ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಕೊನೆಯ ಅವಧಿಯ ಸ್ಥಾಯೀ ಸಮಿತಿಗಳಿಗೆ ಮಂಗಳವಾರ ಚುನಾವಣೆ ನಡೆಯಲಿದೆ. ಬದಲಾದ ರಾಜಕೀಯ ಸ್ಥಿತಿಯಲ್ಲಿ ಆಡಳಿತ ಪಕ್ಷ ಬಿಜೆಪಿಯ ಸ್ಥಾಯೀ ಸಮಿತಿ ಮತದಾರರ ಸಂಖ್ಯೆ ವೃದ್ಧಿಸಿದ್ದು, ಅಖಾಡ ರಂಗೇರಿದೆ. ಸ್ಥಾಯೀ ಸಮಿತಿಗಳ 20 ತಿಂಗಳ 2 ಅವಧಿಗಳು ಪೂರ್ಣಗೊಂಡಿದ್ದು, 3ನೇ ಅವಧಿಗೆ ಮಂಗಳವಾರ ಚುನಾವಣೆ ನಡೆಯ ಲಿದೆ. ಒಟ್ಟು 5 ಸ್ಥಾಯೀ ಸಮಿತಿಗಳಿದ್ದು, ಪ್ರತೀ ಸಮಿತಿಯಲ್ಲಿ ತಲಾ 7 ಸದಸ್ಯರು ಇರುತ್ತಾರೆ.
ಜಿ.ಪಂ.ನಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿ ದ್ದರೂ ಕಳೆದ ಎರಡು ಅವಧಿಗಳಲ್ಲಿ ಸ್ಥಾಯೀ ಸಮಿತಿ ಮತದಾರರಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, 2 ಸ್ಥಾಯೀ ಸಮಿತಿಗಳ ಅಧ್ಯಕ್ಷತೆಯನ್ನು ಪಡೆದುಕೊಂಡಿತ್ತು. ಈಗ ಬಿಜೆಪಿ ಸಂಖ್ಯಾಬಲ ಹಿಗ್ಗಿದ್ದು, ಎಲ್ಲ ಸಮಿತಿಗಳ ಅಧ್ಯಕ್ಷತೆ ಪಡೆಯುವ ಸಾಧ್ಯತೆಯಿದೆ.
ಸ್ಥಾಯೀ ಸಮಿತಿಗಳ ಚುನಾವಣೆಯಲ್ಲಿ ಜಿ.ಪಂ. ಸದಸ್ಯರ ಜತೆ ಅದರ ವ್ಯಾಪ್ತಿಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ತಾ.ಪಂ. ಅಧ್ಯಕ್ಷರಿಗೂ ಮತದಾನ ಅವಕಾಶವಿದೆ. ಸಾಮಾನ್ಯವಾಗಿ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತವಿದ್ದಾಗ ಆಯ್ಕೆ ಚುನಾವಣೆಯಿಲ್ಲದೆ ನಡೆಯುತ್ತದೆ. ಸಮಾನ ಮತಗಳು ಅಥವಾ ಸರಳ ಬಹುಮತವಿದ್ದಾಗ ಚುನಾವಣೆ ಅನಿವಾರ್ಯ.
ದ.ಕ. ಜಿ.ಪಂ.ನಲ್ಲಿ ಬಿಜೆಪಿ 21 ಸದಸ್ಯ ರನ್ನು ಹೊಂದಿದೆ. ಸಂಸದ ನಳಿನ್, ಏಳು ಮಂದಿ ಬಿಜೆಪಿ ಹಾಗೂ ಪುತ್ತೂರು ಮತ್ತು ಸುಳ್ಯ ತಾ.ಪಂ. ಅಧ್ಯಕ್ಷರು ಒಟ್ಟು ಸೇರಿ 31 ಮಂದಿ ಸ್ಥಾಯೀ ಸಮಿತಿಗೆ ಮತದಾರ ರಾಗಿರುತ್ತಾರೆ. ಕಾಂಗ್ರೆಸ್ 15 ಸದಸ್ಯರನ್ನು ಹೊಂದಿದ್ದು, ಶಾಸಕ ಯು.ಟಿ. ಖಾದರ್, ವಿ.ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್, ಬಂಟ್ವಾಳ, ಮಂಗಳೂರು ಮತ್ತು ಬೆಳ್ತಂಗಡಿ ತಾ.ಪಂ. ಅಧ್ಯಕ್ಷರು ಸೇರಿ ಒಟ್ಟು 21 ಮಂದಿ ಮತದಾರರನ್ನು ಹೊಂದಿದೆ.
ಬಿಜೆಪಿ ನಡೆ ಇಂದು ನಿರ್ಧಾರ
ಈ ಬಾರಿ ಬಿಜೆಪಿ ಬಲ ವೃದ್ಧಿಯಾಗಿದ್ದು, ಸ್ಥಾಯೀ ಸಮಿತಿ ಅಧ್ಯಕ್ಷತೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಸಾಧ್ಯತೆ ಕಡಿಮೆ. ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಜಿ.ಪಂ. ಸದಸ್ಯರ ಸಭೆ ಮಂಗಳವಾರ ಬೆಳಗ್ಗೆ ನಡೆಯಲಿದ್ದು, ಪಕ್ಷದ ನಡೆ ನಿರ್ಧಾರವಾಗಲಿದೆ.