ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ 1,790 ಮತಗಟ್ಟೆಗಳು ಕಾರ್ಯನಿರ್ವಹಿಸಲಿವೆ. ಬಂಟ್ವಾಳ ಕ್ಷೇತ್ರದಲ್ಲಿ (246) ಅತೀ ಹೆಚ್ಚು ಮತಗಟ್ಟೆಗಳು ಇದ್ದು, ಅತೀ ಕಡಿಮೆ ಅಂದರೆ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ 200 ಬೂತ್‌ಗಳು ಇವೆ. ಉಳಿದಂತೆ ಬೆಳ್ತಂಗಡಿಯಲ್ಲಿ 241, ಮೂಡಬಿದಿರೆಯಲ್ಲಿ 209, ಮಂಗಳೂರು ಉತ್ತರದಲ್ಲಿ 229, ಮಂಗಳೂರು ದಕ್ಷಿಣದಲ್ಲಿ 220, ಪುತ್ತೂರಿನಲ್ಲಿ 217 ಹಾಗೂ ಸುಳ್ಯದಲ್ಲಿ 228 ಮತಗಟ್ಟೆಗಳು ಇರಲಿವೆ.
ಜಿಲ್ಲೆಯಲ್ಲಿ ನಗರ/ಪಟ್ಟಣ ಪ್ರದೇಶಗಳ ಪ್ರತೀ ಮತಗಟ್ಟೆಯಲ್ಲಿ 1,400ಕ್ಕೂ ಅಧಿಕ ಮತದಾರರಿರುವ 44 ಮತಗಟ್ಟೆಗಳಿವೆ. ಮಂಗಳೂರು ದಕ್ಷಿಣದಲ್ಲಿ 18 ಹಾಗೂ ಮಂಗಳೂರು ಉತ್ತರದಲ್ಲಿ 15 ಇಂಥ ಮತಗಟ್ಟೆಗಳಿವೆ. ಗ್ರಾಮಾಂತರ ಪ್ರದೇಶದಲ್ಲಿ 1,300ಕ್ಕೂ ಅಧಿಕ ಮತದಾರರಿರುವ 27 ಮತಗಟ್ಟೆಗಳಿದ್ದು, ಈ ಪೈಕಿ ಮೂಡಬಿದಿರೆ ಕ್ಷೇತ್ರದಲ್ಲಿ 10 ಹಾಗೂ ಮಂಗಳೂರು ಕ್ಷೇತ್ರದಲ್ಲಿ 8 ಮತಗಟ್ಟೆಗಳಿವೆ.
ಸುಗಮ ಚುನಾವಣೆ ನಡೆಯುವುದಕ್ಕಾಗಿ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರಗಳಿಗೆ ವಿವಿಧ ತಂಡಗಳನ್ನು ರಚಿಸಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ, ಪ್ರಮುಖ ಜಂಕ್ಷನ್‌ಗಳಲ್ಲಿ, ಅಂತರ್‌ಜಿಲ್ಲಾ ಹಾಗೂ ಅಂತರ್‌ರಾಜ್ಯ ಗಡಿ ಪ್ರದೇಶಗಳ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲು ಹಾಗೂ ನಿಗಾ ವಹಿಸಲು ಜಿಲ್ಲೆಯಾದ್ಯಂತ 51 ತಂಡಗಳನ್ನು (ಎಸ್‌ಎಸ್‌ಟಿ) ರಚಿಸಲಾಗಿದೆ. ಪ್ರತೀ ತಂಡದಲ್ಲಿ ಮೂವರು ಅಧಿಕಾರಿಗಳಿರುತ್ತಾರೆ.
ಇದೇ ರೀತಿ ವಿವಿಧ ಕಾರ್ಯಕ್ರಮಗಳ ಹಾಗೂ ಸಭೆಗಳ ವೀಡಿಯೋ ಚಿತ್ರೀಕರಣ ನಡೆಸಲು 51 ತಂಡಗಳನ್ನು ರಚಿಸಲಾಗಿದೆ. ಈ ತಂಡ ಚಿತ್ರೀಕರಿಸಿದ ವೀಡಿಯೋ ದೃಶ್ಯಗಳನ್ನು ವೀಕ್ಷಿಸಿ ವರದಿ ಸಲ್ಲಿಸಲು ಪ್ರತ್ಯೇಕವಾಗಿ 16 ತಂಡ ರಚಿಸಲಾಗಿದೆ. ಅದೇ ರೀತಿ ಅಧಿಕಾರಿಗಳ ನೇತೃತ್ವದಲ್ಲಿ 44 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದ್ದು, ಈ ತಂಡವು ವಿಧಾನಸಭಾ ಕ್ಷೇತ್ರಾದ್ಯಂತ ಸಂಚರಿಸಿ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲಿದೆ.
ಇದಲ್ಲದೆ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ ಎರಡು ಅಕೌಂಟಿಂಗ್ ತಂಡಗಳನ್ನು ಹಾಗೂ ತಲಾ ಇಬ್ಬರು ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದೆ.