Advertisement

ದ.ಕ.ಲೋಕಸಭಾ ಕ್ಷೇತ್ರ: ಕಾವೇರುತ್ತಿದೆ ಪ್ರಚಾರ; ವರಿಷ್ಠರಿಂದ ರಂಗೇರುತ್ತಿದೆ ಕಣ

01:49 AM Apr 09, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಕಣ ಕಾವೇರುತ್ತಿದೆ. ಬಹಿರಂಗ ಪ್ರಚಾರ ಎ. 16ರಂದು ಮುಕ್ತಾಯಗೊಳ್ಳಲಿದ್ದು ಇನ್ನು ಎಂಟು ದಿನಗಳು ಮಾತ್ರ ಬಾಕಿಯುಳಿದಿವೆ.


Advertisement

ಈ ಅವಧಿಯಲ್ಲಿ ಮತದಾರರನ ಜತೆ ನಂಟು ಸಾಧಿಸಿ ಮನೆ ಮನ ತಲುಪುವ ಕಾರ್ಯದಲ್ಲಿ ಬಿಜೆಪಿ, ಕಾಂಗ್ರೆಸ್‌ ಸಹಿತ ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು, ನಾಯಕರು ಬ್ಯುಸಿಯಾಗಿದ್ದಾರೆ. ಪಕ್ಷದ ಪರಮೋಚ್ಚ ನಾಯಕರನ್ನು ಕರೆಸಿ ಬೃಹತ್‌ ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ಬಿಜೆಪಿ ಹಾಗೂ ಕಾಂಗ್ರೆಸ್‌ ಬಹಿರಂಗ ಚುನಾವಣಾ ಪ್ರಚಾರ ಸಭೆಗಳನ್ನು, ರೋಡ್‌ಶೋಗಳನ್ನು ವ್ಯಾಪಕವಾಗಿ ಆಯೋಜಿಸುತ್ತಿವೆ. ಮತದಾರರ ಮನೆ ಮನೆ ಭೇಟಿಯಲ್ಲಿ ಕಾರ್ಯಕರ್ತರನ್ನು ತೊಡಗಿಸಿದೆ.

ಒಂದು ಸುತ್ತು ಪೂರ್ಣ
ಬಿಜೆಪಿಯು ಪ್ರಚಾರವನ್ನು ಬಿರುಸುಗೊಳಿಸಿದೆ. ಪಕ್ಷದ ಕಾರ್ಯಕರ್ತರು ಮತದಾರರ ಭೇಟಿಯ ಒಂದು ಸುತ್ತು ಪೂರ್ಣಗೊಳಿಸಿದ್ದಾರೆ. ನ‌ಮ್ಮ ಮನೆ ಮೋದಿ ಮನೆ ಅಭಿಯಾನ ನಡೆಸಿದೆ. ಎರಡನೇ ಸುತ್ತಿನ ಪ್ರಚಾರದಲ್ಲಿ ಮನೆ ಭೇಟಿ, ಸಾಧನೆಗಳ ಕರಪತ್ರ ವಿತರಣೆ ನಡೆಯುತ್ತಿದೆ. ಬೂತ್‌ಗಳಲ್ಲಿ ಮತದಾರರ ಜತೆ ಸಂವಾದ ನಡೆಸಲಾಗಿದೆ. ಚೌಕಿದಾರ್‌ ಪೇಟಾ ಧರಿಸಿ ಮೈ ಭೀ ಚೌಕಿದಾರ ರ್ಯಾಲಿಗಳು ನಡೆಯುತ್ತಿವೆ. ಪ್ರಬುದ್ಧರ ಜತೆ ಬಿಜೆಪಿ ಅಭ್ಯರ್ಥಿ ಸಂವಾದಗಳನ್ನು ನಡೆಸುತ್ತಿದ್ದಾರೆ.

ಕಾಂಗ್ರೆಸ್‌ ಅಭ್ಯರ್ಥಿ ಮಿಥುನ್‌ ರೈ ಕ್ಷೇತ್ರದಲ್ಲಿ ವ್ಯಾಪಕ ಪ್ರವಾಸ ನಡೆಸಿ ಮತಯಾಚನೆ, ರೋಡ್‌ಶೋ ನಡೆಸುತ್ತಿದ್ದಾರೆ. ನನ್ನ ಬೂತ್‌ ನನ್ನ ಹೊಣೆ ಅಭಿಯಾನ ನಡೆಸಿ ಮತದಾರರನ್ನು ಸಂಪರ್ಕಿಸಿ ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆ, ಕೇಂದ್ರ ಸರಕಾರದ ವೈಫಲ್ಯಗಳನ್ನು ಮತದಾರರಿಗೆ ವಿವರಿಸುತ್ತಿದೆ.

Advertisement

ನಿರಾಸೆ ಮಾಡದ ವರಸೆ
ಮತದಾರರು ಎಲ್ಲ ಪಕ್ಷದವರನ್ನು ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತಿದ್ದಾರೆ. ಯಾರಲ್ಲೂ ಮುನಿಸು ಇಲ್ಲ. ನಿರಾಕರಣೆ ಇಲ್ಲ. ಕಾರ್ಯಕರ್ತರು ನೀಡುವ ಚುನಾವಣಾ ಪ್ರಣಾಳಿಕೆ, ಅಭ್ಯರ್ಥಿಯ ವಿವರಗಳನ್ನೊಳಗೊಂಡ ಕರಪತ್ರವನ್ನು ಆಸಕ್ತಿಯಿಂದ ತೆಗೆದುಕೊಳ್ಳುತ್ತಾರೆ. ಅವರು ಹೇಳಿದ್ದನ್ನು ಕೇಳುತ್ತಾರೆ. ನಗುಮುಖದಿಂದಲೇ ಬೀಳ್ಕೊಡುತ್ತಾರೆ. ತನ್ನ ಅಂತರಂಗದ ನಿರ್ಧಾರವನ್ನು ಮಾತ್ರ ಬಿಟ್ಟುಕೊಡುತ್ತಿಲ್ಲ.

ಪ್ರಮುಖರಿಂದ ಪ್ರಚಾರ
ಪಕ್ಷದ ವರಿಷ್ಠ ನಾಯಕರನ್ನು ಜಿಲ್ಲೆಗೆ ಕರೆಸಿ ಬೃಹತ್‌ ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಲು ಬಿಜೆಪಿ ಹಾಗೂ ಕಾಂಗ್ರೆಸ್‌ ಈಗಾಗಲೇ ಕಾರ್ಯಯೋಜನೆಗಳನ್ನು ರೂಪಿಸಿದೆ. ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಬಿಜೆಪಿ ರಾಷ್ಟ್ರೀಯ ನಾಯಕ ಹಾಗೂ ಕೇಂದ್ರ ಗೃಹಸಚಿವ ರಾಜನಾಥ್‌ ಸಿಂಗ್‌ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿ ಬಿಜೆಪಿ ಶಕ್ತಿಕೇಂದ್ರಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಸಹಿತ ಪ್ರಮುಖ ನಾಯಕರು ಭಾಗವಹಿಸಿದ್ದರು. ಎ.13 ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿನ ಕೇಂದ್ರ ಮೈದಾನಿನಲ್ಲಿ ಬೃಹತ್‌ ಪ್ರಚಾರ ಸಭೆ ನಡೆಸಲಿದ್ದಾರೆ.

ಕಾಂಗ್ರೆಸ್‌ ಪ್ರಮುಖ ನಾಯಕರು ಜಿಲ್ಲೆಗೆ ಆಗಮಿಸಿ ಪ್ರಚಾರ ಸಭೆ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪಾಧ್ಯಕ್ಷ ವಿ.ಆರ್‌. ಸುದರ್ಶನ್‌ ಪ್ರಚಾರ ನಡೆಸಿದ್ದಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ ಮೈತ್ರಿಕೂಟದ ಅಭ್ಯರ್ಥಿ ಮಿಥುನ್‌ ರೈ ಪರವಾಗಿ ರೋಡ್‌ಶೋ ಕೈಗೊಂಡಿದ್ದಾರೆ.

ಮಂಗಳೂರಿಗೆ ರಾಹುಲ್‌?
ಮಂಗಳೂರಿನಲ್ಲಿ ಎ. 13ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಬೃಹತ್‌ ಚುನಾವಣಾ ಪ್ರಚಾರ ಸಭೆ ಆಯೋಜಿಸುವ ಬಗ್ಗೆ ಕೆಪಿಸಿಸಿ ಯೋಚನೆ ನಡೆಸಿತ್ತು. ಆದರೆ ಅಂದು ನರೇಂದ್ರ ಮೋದಿ ಸಭೆ ಮೊದಲೇ ನಿರ್ಧಾರವಾಗಿರುವುದರಿಂದ ಆ ಬಳಿಕ ರಾಹುಲ್‌ ಗಾಂಧಿಯವರ ಸಭೆ ಆಯೋಜಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಒಟ್ಟಾರೆಯಾಗಿ ರಾಹುಲ್‌ ಗಾಂಧಿಯವರ ದಿನಾಂಕ ಲಭ್ಯತೆ ಮೇಲೆ ಸಭೆ ನಿರ್ಧಾರವಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next