Advertisement
ಇದರೊಂದಿಗೆ ಕಳೆದ ವರ್ಷ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಗೆ ಗುರುತಿಸಿದ್ದ ಎಲ್ಲ 22 ದಿಬ್ಬಗಳ ಪರವಾನಿಗೆಗಳ ಅವಧಿ ಕೊನೆಗೊಳ್ಳಲಿದೆ.ಈ ಹಿನ್ನೆಲೆಯಲ್ಲಿ ಹೊಸದಾಗಿ ಮರಳು ದಿಬ್ಬ ಗುರುತಿಸಲು ಬೇಥಮೆಟ್ರಿಕ್ಸ್ ಸರ್ವೆಗೆ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಸರ್ವೇ ಆರಂಭಗೊಳ್ಳುವ ನಿರೀಕ್ಷೆಯಿದೆ. ಕಳೆದ ವರ್ಷ ಬೇಥಮೆಟ್ರಿಕ್ಸ್ ಸರ್ವೆಯಲ್ಲಿ ಗುರುತಿಸಿದ್ದ 22 ಮರಳು ದಿಬ್ಬಗಳ ಪೈಕಿ 12 ದಿಬ್ಬಗಳ ಪರವಾನಿಗೆ ಅ. 15ರಂದು ಮುಕ್ತಾಯಗೊಂಡಿದ್ದು, ಮರಳು ಗಾರಿಕೆ ಸ್ಥಗಿತಗೊಂಡಿದೆ. ಎರಡನೇ ಹಂತ ದಲ್ಲಿ ಪರವಾನಿಗೆ ನೀಡಿರುವ ಇನ್ನುಳಿದ 10 ದಿಬ್ಬಗಳಲ್ಲಿ ಮರಳುಗಾರಿಕೆ ಡಿ. 26ಕ್ಕೆ ಕೊನೆಗೊಳ್ಳಲಿದೆ.
ಸರ್ವೇಯ ಗುತ್ತಿಗೆ ವಹಿಸಿಕೊಳ್ಳುವ ಸಂಸ್ಥೆಯು ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿ ಸರ್ವೆ ನಡೆಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಿದೆ. ವರದಿಯನ್ನು ಎನ್‌ಐಟಿಕೆಗೆ ಒಪ್ಪಿಸಲಾಗುತ್ತದೆ. ಎನ್‌ಐಟಿಕೆ ನೀಡುವ ತಾಂತ್ರಿಕ ವರದಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿರುವ ಸಿಆರ್‌ಝಡ್, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ 7 ಮಂದಿಯನ್ನು ಒಳಗೊಂಡ ಅಧಿಕಾರಿಗಳ ಸಮಿತಿಯು ಪರಿಶೀಲಿಸಿ ಬೆಂಗಳೂರಿನಲ್ಲಿರುವ ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಇಲಾಖೆಗೆ ವಿಭಾಗಕ್ಕೆ ( ಕೆಸಿಝಡ್‌ಎಂ) ಕಳುಹಿಸಿ ಕೊಡಲಿದೆ. ಅಲ್ಲಿಂದ ಪರಿಸರ ವಿಮೋಚನಾ ಪತ್ರ ಲಭ್ಯವಾದ ಬಳಿಕ ಸಮಿತಿಯು ವಿವಿಧ ಮಾನದಂಡಗಳನ್ನು ಪರಿಶೀಲಿಸಿ ಹೊಸದಾಗಿ ಈ ಪ್ರದೇಶದಲ್ಲಿ ಮರಳುಗಾರಿಕೆಗೆ ಪರವಾನಿಗೆ ನೀಡುತ್ತದೆ. ಈ ಎಲ್ಲ ಪ್ರಕ್ರಿಯೆಗೆ ಕನಿಷ್ಠ 2 ತಿಂಗಳ ಕಾಲಾವಕಾಶ ತೆಗೆದುಕೊಳ್ಳುವ ಸಾಧ್ಯತೆಗಳಿದ್ದು ಮುಂದಿನ ಫೆಬ್ರವರಿ ಮಧ್ಯಭಾಗದಲ್ಲಿ ಮರಳುಗಾರಿಕೆ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ನೇತ್ರಾವತಿ ಹಾಗೂ ಫಲ್ಗುಣಿ ನದಿಯ ಸಿಆರ್‌ಝಡ್ ವಲಯದಲ್ಲಿ 22 ಬ್ಲಾಕ್‌ಗಳಲ್ಲಿ ಒಟ್ಟು 105 ಮಂದಿಗೆ ಮರಳುಗಾರಿಕೆಗೆ ಅವಕಾಶ ನೀಡಲಾಗಿತ್ತು.
Related Articles
ದ.ಕ. ಜಿಲ್ಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮರಳು ಸಮಸ್ಯೆ ಹೆಚ್ಚು ಬಾಧಿಸಿಲ್ಲ. ಪ್ರಸ್ತುತ ಸಿಆರ್‌ಝಡ್ ವಲಯದ ಎರಡನೇ ಹಂತದ 10 ದಿಬ್ಬಗಳಲ್ಲಿ ಮರಳುಗಾರಿಕೆ ಚಾಲನೆಯಲ್ಲಿದೆ. ಇದಲ್ಲದೆ ತುಂಬೆ ಅಣೆಕಟ್ಟು ಪ್ರದೇಶದಲ್ಲಿ ಡ್ರೆಜ್ಜಿಂಗ್ ಮೂಲಕ ತೆಗೆದಿರುವ 86,000 ಮೆಟ್ರಿಕ್ ಟನ್ ಮರಳಿನಲ್ಲಿ 36,000 ಮೆಟ್ರಿಕ್ ಟನ್ ಇನ್ನೂ ಇದೆ. ನಾನ್‌ಸಿಆರ್‌ಝಡ್ ವಲಯದಲ್ಲಿ ಈಗಾಗಲೇ 2 ದಿಬ್ಬಗಳು ಮರಳುಗಾರಿಕೆಗೆ ತೆರೆದಿದೆ. ಇನ್ನೂ 3 ಬ್ಲಾಕ್‌ಗಳಿಗೆ ಪರಿಸರ ಇಲಾಖೆಯ ಅನುಮತಿ ದೊರಕಿದ್ದು ಸದ್ಯದಲ್ಲೇ ಮರಳುಗಾರಿಕೆಗೆ ತೆರೆದುಕೊಳ್ಳಲಿದೆ ಎಂದು ಗಣಿ ಇಲಾಖೆ ತಿಳಿಸಿದೆ.
Advertisement
ಟೆಂಡರ್ ಸಲ್ಲಿಕೆಯಾಗಿದೆಸಿಆರ್ಝಡ್ ವಲಯದಲ್ಲಿ ಹೊಸದಾಗಿ ಮರಳು ದಿಬ್ಬ ಗುರುತಿಸಲು ಬೇಥಮೆಟ್ರಿಕ್ಸ್ ಸರ್ವೇಗೆ ಟೆಂಡರ್ ಸಲ್ಲಿಕೆಯಾಗಿದ್ದು ಇದರ ಪರಿಶೀಲನೆ ನಡೆಯುತ್ತಿದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಸರ್ವೇ ಆರಂಭಗೊಳ್ಳಲಿದೆ.
– ಸಿಂಧೂ ಬಿ. ರೂಪೇಶ್, ದ.ಕ. ಜಿಲ್ಲಾಧಿಕಾರಿ