ಮಹಾನಗರ: ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದ ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯ ಮುಂದಿನ ಕಾಮಗಾರಿಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲು ತೀರ್ಮಾನಿ ಸಲಾಗಿದ್ದು, ಕಾಮಗಾರಿಯ ನಿಯಮಗಳು ಸಮರ್ಪಕವಾಗಿ ಪಾಲನೆಯಾಗುವಂತೆ ಎಚ್ಚರ ವಹಿಸಲು ಗುತ್ತಿಗೆದಾರರ ಮೇಲೆ ನಿರಂತರ ನಿಗಾ ವಹಿಸಲು ಸ್ಮಾರ್ಟ್‌ಸಿಟಿ ನಿಗಮ ತೀರ್ಮಾನಿಸಿದೆ.
ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ಸ್ಮಾರ್ಟ್‌ಸಿಟಿ ಕಾಮಗಾರಿ ಆರಂಭಕ್ಕೆ ವಾರದ ಹಿಂದೆಯಷ್ಟೇ ಹೈಕೋರ್ಟ್ ಹಸುರು ನಿಶಾನೆ ನೀಡಿದರೂ ಕಾಮಗಾರಿ ಮಾತ್ರ ಇನ್ನೂ ಪೂರ್ಣ ಪ್ರಮಾಣದಲ್ಲಿ ಎಲ್ಲಿಯೂ ಆರಂಭವಾಗಿಲ್ಲ. ಜಲ್ಲಿ ಕೊರತೆ ಸಹಿತ ನಾನಾ ರೀತಿಯ ಕಾರಣಗಳಿಗೆ ಕಾಮಗಾರಿ ಪುನರಾರಂಭ ವಿಳಂಬವಾಗುತ್ತಿದೆ.
ಸ್ಮಾರ್ಟ್‌ಸಿಟಿ ಕಾಮಗಾರಿ ವೇಳೆ ಕಟ್ಟಡ ನೆಲಸಮದ ತ್ಯಾಜ್ಯ ನಿರ್ವಹಣೆಯಲ್ಲಿ ನಿಯಮ ಪಾಲನೆ ಮಾಡಲಾಗುತ್ತಿಲ್ಲ ಎಂಬ ಕಾರಣಕ್ಕೆ ಸುಮಾರು ಎರಡು ತಿಂಗಳ ಕಾಲ ನಗರದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ ಸ್ಥಗಿತಗೊಂಡಿತ್ತು. ನ್ಯಾಯಾಲಯದ ನಿರ್ದೇಶನದ ಮೇರೆಗೆ “ನೀರಿ’ ತಂಡದ ಸದಸ್ಯರು ಮಂಗಳೂರಿಗೆ ಆಗಮಿಸಿ, ಸ್ಮಾರ್ಟ್‌ಸಿಟಿ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿ ವೇಳೆ ಯಾವೆಲ್ಲಾ ನಿಯಮ ಪಾಲನೆ ಮಾಡಬೇಕು ಎಂಬ ವರದಿಯನ್ನು ನ್ಯಾಯಾಲಯಕ್ಕೆ ನೀಡಿದ್ದರು. ಅದರಂತೆ ನಿಯಮ ಪಾಲನೆಗೆ ಒತ್ತು ನೀಡಿ ಸ್ಮಾರ್ಟ್ ಸಿಟಿ ಲಿ.ನಿಂದ ದೃಢೀಕರಣ ಪತ್ರದೊಂದಿಗೆ ಕಾಮಗಾರಿ ಆರಂಭಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು.
ಸದ್ಯ ಸ್ಮಾರ್ಟ್‌ಸಿಟಿಯ ಸಣ್ಣ ಮಟ್ಟದ ಕಾಮಗಾರಿಗಳು ಮಾತ್ರ ಆರಂಭವಾಗಿದೆ. ಅಂದರೆ, ಕಟ್ಟಡಗಳ ಪ್ಲಾಸ್ಟರಿಂಗ್, ಬ್ಲಾಕ್ ಕಾಮಗಾರಿಗಳು ನಡೆಯುತ್ತಿದೆ. ನಗರದ ಇನ್ನಿತರ ಕಡೆಗಳಲ್ಲಿ ಸಿಮೆಂಟ್-ಮರಳು ಉಪಯೋಗಿತ ಕಾಮಗಾರಿಗಳಷ್ಟೇ ನಡೆಯುತ್ತಿದೆ. ಕೆಲವೆಡೆ ಯುಜಿಡಿ ಕಾಮಗಾರಿಯೂ ಪುನರಾರಂಭವಾಗಿದೆ. ಆದರೆ, ಕಾಂಕ್ರೀಟ್ ಕಾಮಗಾರಿ ಸಹಿತ ನಗರದಲ್ಲಿನ ಯಾವುದೇ ರಸ್ತೆ ಕಾಮಗಾರಿಗಳು ಇನ್ನೂ ಆರಂಭವಾಗಿಲ್ಲ.
ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಇನ್ನು ಮುಂದೆ ನಗರದಲ್ಲಿ ನಡೆಯುವ ಯಾವುದೇ ಸ್ಮಾರ್ಟ್‌ಸಿಟಿ ಕಾಮಗಾರಿಯಲ್ಲಿ ನಿಯಮ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಲು ನಿಗಮ ತೀರ್ಮಾನಿಸಿದೆ. ಒಂದು ವೇಳೆ, ಕಾಮಗಾರಿ ಸ್ಥಳದಲ್ಲಿ ತ್ಯಾಜ್ಯಗಳ ನಿರ್ವಹಣೆ ಸಹಿತ ಸೂಕ್ತ ನಿರ್ದೇಶನ- ಮಾರ್ಗಸೂಚಿಗಳು ಪಾಲನೆಯಾಗದಿದ್ದರೆ ಅದಕ್ಕೆ ಗುತ್ತಿಗೆದಾರರೇ ಜವಾಬ್ದಾರರು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ “ನಿಯಮ ಪಾಲನೆ ಮಾಡುತ್ತೇವೆ’ ಎನ್ನುವ ದೃಢೀಕರಣ ಪತ್ರವನ್ನು ಗುತ್ತಿಗೆದಾರರು ಪ್ರತೀ ವಾರ ಸ್ಮಾರ್ಟ್‌ಸಿಟಿಗೆ ನೀಡಬೇಕು. ಇನ್ನೊಂದೆಡೆ, ನಿಯಮ ಸರಿಯಾಗಿ ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಸ್ಮಾರ್ಟ್‌ಸಿಟಿ ಅಧಿಕಾರಿಗಳು ಕೂಡ ಪ್ರತೀ ದಿನ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಇನ್ನೇನು ಕೆಲ ದಿನಗಳಲ್ಲಿಯೇ ಪೂರ್ವ ಮುಂಗಾರು ಮಳೆ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕಾಮಗಾರಿಗೆ ಮತ್ತಷ್ಟು ವೇಗ ನೀಡಬೇಕಾದ ಅನಿವಾರ್ಯವಿದೆ. ಆದರೆ, ಜಿಲ್ಲೆಯಲ್ಲಿ ಕಪ್ಪು ಕಲ್ಲು ಕೋರೆ ಸ್ಥಗಿತಗೊಂಡಿರುವ ಕಾರಣ ಸ್ಮಾರ್ಟ್‌ಸಿಟಿ ಕಾಮಗಾರಿ ನಡೆಸಲು ಇದೀಗ ಜಲ್ಲಿಯ ಕೊರತೆ ಎದುರಾಗಿದೆ. ಸದ್ಯ ನಗರದಲ್ಲಿ ನಡೆಯಲಿರುವ ಬಹುತೇಕ ಎಲ್ಲ ಕಾಮಗಾರಿಗಳಿಗೂ ಜಲ್ಲಿಯ ಅವಶ್ಯವಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಹೊಸ ತಲೆನೋವು ಶುರುವಾದಂತಾಗಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ವೇಳೆ ಉತ್ಪತ್ತಿಯಾಗುವ ಕಟ್ಟಡ ನಿರ್ಮಾಣ ತ್ಯಾಜ್ಯಗಳ ವಿಲೇವಾರಿ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಕುಂಜತ್ತಬೈಲ್ ಮತ್ತು ಪಚ್ಚನಾಡಿಯಲ್ಲಿ ಜಾಗ ಗುರುತಿಸಿದೆ. ಇದರಲ್ಲಿ ಈಗಾಗಲೇ ಪಚ್ಚನಾಡಿ ಪ್ರದೇಶ ಅಂತಿಮಗೊಂಡಿದೆ.
ನಿಯಮ ಪಾಲನೆ
ಮಂಗಳೂರಿನಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ಆರಂಭವಾಗಿವೆ. ಆದರೆ, ನಗರದಲ್ಲಿ ಕಾಮಗಾರಿಗೆ ಜಲ್ಲಿಯ ಸಮಸ್ಯೆ ಇದ್ದು, ಈಗಾಗಲೇ ಸಂಗ್ರಹ ಮಾಡಿದ ಜಲ್ಲಿ ಬಳಸಲಾಗುತ್ತಿದೆ. ಕಾಮಗಾರಿ ವೇಳೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ.
-ಪ್ರಶಾಂತ್ ಕುಮಾರ್ ಮಿಶ್ರಾ, ಸ್ಮಾರ್ಟ್ ಸಿಟಿ ಲಿ. ವ್ಯವಸ್ಥಾಪಕ ನಿರ್ದೇಶಕ