Advertisement

ದಕ್ಷಿಣ ಕನ್ನಡ: 310 ಗ್ರಾಮ-1 ಕೇಂದ್ರ ಸ್ಥಾಪನೆಗೆ ಸಿದ್ಧತೆ

02:34 AM May 01, 2022 | Team Udayavani |

ಮಂಗಳೂರು: ಸಮಗ್ರ ನಾಗರಿಕ ಸೇವಾ ಕೇಂದ್ರ “ಗ್ರಾಮ-1′ ಯೋಜನೆಯನ್ನು ರಾಜ್ಯದ 9 ಜಿಲ್ಲೆಗಳಲ್ಲಿ ಅನುಷ್ಠಾನ ಮಾಡುವ ಸಲುವಾಗಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣ ನಿರ್ದೇಶನಾಲಯ ತಯಾರಿ ನಡೆಸಿದ್ದು, ಜಿಲ್ಲೆಗಳ ಆಯ್ದ ಗ್ರಾಮಗಳಲ್ಲಿ ಪ್ರಾಂಚೈಸಿ ಆಧಾರದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯತ್‌ಗಳಿದ್ದು ಒಟ್ಟು 310 ಗ್ರಾಮ-1 ಕೇಂದ್ರಗಳನ್ನು ಆರಂಭಿಸಲಾಗುವುದು. ಪ್ರತೀ ಗ್ರಾ.ಪಂ.ನಲ್ಲಿ 7 ಸಾವಿರ ಜನಸಂಖ್ಯೆಯ ವರೆಗೆ 1 ಕೇಂದ್ರ, 7 ಸಾವಿರದಿಂದ 10 ಸಾವಿರ ಜನಸಂಖ್ಯೆ ಹೊಂದಿರುವಲ್ಲಿ 2 ಕೇಂದ್ರಗಳನ್ನು ಹಾಗೂ 10 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾ.ಪಂ.ವ್ಯಾಪ್ತಿಯಲ್ಲಿ 3 ಕೇಂದ್ರಗಳನ್ನು ಸ್ಥಾಪಿಸ‌ಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಶನಿವಾರ ಈ ಬಗ್ಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಹಾಗೂ ಎಲ್ಲ ಕಂದಾಯ ನಿರೀಕ್ಷಕರಿಗೆ ಮಾಹಿತಿ ನೀಡಿದರು.

ಏನಿದು ಗ್ರಾಮ-1?
ನಗರ ಪ್ರದೇಶಗಳಲ್ಲಿ ಸೇವೆ ನೀಡುತ್ತಿರುವ ಕರ್ನಾಟಕ ಒನ್‌, ಬೆಂಗಳೂರು ಒನ್‌ ಮಾದರಿಯಲ್ಲಿ ಹಳ್ಳಿಗರಿಗೂ ಸೇವೆ ನೀಡಲು ಸೇವಾಸಿಂಧು ಯೋಜನೆಯಡಿ ಗ್ರಾಮೀಣ ಭಾಗಗಳಲ್ಲಿ ಗ್ರಾಮ-1 ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಲ್ಲಿ 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಪಡೆಯಲು ಅರ್ಜಿ ಸ್ವೀಕರಿಸಲಾಗುವುದು. ಸಕಾಲ, ಮಾಹಿತಿ ಹಕ್ಕು ಅಧಿನಿಯಮ, ಬ್ಯಾಂಕಿಂಗ್‌ ಸೇವೆಗಳು ಹಾಗೂ ಸಾರ್ವಜನಿಕರ ಕುಂದುಕೊರತೆ ನಿವಾರಣೆ ಕೋರಿ ಅರ್ಜಿಗಳನ್ನು ಕೂಡ ಸ್ವೀಕರಿಸಲಾಗುವುದು.

ವಾರದ ಎಲ್ಲ ದಿನಗಳಲ್ಲೂ ಬೆಳಗ್ಗೆ 6ರಿಂದ ರಾತ್ರಿ 8ರ ವರೆಗೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಈ ಯೋಜನೆಯನ್ನು ಈಗಾಗಲೇ ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸ್ಥಾಪಿಸಿ ಯಶಸ್ವಿಯಾಗಿದೆ. ಇದೀಗ ದ.ಕ. ಜಿಲ್ಲೆಯ ಗ್ರಾಮಗಳಲ್ಲಿ ಆರಂಭಿಸಲು ಉದ್ದೇಶಿಸಿದ್ದು ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Advertisement

ಮಾನದಂಡಗಳು
ಫ್ರಾಂಚೈಸಿ ಅರ್ಜಿದಾರರು ಡಿಪ್ಲೊಮಾ/ಐಟಿಐ/ಪಿಯುಸಿ/ಪದವಿ/ಸ್ನಾತಕೋತ್ತರ ಪದವಿ ಅಥವಾ ತಾಂತ್ರಿಕ ವಿಭಾಗದಲ್ಲಿ ಪರಿಣತಿ ಹೊಂದಿರಬೇಕು ಹಾಗೂ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. ಅರ್ಜಿದಾರರು ಸ್ವಂತ ಕಟ್ಟಡ ಹೊಂದಿರಬೇಕು ಅಥವಾ ಟೈಲ್‌ ಗ್ರಾನೈಟ್‌ ಫ್ಲೋರಿಂಗ್‌, ಆರ್‌ಸಿಸಿ ಛಾವಣಿ ಇತ್ಯಾದಿ ಯಾವುದೇ ನೀರು ಸೋರಿಕೆಯಾಗದ ಕಟ್ಟಡಗಳಲ್ಲಿ ಗ್ರಾಮ-1 ಕೇಂದ್ರವನ್ನು ಸ್ಥಾಪಿಸಲು ತಯಾರಿರಬೇಕು. ಆಧಾರ್‌ ಸರ್ಟಿಫಿಕೇಟ್‌ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರೆ ಉತ್ತಮ. ಮಹಿಳೆಯರಿಗೆ, ಅಂಗವಿಕಲರಿಗೆ ಹಾಗೂ ತೃತೀಯ ಲಿಂಗಿಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತರು ಆನ್‌ಲೈನ್‌ ಮೂಲಕ ಮೇ 4ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ದ.ಕ. ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೇಂದ್ರದ ಪ್ರಯೋಜನ
– ಸರಕಾರಿ ಸೇವೆಗಳಿಗಾಗಿ ನಾಗರಿಕರು ಜಿಲ್ಲೆ, ತಾಲೂಕು ಅಥವಾ ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ
– ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಕೇಂದ್ರದಲ್ಲಿ ಪಡೆಯಬಹುದಾಗಿದೆ
– ನಾಗರಿಕರ ಸಮಯ ಮತ್ತು ಹಣವನ್ನು ಉಳಿತಾಯ
– ಮಧ್ಯವರ್ತಿಗಳ ಸಮಸ್ಯೆ ಇಲ್ಲ

Advertisement

Udayavani is now on Telegram. Click here to join our channel and stay updated with the latest news.

Next