Advertisement

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

01:43 AM Apr 27, 2024 | Team Udayavani |

ಮಂಗಳೂರು: ತೀವ್ರ ಸೆಕೆ, ದೀರ್ಘ‌ ವಾರಾಂತ್ಯ ಈ ಎರಡೂ ಸವಾಲುಗಳ ನಡುವೆಯೂ ಶುಕ್ರವಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಭರ್ಜರಿ ಮತದಾನಕ್ಕೆ ಸಾಕ್ಷಿಯಾಯಿತು. ಯಾವುದೇ ಗಂಭೀರವಾದ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ಇಡೀ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು.

Advertisement

ಬಿಸಿಲಿನ ಬೇಗೆಯಿಂದ ತಪ್ಪಿಸುವುದಕ್ಕಾಗಿ ಬೆಳಗ್ಗೆ ಮತದಾನ ಆರಂಭವಾಗುವುದಕ್ಕೂ ಮೊದಲೇ ಜಿಲ್ಲೆಯಾದ್ಯಂತ ಮತದಾರರು ಬೂತ್‌ಗಳತ್ತ ಧಾವಿಸಿದರು. ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ 77.47ರಷ್ಟು ಮತದಾನ ದಾಖಲಾಗಿದೆ. ಕಳೆದ ಬಾರಿ ಶೇ 77.90 ಮತ ಚಲಾವಣೆಯಾಗಿದ್ದು, ಅದಕ್ಕಿಂತಲೂ ಕಡಿಮೆ ಮತದಾನವಾದ್ದರಿಂದ ಈ ಬಾರಿಯ ಗುರಿಯಾಗಿದ್ದ ಶೇ.80ನ್ನು ತಲಪುವುದು ಸಾಧ್ಯವಾಗಿಲ್ಲ. ಹಾಗಿದ್ದರೂ ಸೆಕೆಯ ತೀವ್ರತೆಗೆ ಮತದಾನ ಕಡಿಮೆಯಾಗಬಹುದೇನೋ ಎಂಬ ಕಳವಳ ಹುಸಿಯಾಯಿತು.

ಜಿಲ್ಲೆಯ 1876 ಮತಗಟ್ಟೆಗಳಲ್ಲಿ ಬೆಳಗ್ಗೆ 6ಕ್ಕೆ ಬೂತ್‌ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಸಲಾಯಿತು. ಬಳಿಕ 7 ರಿಂದ‌ ಆರಂಭಗೊಂಡ ಮತದಾನ ರಾತ್ರಿ ವರೆಗೂ ನಡೆಯಿತು. ಬೆಳಗ್ಗೆ ಬಹುತೇಕ ಕಡೆ ಜನ ಮತಚಲಾಯಿಸಿದರು. ಬಿಸಿಲೇರುತ್ತಿದ್ದಂತೆಯೇ ಮತದಾನ ಮಂದಗತಿ ಪಡೆಯಿತು. ಮತ್ತೆ ಸಂಜೆ 4ರ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತಗಟ್ಟೆ ಕಡೆ ಹರಿದುಬಂದರು. ಸಂಜೆ 6 ರ ವೇಳೆಗೆ ಮತದಾನ ಮುಗಿಯಬೇಕಿದ್ದರೂ,ಹಲವು ಮತಗಟ್ಟೆಗಳಲ್ಲಿ ಕೊನೆಕ್ಷಣದವರೆಗೂ ಮತ ಹಾಕಲು ಬಂದವರೆಲ್ಲರಿಗೂ ಚುನಾವಣ ಆಯೋಗ ಅವಕಾಶ ಮಾಡಿಕೊಟ್ಟ ಕಾರಣ ಅವರಿಗೆ ಟೋಕನ್‌ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು.

ಮತಯಂತ್ರ, ವಿವಿಪ್ಯಾಟ್‌ಗಳು ಕೈಕೊಟ್ಟು ಮತದಾನ ಕೆಲ ನಿಮಿಷ ಕಾಲ ವಿಳಂಬಗೊಂಡಿರುವುದು, ವಿದ್ಯುತ್‌ ಕೈಕೊಟ್ಟು ಬೆಳಕಿಲ್ಲದೆ ಮತದಾನ ತಡವಾಗಿರುವುದು ಬಿಟ್ಟರೆ ಉಳಿದಂತೆ ಯಾವುದೇ ಪ್ರಮುಖ ಲೋಪದೋಷಗಳು ಕಂಡು ಬರಲಿಲ್ಲ.

ನಕ್ಸಲ್‌ ಪ್ರದೇಶಗಳಲ್ಲೂ ನಿರಾತಂಕ
ಈ ಹಿಂದೆ ನಕ್ಸಲ್‌ ಪೀಡಿತವೆಂದು ಗುರುತಿಸಲ್ಪಟ್ಟ ಪ್ರದೇಶಗಳಲ್ಲೂ ವಿಶೇಷ ಕಮಾಂಡೊ ರಕ್ಷಣೆಯಲ್ಲಿ ಮತದಾನ ಸಾಂಗವಾಗಿ ನೆರವೇರಿತು. ಕೊಂಬಾರು, ಬಿಳಿನೆಲೆ, ನಾರಾವಿ, ಕುತ್ಲೂರು ಮುಂತಾದೆಡೆಗಳಲ್ಲೂ ಜನ ಬಂದು ಮತಹಾಕಿದರು.

Advertisement

ಮತದಾನ ತುಸು ಇಳಿಕೆ
2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ 0.43ರಷ್ಟು ಮತದಾನ ಇಳಿಕೆಯಾಗಿದೆ. ದೂರದ ಮತಗಟ್ಟೆಗಳಿಂದ ಸಿಬಂದಿ ಡಿಮಸ್ಟರಿಂಗ್‌ ಕೇಂದ್ರಗಳಿಗೆ ಬಂದು ಮಾಹಿತಿ ಪಡೆಯುವಾಗ ತಡವಾಗಿರುವುದರಿಂದ ಅಂತಿಮ ಅಂಕಿಅಂಶಗಳಲ್ಲಿ ತುಸು ಬದಲಾವಣೆಯ ನಿರೀಕ್ಷೆ ಇದೆ. 2014ರಲ್ಲಿ ಶೇ.77.19 ಮತದಾನವಾಗಿತ್ತು, 2018ರ ವಿಧಾನಸಭಾ ಚುನಾವಣೆಯಲ್ಲಿ ಶೇ.77.63, 2023ರ ವಿಧಾನಸಭಾ ಚುನಾವಣೆಯಲ್ಲಿ ಶೇ.77.27ರಷ್ಟು ಮತದಾನವಾಗಿತ್ತು.

ಪುತ್ತೂರು: ಮತಯಂತ್ರದಲ್ಲಿ ತಾಂತ್ರಿಕ ದೋಷ
ಮಂಗಳೂರು: ಪುತ್ತೂರು ಸುಧಾನ ಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ ಮತದಾನ ಆರಂಭವಾಗುತ್ತಿದ್ದಂತೆ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದಿತು. ಇದರಿಂದ 20 ನಿಮಿಷ ಪ್ರಕ್ರಿಯೆ ವಿಳಂಬವಾಯಿತು. ಮತದಾನ ಆರಂಭವಾಗುತ್ತಿದ್ದಂತೆ ಇವಿಎಂ ಯಂತ್ರದಲ್ಲಿ ಇನ್‌ ವ್ಯಾಲಿಡ್‌ ಎಂಬ ಸಂದೇಶ ಬಂದಿತು. ಕೂಡಲೇ ತಹಶೀಲ್ದಾರ್‌, ಎಸಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ ಬಳಿಕ ಇವಿಎಂ ಅನ್ನು ಸರಿಪಡಿಸಲಾಯಿತು.

ಹಿಂದುಳಿದ ನಗರವಾಸಿಗಳು
ನಿರೀಕ್ಷೆಯಂತೆ ಈ ಬಾರಿಯೂ ಮಂಗಳೂರು ನಗರ ದಕ್ಷಿಣದಲ್ಲಿ ಜಿಲ್ಲೆಯಲ್ಲೇ ಕಡಿಮೆ ಶೇ 66.29ರಷ್ಟು ಮತದಾನ ದಾಖಲಾಗಿದೆ. ಕಳೆದ ಬಾರಿಯೂ ಇದೇ ಕ್ಷೇತ್ರ ಅತಿ ಕಡಿಮೆ ಎಂದರೆ ಶೇ 70.21 ದಾಖಲಾಗಿತ್ತು. ಈ ಬಾರಿ ಅದಕ್ಕಿಂತ ಕಡಿಮೆ ಆಗಿದೆ. ವಿಶೇಷವಾಗಿ ನಗರ ವ್ಯಾಪ್ತಿಯ ಮತದಾರರನ್ನು ಕೇಂದ್ರೀಕರಿಸಿ, ಫ್ಲಾÂಟ್‌ಗಳಿಗೆ ಹೋಗಿ ಮನವೊಲಿಸುವ ಅಭಿಯಾನ ಈ ಬಾರಿ ನಡೆಸಲಾಗಿತ್ತು. ಆದರೂ ಮತದಾರರು ಉತ್ಸಾಹ ತೋರಿದಂತಿಲ್ಲ.

ಯಾವಾಗಲೂ ಮತದಾನದಲ್ಲಿ ಮುಂದಿರುವ ಸುಳ್ಯ ಕ್ಷೇತ್ರದ ಮತದಾರರು ಈ ಬಾರಿಯೂ ತಮ್ಮ ಅಗ್ರಸ್ಥಾನ ಬಿಟ್ಟು ಕೊಟ್ಟಿಲ್ಲ. ಆದರೆ ಕಳೆದ ಬಾರಿ ಶೇ. 84ರಷ್ಟಿದ್ದ ಮತದಾನ ಈ ಬಾರಿ ಶೇ 2ರಷ್ಟು ಇಳಿಕೆಯಾಗಿ ಶೇ 82ಕ್ಕಿಳಿದಿದೆ.

ಶೃಂಗೇರಿಯಲ್ಲಿ ಹೆಚ್ಚು, ಚಿಕ್ಕಮಗಳೂರಿನಲ್ಲಿ ಕಡಿಮೆ
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಮುಗಿದ ಚುನಾವಣೆಯು ಹೊಸ ದಾಖಲೆಯನ್ನು ಸೃಷ್ಟಿಸಿದೆ. ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಶೇ.76.06ರಷ್ಟು ಮತದಾನವಾಗಿದ್ದು ಸರ್ವಕಾಲಿಕ ದಾಖಲೆಯಾಗಿದೆ. 2019ರಲ್ಲಿ ಶೇ.75.91ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.0.15ರಷ್ಟು ಮತದಾನ ಹೆಚ್ಚಳಾಗಿದೆ.
ಕುಂದಾಪುರದಲ್ಲಿ ಶೇ.79.10, ಕಾಪುವಿನಲ್ಲಿ ಶೇ.79.03, ಉಡುಪಿ ಯಲ್ಲಿ ಶೇ.75.80, ಕಾರ್ಕಳದಲ್ಲಿ ಶೇ.78.50, ಚಿಕ್ಕಮಗಳೂರಿನಲ್ಲಿ ಶೇ.69.00, ಮೂಡಿಗೆರೆಯಲ್ಲಿ ಶೇ.75.12, ಶೃಂಗೇರಿಯಲ್ಲಿ ಶೇ.80.20 ಹಾಗೂ ತರಿಕೆರೆಯಲ್ಲಿ ಶೇ.73.20ರಷ್ಟು ಮತದಾನವಾಗಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಹಾಗೂ ಚಿಕ್ಕಮಗಳೂರಿನಲ್ಲಿ ಅತಿ ಕಡಿಮೆ ಮತದಾನವಾಗಿದೆ. ಶನಿವಾರ ಅಂತಿಮ ಲೆಕ್ಕಾಚಾರದ ಬಳಿಕ ಮತಪ್ರಮಾಣದಲ್ಲಿ ಕೊಂಚ ಏರಿಕೆಯಾಗುವ ಸಾಧ್ಯತೆಯಿದೆ.

ಡಿಮಸ್ಟರಿಂಗ್‌ ಪ್ರಕ್ರಿಯೆ ಶುರು
ಉಡುಪಿ ಸೈಂಟ್‌ ಸಿಸಿಲೀಸ್‌ ಶಾಲೆಯಲ್ಲಿ ಡಿಮಸ್ಟರಿಂಗ್‌ ಆರಂಭ ಗೊಂಡಿದ್ದು ಇಲ್ಲಿಗೆ ಪ್ರಥಮವಾಗಿ ಬಂದ ಮತಯಂತ್ರ ಉಡುಪಿಯ ಬೋರ್ಡ್‌ ಹೈಸ್ಕೂಲ್‌ನ 183 ಮತಗಟ್ಟೆಯದು. ಕಳೆದ ಬಾರಿ ಉಡುಪಿ ಪುತ್ತೂರು ಹನುಮಂತನಗರ ಮತಗಟ್ಟೆಯ ಮತಯಂತ್ರ ಮೊದಲು ಬಂದಿತ್ತು. ಚಿಕ್ಕಮಗಳೂರು ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರದ ಮತಯಂತ್ರಗಳು ಶನಿವಾರ ಬೆಳಗ್ಗೆ ಬರಲಿವೆ. ಎಂಟೂ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇಲ್ಲಿ ತಂದಿಡಲಾಗುವುದು. ಮತ ಎಣಿಕೆಯೂ ಇಲ್ಲಿಯೇ ನಡೆಯಲಿದೆ.

ಯುವ, ಶತಾಯುಷಿ, ಪುರಷ, ಮಹಿಳಾ ಮತದಾರರು ಸೇರಿದಂತೆ ಎಲ್ಲರೂ ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.

ಕೆಲವೆಡೆ ವ್ಯವಸ್ಥೆ ಲೋಪ
ಮಣಿಪಾಲದ ಎಂಜೆಸಿ ಮತಗಟ್ಟೆಯಲ್ಲಿ ಅಂಗವಿಕಲರಿಗೆ ಅಗತ್ಯ ಸೌಲಭ್ಯ ಕಲ್ಪಿಸದೇ ಇರುವುದರಿಂದ ಅಂಗವಿಕಲರೊಬ್ಬರು ಮತದಾನಕ್ಕೆ ಬಂದ ಸಂದರ್ಭದಲ್ಲಿ ಆಯತಪ್ಪಿ ಬಿದ್ದಿರುವ ಘಟನೆಯೂ ನಡೆದಿದೆ. ಹಿರಿಯ ನಾಗರಿಕರಿಗೆ ಸೂಕ್ತ ಮಾಹಿತಿ/ ವಿಶೇಷ ಮಾರ್ಗದರ್ಶನ ಕೊಡುವವರು ಇರಲಿಲ್ಲ. ಕಳೆದ ಚುನಾವಣೆಯಲ್ಲಿ ಮಾರ್ಗದರ್ಶ ನೀಡುವವರಿದ್ದರು. ಇದೇ ರೀತಿ ಕೆಲವು ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ್ದರೂ ನೀರು ಖಾಲಿಯಾಗುತ್ತಿದ್ದಂತೆ ಭರ್ತಿ ಮಾಡುವವರು ಇರಲಿಲ್ಲ. ಕೆಲವೆಡೆ ಮತದಾರರು ಬಿಸಿಲಿನಲ್ಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯ ಎದುರಾಗಿತ್ತು.

ಪಕ್ಷದ ಬ್ಯಾನರ್‌ ತೆರವು
ಎರಡೂ ಪಕ್ಷದ ಬೆಂಬಲಿಗರು ಮತಗಟ್ಟೆ ಸಮೀಪದ ಕೌಂಟರ್‌ನಲ್ಲಿ ಪಕ್ಷದ ಬ್ಯಾನರ್‌ಗಳನ್ನು ಅಳವಡಿಸಿಕೊಂಡಿದ್ದರು. ಪೊಲೀಸ್‌ ಅಧಿಕಾರಿಗಳು ಈ ಬ್ಯಾನರ್‌ಗಳನ್ನು ತೆರವುಗೊಳಿಸಿದು. ಸಣ್ಣ ಬ್ಯಾನರ್‌ ಹಾಕಬಹುದು, ಆದರೆ ಅಭ್ಯರ್ಥಿ ಚಿತ್ರ ಇರುವಂತಿಲ್ಲ ಎಂದು ಪೊಲೀಸರು ನಿರ್ದೇಶನ ನೀಡಿದರು. ಈ ವೇಳೆ ಪೊಲೀಸರು ಹಾಗೂ ಪಕ್ಷದ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ತಾಂತ್ರಿಕ ದೋಷವಿಲ್ಲ ಆದರೂ ವಿಳಂಬ ತಪ್ಪಿಲ್ಲ
ಬಹುತೇಕ ಮತಗಟ್ಟೆಗಳಲ್ಲಿ ಯಾವುದೇ ತಾಂತ್ರಿಕ ದೋಷ ಇಲ್ಲದೇ ಇದ್ದರೂ ಮತದಾನ ಪ್ರಕ್ರಿಯೆ ಮಾತ್ರ ಮಂದಗತಿಯಲ್ಲಿ ಸಾಗಿತ್ತು. ಬೆಳಗ್ಗೆ 9 ಗಂಟೆ ಸುಮಾರಿಗೆ ಮತಗಟ್ಟೆಗೆ ಬಂದ ಮತದಾರಿಗೆ ಮತದಾನ ಪೂರ್ಣಗೊಳಿಸಿ ಹೋಗುವಾಗ ಬೆಳಗ್ಗೆ 11 ಗಂಟೆ ಕಳೆದಿತ್ತು. ಮತದಾನ ಮಾಡಿದ ಅನಂತರದಲ್ಲಿ ಮತಯಂತ್ರದಿಂದ ಶಬ್ದ ಬರುವಾಗಿ ವಿಳಂಬವಾಗುತಿತ್ತು. ಅಲ್ಲದೆ, ವಿ.ವಿ. ಪ್ಯಾಟ್‌ನಲ್ಲಿ ಚಿತ್ರ ತೋರಿಸುವಾಗಲೂ ವಿಳಂಬ ವಾಗುತಿತ್ತು. ಹೀಗಾಗಿ ಮತದಾನ ಪ್ರಕ್ರಿಯೆಯೇ ನಿಧಾನಗತಿಯಲ್ಲಿ ಸಾಗಿದೆ.

-ಕುಂದಾಪುರದಲ್ಲಿ ಆ್ಯಂಬುಲೆನ್ಸ್‌ ಮೂಲಕ ಬಂದು ಮತ ಹಾಕಿರುವುದು, ಕಾರ್ಕಳದಲ್ಲಿ ಕುದುರೆ ಏರಿ ಬಂದು ಮತ ಹಾಕಿರುವುದು ಜಿಲ್ಲೆಯ ಆಕರ್ಷಣೆಯಾಗಿದೆ.
– 2019ರಲ್ಲಿ ಕನಿಷ್ಠ, 2024ರಲ್ಲಿ ಗರಿಷ್ಠ ಮತದಾನವಾಗಿತ್ತು.2019ರ ಲೋಕಸಭಾ ಚುನಾವಣೆ ಯಲ್ಲಿ ಶೇ.75.94ರಷ್ಟು ಮತದಾನವಾಗಿತ್ತು. ಈ ಬಾರಿ ದಾಖಲೆಯ ಶೇ.76.06ರಷ್ಟು ಮತದಾನವಾಗಿದೆ.

ಉಡುಪಿ: ಮತದಾನ ಶಾಂತಿಯುತ
ಉಡುಪಿ: ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆದಿಲ್ಲ. ಚುನಾವಣೆ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ತಿಳಿಸಿದ್ದಾರೆ.

ಮತದಾನದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಗತ್ಯ ಮುನ್ನೆಚ್ಚರಿಕೆ ಯಾಗಿ ಜಿಲ್ಲೆಯಷ್ಟೇ ಅಲ್ಲದೆ ಅನ್ಯ ರಾಜ್ಯದ ಪೊಲೀಸರನ್ನೂ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಕೆಲವೆಡೆ ತಾಂತ್ರಿಕ ಸಮಸ್ಯೆಗಳು ಎದುರಾದರೂ ಬಳಿಕ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಸುಸೂತ್ರವಾಗಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದರು. ಎಸ್‌ಪಿ ಹಾಗೂ ಹೆಚ್ಚುವರಿ ಎಸ್‌ಪಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಎಲ್ಲ ಸಾಮಾನ್ಯ ಬೂತ್‌ಗಳಲ್ಲಿ ಕನಿಷ್ಠ ಒಬ್ಬ ಪೊಲೀಸ್‌ ಸಿಬಂದಿಯಿದ್ದರು. ಗುಜರಾತ್‌ನ 3 ತಂಡ ಬಂದಿದ್ದು, 1 ತಂಡದಲ್ಲಿ ತಲಾ 100 ಮಂದಿಯಂತೆ ಒಟ್ಟು 300 ಪೊಲೀಸರು ಆಗಮಿಸಿದ್ದರು. ಉಳಿದಂತೆ ಜಿಲ್ಲೆ ಹಾಗೂ ಹೊರಜಿಲ್ಲೆಯ ಪೊಲೀಸರೂ ಚುನಾವಣೆ ಕರ್ತವ್ಯ ನಿರ್ವಹಿಸಿದರು. 57 ಸೆಕ್ಟರ್‌ ಅಧಿಕಾರಿಗಳು ಹಾಗೂ 14 ಇನ್‌ಸ್ಪೆಕ್ಟರ್‌ ಶ್ರೇಣಿಯ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿದರು.

80 ಬಡಗಬೆಟ್ಟು ಗ್ರಾ.ಪಂ. ವ್ಯಾಪ್ತಿಯ ರಾಜೀವ ನಗರ ಸಂಯುಕ್ತ ಪ್ರೌಢಶಾಲೆಯಯಲ್ಲಿ ನಕಲಿ ಮತದಾನದ ಬಗ್ಗೆ ಆರೋಪ ಕೇಳಿ ಬಂದಿತ್ತಾದರೂ, ಬಳಿಕ ಅಧಿಕಾರಿಗಳು ಆಗಿರುವ ಪ್ರಮಾದವನ್ನು ಒಪ್ಪಿಕೊಂಡರು. ಇಬ್ಬರ ಹೆಸರೂ ಒಂದೇ ರೀತಿ ಇದ್ದ ಕಾರಣ ಇಂತಹ ಘಟನೆ ನಡೆದಿರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದರು. ಮೇಲ್ವಿಚಾರಣ ಅಧಿಕಾರಿಗಳಲ್ಲದೆ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 4 ಮಂದಿ ಡಿವೈಎಸ್‌ಪಿಗಳು ನಿಗಾ ವಹಿಸಿದ್ದರು. ಸೂಕ್ಷ್ಮ ಮತಗಟ್ಟೆಗಳಲ್ಲಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೀಗೆ ಒಟ್ಟು 36 ಬೂತ್‌ಗಳಿಗೆ ಸಶಸ್ತ್ರಧಾರಿ ಸಿಬಂದಿಯಿದ್ದರು. ಹೆಚ್ಚುವರಿಯಾಗಿ 6 ಸಶಸ್ತ್ರ ಪೊಲೀಸ್‌ ಗಸ್ತು ವಾಹನಗಳಿದ್ದವು. ಕಾನೂನು ಸುವ್ಯವಸ್ಥೆಗೆ ಅಡ್ಡಿ ಉಂಟಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳು, ಎಲ್ಲ ಇನ್‌ಸ್ಪೆಕ್ಟರ್‌ಗಳನ್ನೊಳಗೊಂಡ ಸ್ಟೈಕಿಂಗ್‌ ಫೋರ್ಸ್‌ಗಳನ್ನು ನಿಯೋಜಿಸಿದ್ದರು.

ಅಲ್ಲಲ್ಲಿ ಇವಿಎಂ, ವಿವಿ ಪ್ಯಾಟ್‌ ತಾಂತ್ರಿಕ ದೋಷ
ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7ರಿಂದಲೇ ಆರಂಭವಾಗಿದ್ದರೂ ಕೆಲವೆಡೆ ಇವಿಎಂ, ವಿವಿ ಪ್ಯಾಟ್‌ ತಾಂತ್ರಿಕ ದೋಷದಿಂದ ಮತದಾನ ತುಸು ವಿಳಂಬವಾಯಿತು. ಕೆಲವೆಡೆ ಕೆಲವು ವಿವಿ ಪ್ಯಾಟ್‌ಗಳನ್ನು ಬದಲಾಯಿಸಲಾಯಿತು.

ಬಹುತೇಕ ಮತಗಟ್ಟೆಗಳಲ್ಲಿ 7 ಗಂಟೆಗೆ ಮೊದಲೇ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಅಧಿಕಾರಿಗಳು ಬೆಳಗ್ಗೆ 6 ರಿಂದಲೇ ಇವಿಎಂ, ವಿವಿಪ್ಯಾಟ್‌ ಸಂಯೋಜನೆ ಸಹಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಉದ್ಯಾವರ ಬೋಳಾರಗುಡ್ಡೆಯ ಸರಕಾರಿ ಪ.ಪೂ. ಕಾಲೇಜು ಮತಗಟ್ಟೆಯಲ್ಲಿ ವಿವಿಪ್ಯಾಟ್‌ ಕೈ ಕೊಟ್ಟಿದ್ದು, ಸುಮಾರು 25 ನಿಮಿಷ ವಿಳಂಬವಾಗಿ ಮತದಾನ ಶುರುವಾಯಿತು. ಬೆಳ್ಳೆ ಗ್ರಾ.ಪಂ.ವ್ಯಾಪ್ತಿಯ ಕಟ್ಟಿಂಗೇರಿ 104, ಬೆಳ್ಳೆ 103, ಕುರ್ಕಾಲು ಬಿಳಿಯಾರು 97 ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟಿದ್ದು ಸುಮಾರು ಅರ್ಧಗಂಟೆ ಕಾಲ ಮತದಾನ ಸ್ಥಗಿತಗೊಂಡಿತ್ತು.

ಕೋಟ ಮಣೂರು, ಉಡುಪಿ ಸರಕಾರಿ ಬಾಲಕಿಯರ ಪ.ಪೂ. ಕಾಲೇಜು ಮತಗಟ್ಟೆ, ಆದಿ ಉಡುಪಿ ಮತಗಟ್ಟೆ, ಹೆಬ್ರಿ ಮತಗಟ್ಟೆ, ನಿಟ್ಟೆ ಅತ್ತೂರು, ಸೂಡ 83, 43 ಮತಗಟ್ಟೆಗಳಲ್ಲಿ ಬೆಳಗ್ಗೆ ಇವಿಎಂ ತಾಂತ್ರಿಕ ದೋಷ ಕಂಡು ಬಂದಿತು. ಅನಂತರ ಅಧಿಕಾರಿಗಳು ಮತಯಂತ್ರ ಸರಿಪಡಿಸಿದರು. ಅನಂತರ ಸುಸೂತ್ರವಾಗಿ ಮತದಾನ ನಡೆಯಿತು. ಒಟ್ಟಾರೆಯಾಗಿ ಜಿಲ್ಲೆಯ ಕುಂದಾಪುರ ವ್ಯಾಪ್ತಿಯಲ್ಲಿ 2 ಇವಿಎಂ, 4 ವಿವಿಪ್ಯಾಟ್‌, ಉಡುಪಿಯಲ್ಲಿ 2 ಇವಿಎಂ, 4 ವಿವಿಪ್ಯಾಟ್‌, ಕಾಪುವಿನಲ್ಲಿ 11 ವಿವಿ ಪ್ಯಾಟ್‌ ಮತ್ತು ಕಾರ್ಕಳದಲ್ಲಿ 2 ವಿಇಎಂ ಹಾಗೂ 5 ವಿವಿ ಪ್ಯಾಟ್‌ ತಾಂತ್ರಿಕ ದೋಷದಿಂದಾಗಿ ಬದಲಾಯಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next