತವೆ!

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next