Advertisement

ಜಡತ್ವ ತುಂಬಿದ ದೇಹಕ್ಕೆ ಕ್ರೀಡೆಯೇ ಔಷಧ: ಕಾಮತ್‌

12:43 PM Dec 09, 2018 | |

ಮಹಾನಗರ: ಜಡತ್ವ ತುಂಬಿದ ದೇಹಕ್ಕೆ ಕ್ರೀಡೆಯೇ ಔಷಧ. ದೈಹಿಕ ಮತ್ತು ಮಾನಸಿಕವಾಗಿ ಯಶಸ್ಸು ಕಾಣಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಾಸಕ ಡಿ. ವೇದವ್ಯಾಸ ಕಾಮತ್‌ ಹೇಳಿದರು. ಕ್ರೀಡಾಭಾರತಿ ಮಂಗಳೂರು, ದ.ಕ. ಪವರ್‌ ಲಿಫ್ಟಿಂಗ್ ಸಂಸ್ಥೆ ಮಂಗಳೂರು ಇದರ ಆಶ್ರಯದಲ್ಲಿ ನಗರದ ಎನ್‌ಜಿಒ ಸಭಾಂಗಣದಲ್ಲಿ ಶನಿವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಪುರುಷರ ಮತ್ತು ಮಹಿಳೆಯರ ಪವರ್‌ ಲಿಫ್ಟಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಯೋಗ ಮತ್ತು ಪ್ರಾಣಾಯಾಮ ದೈಹಿಕ ಮತ್ತು ಮಾನಸಿಕವಾಗಿ ಶಕ್ತಿ ನೀಡುತ್ತದೆ. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವು ಸಾಮಾನ್ಯ. ಗೆದ್ದರೆ ಹಿಗ್ಗದೆ, ಸೋತರೆ ಕುಗ್ಗದೆ ಸಾಧನೆ ಮಾಡುವತ್ತ ಗುರಿ ಇಟ್ಟಿರಬೇಕು. ಕ್ರೀಡೆಗೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಕ್ರೀಡಾ ಭಾರತಿ ಸಂಸ್ಥೆಯು ಕೆಲವು ವರ್ಷಗಳಿಂದ ಮಾಡುತ್ತಿದೆ ಎಂದರು.

ದೈಹಿಕ ಸಾಮರ್ಥ್ಯ ಮುಖ್ಯ
ಕ್ರೀಡಾಭಾರತಿ ರಾಜ್ಯಾಧ್ಯಕ್ಷ ಲಕ್ಷ್ಮೀಶ್‌ ವೈ.ಎಸ್‌. ಮಾತನಾಡಿ, ಇಂದಿನ ಕಾಲದಲ್ಲಿ ಯುವಜನರು ಮುಪ್ಪಿನ ಜೀವನ ಹೋಗಲಾಡಿಸಲು ಕ್ರೀಡೆಯೇ ಮದ್ದು. ಚಟುವಟಿಕೆಯ ಮೆರುಗು ಮೂಡಿಸುವ ಶಕ್ತಿ ಕ್ರೀಡೆಗಿದೆ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ದೈಹಿಕ ಸಾಮರ್ಥ್ಯವೂ ಮುಖ್ಯ ಎಂದರು.

ಕ್ರೀಡಾಳುಗಳು ಉದ್ದೀಪನ ಮದ್ದು ಸೇವಿಸಬಾರದು. ಸೇವಿಸಿದ ಶೇ. 80ರಷ್ಟು ಮಂದಿ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೆಲವು ಒಲಿಂಪಿಕ್ಸ್‌ ಕ್ರೀಡಾಳುಗಳು ಉದ್ದೀಪನ ಮದ್ದು ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.

ದೇಸಿ ಕ್ರೀಡೆಗೆ ಪ್ರೋತ್ಸಾಹ
ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಾಂತ್ಯ ಸಂಚಾಲಕ ಡಾ| ಪಿ. ವಾಮನ ಶೆಣೈ ಮಾತನಾಡಿ, ಯಾವುದೇ ವ್ಯಕ್ತಿಯು ಲವಲವಿಕೆಯಿಂದ, ದೈಹಿಕ ಮತ್ತು ಮಾನಸಿಕ ಆರೋಗ್ಯದಿಂದ ಇರಬೇಕಾದರೆ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಕ್ರೀಡಾ ಭಾರತಿ ಕೆಲವು ವರ್ಷಗಳಿಂದ ದೇಸಿ ಕ್ರೀಡೆಯನ್ನು ಪ್ರೋತ್ಸಾಹಿಸುತ್ತಿದೆ ಎಂದರು.

Advertisement

ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಚಿವರಾದ ನಾಗರಾಜ ಶೆಟ್ಟಿ, ಕೃಷ್ಣ ಜೆ. ಪಾಲೆಮಾರ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಗಣೇಶ್‌ ಕಾರ್ಣಿಕ್‌, ಕರ್ನಾಟಕ ಪವರ್‌ ಲಿಫ್ಟಿಂಗ್  ಸಂಸ್ಥೆಯ ಗೌರವ ಕಾರ್ಯದರ್ಶಿ ಸತೀಶ್‌ ಕುಮಾರ್‌ ಕುದ್ರೋಳಿ, ಅಂತಾರಾಷ್ಟ್ರೀಯ ಪವರ್‌ ಲಿಫ್ಟರ್‌ ಕಮಲಾಕ್ಷ ಅಮೀನ್‌, ಜಿ.ಪಂ. ಸದಸ್ಯ ಈಶ್ವರ ಕಟೀಲು, ಸಂಯೋಜಕ ಭೋಜರಾಜ ಕಲ್ಲಡ್ಕ, ಕ್ರೀಡಾಭಾರತಿ ಮಂಗಳೂರು ಅಧ್ಯಕ್ಷ ಬಿ. ಕಾರಿಯಪ್ಪ ರೈ, ಮಧುಚಂದ್ರ, ಕಾರ್ಪೊರೇಟರ್‌ ದಿವಾಕರ್‌, ಜಯಪ್ಪ ಲಮಾನಿ, ಸುರೇಂದ್ರ ಶೆಣೈ, ಪ್ರಮೋದ್‌ ಆರಿಗ, ಹರೀಶ್‌ ರೈ, ಕೃಷ್ಣ ಶೆಟ್ಟಿ ತಾರೆಮಾರು ಮೊದಲಾದವರಿದ್ದರು.

150ಕ್ಕೂ ಹೆಚ್ಚಿನ ಕ್ರೀಡಾಪಟು ಭಾಗಿ
ಪವರ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 150ಕ್ಕೂ ಮಿಕ್ಕಿ ಪುರುಷರು ಮತ್ತು ಮಹಿಳಾ ಸ್ಪರ್ಧಿಗಳು ಭಾಗವಹಿಸಿದ್ದರು. ಎಲ್ಲ ವಯೋಮಿತಿಯವರಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿತ್ತು. ಒಟ್ಟಾರೆ 8 ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next