Advertisement

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಉತ್ತಮ ಮಳೆ

12:55 AM Oct 20, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮಳೆ ಬಿರುಸು ಪಡೆದುಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ಉತ್ತಮ ಮಳೆ ಸುರಿದಿದೆ. ಕುಂದಾಪುರ, ಕಾರ್ಕಳ, ಉಡುಪಿ ತಾಲೂಕುಗಳ ವಿವಿಧೆಡೆ ಸಾಧಾರಣ ಮಳೆಯಾಗಿದೆ.

Advertisement

ಮಂಗಳೂರು ನಗರದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಸಂಜೆ ಬಳಿಕ ಗುಡುಗು, ಮಿಂಚು ಸಹಿತ ಉತ್ತಮ ಮಳೆ ಸುರಿದಿದೆ. ಸುಳ್ಯ ತಾಲೂಕಿನ ಸುಳ್ಯ ನಗರ, ಅರಂತೋಡು, ಸಂಪಾಜೆ, ಜಾಲೂÕರು, ಐವರ್ನಾಡು, ಬೆಳ್ಳಾರೆ, ಕಲ್ಮಡ್ಕ, ಬಾಳಿಲ, ಪಂಜ, ಗುತ್ತಿಗಾರು,

ಕೊಲ್ಲಮೊಗ್ರು, ಹರಿಹರ ಪಳ್ಳತ್ತಡ್ಕ, ಐನೆಕಿದು, ಸುಬ್ರಹ್ಮಣ್ಯ, ಬಳ್ಪ, ಯೇನೆಕಲ್ಲು, ಬಿಳಿನೆಲೆ, ಕೈಕಂಬ, ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಮೊದಲಾದೆಡೆ ಮಳೆಯಾಗಿದೆ. ಉಳಿದಂತೆ ಪುತ್ತೂರು, ಉಪ್ಪಿನಂಗಡಿ, ಬಂಟ್ವಾಳ, ಸುಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಇಂದು ಎಲ್ಲೋ ಅಲರ್ಟ್‌
ಐಎಂಡಿ ಮಾಹಿತಿಯಂತೆ ಮಂಗಳೂರು ನಗರದಲ್ಲಿ ಬುಧವಾರ 31 ಡಿ.ಸೆ. ಗರಿಷ್ಠ ಮತ್ತು 22.9 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಅ. 20ರಂದು
ಕರಾವಳಿ ಭಾಗದಲ್ಲಿ “ಎಲ್ಲೋ ಅಲರ್ಟ್‌’ ಘೋಷಿಸಲಾಗಿದೆ. ಗುಡುಗು ಸಹಿತ ಬಿರುಸಿನ ಮಳೆ ಸುರಿಯುವ ನಿರೀಕ್ಷೆ ಇದೆ.

ಬೆಳ್ತಂಗಡಿ ತಾಲೂಕಿನೆಲ್ಲೆಡೆ ಸಿಡಿಲು ಸಹಿತ ಭಾರೀ ಮಳೆ
ಬೆಳ್ತಂಗಡಿ: ತಾಲೂಕಿನೆಲ್ಲೆಡೆ ಬುಧವಾರ ಭಾರೀ ಗುಡುಗು – ಸಿಡಿಲು ಸಹಿತ ಮಳೆಯಾಗಿದೆ. ಕೆಲೆವೆಡೆ ರಸ್ತೆಗೆ ಗುಡ್ಡದ ಮಣ್ಣು ಜರಿದಿದೆ. ತೋಟಗಳಿಗೆ ನೀರು ನುಗ್ಗಿದೆ.

Advertisement

ಸಂಜೆ 4ರ ಬಳಿಕ ಮೋಡಕವಿಯಲಾರಂಭಿಸಿ ಸುಮಾರು 1 ತಾಸು ಕಾಲ ಉತ್ತಮ ಮಳೆ ಸುರಿಯಿತು. ಸಿಡಿಲಿನ ಹೊಡೆತಕ್ಕೆ ಅನೇಕ ಮನೆಗಳ ಎಲೆಕ್ಟ್ರಾನಿಕ್‌ ವಸ್ತುಗಳಿಗೆ ಹಾನಿಯಾಗಿದೆ. ಮಾತ್ರವಲ್ಲದೆ ಪಟ್ಟಣ ವ್ಯಾಪ್ತಿಯಲ್ಲಿ ಕೆಲ ಸಮಯ ಮೊಬೈಲ್‌ ನೆಟÌರ್ಕ್‌, ಇಂಟರ್ನೆಟ್‌ ಸ್ತಬ್ಧವಾಗಿದ್ದವು. ಸಿಡಿಲಿನ ಅಬ್ಬರ ಕಡಿಮೆಯಾದ ಬಳಿಕ ಮೊಬೈಲ್‌ ಫೋನ್‌ ಮತ್ತೆ ಕಾರ್ಯನಿರ್ವಹಿಸಿದರೆ, ಬಿಸ್ಸೆನ್ನೆಲ್‌ ಇಂಟರ್ನೆಟ್‌ ಸೌಲಭ್ಯ ಮೊಟಕಾಗಿತ್ತು.

ಹಲೇಜಿ ಸಮೀಪದ ಸುಧೀರ್‌ ಕೆ.ಎನ್‌. ಅವರ ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಹಲೇಜಿ – ಕಲಾಯಿ ಪಂಚಾಯತ್‌ ರಸ್ತೆಗೆ ಗುಡ್ಡ ಜರಿದು ಬಿದ್ದಿದೆ. ಕಳೆದ ಮಂಗಳವಾರ ರಾತ್ರಿ ಸುರಿದ ಮಳೆಗೆ ಲಾೖಲ ಗ್ರಾಮದ ಜೋಗಿ ಕಾಲನಿ ಬಳಿ ಗಿರಿಜಾ ಅವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮನೆಯಲ್ಲಿ ಮಕ್ಕಳು ಸೇರಿದಂತೆ ಮೂವರು ವಾಸವಾಗಿದ್ದು ಅದೃಷ್ಟವಶಾತ್‌ ಯಾರಿಗೂ ಅಪಾಯವಾಗಿಲ್ಲ.

ಕಟ್ಟಡಕ್ಕೆ ಹಾನಿ; ಇಬ್ಬರಿಗೆ ಗಾಯ
ಕಡಬ: ತಾಲೂಕಿನಾದ್ಯಂತ ಬುಧವಾರ ಸಾಯಂಕಾಲ ಉತ್ತಮ ಮಳೆಯಾಗಿದೆ. ತಾಲೂಕಿನ ಅಲ್ಲಲ್ಲಿ ಗುಡುಗು, ಗಾಳಿ ಸಹಿತ ಒಂದು ಗಂಟೆ ಕಾಲ ಧಾರಾಕಾರ ಮಳೆ ಸುರಿಯಿತು. ತೋಡುಗಳು ತುಂಬಿ ಹರಿದವು. ಕೃಷಿ ತೋಟಗಳಿಗೂ ನೀರು ನುಗ್ಗಿತ್ತು.

ರಾಮಕುಂಜ ಗ್ರಾಮದ ಕಾಜರೊಕ್ಕು ಎಂಬಲ್ಲಿ ಬೀಸಿದ ಭಾರೀ ಗಾಳಿಗೆ ತೆಂಗಿನ ಮರವೊಂದು ವಿದ್ಯುತ್‌ ತಂತಿಗೆ ಬಿದ್ದು ರಸ್ತೆ ಮೇಲೆ ಬಿದ್ದಿದೆ. ಪರಿಣಾಮ 4 ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ಇದರಿಂದ ಸಚಿನ್‌ ಅವರ ಕಾರು ಸರ್ವಿಸ್‌ ಸ್ಟೇಶನ್‌ನ ಕಟ್ಟಡಕ್ಕೆ ಹಾನಿಯಾಗಿದೆ. ಘಟನೆ ವೇಳೆ ಕಟ್ಟಡದ ಒಳಗಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಉಪ್ಪಿನಂಗಡಿ ಕಡಬ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರು ಸಮೀಪದ ಆಯಿಶಾ ವಿದ್ಯಾ ಸಂಸ್ಥೆಯ ಬಳಿ ಚರಂಡಿಯಲ್ಲಿ ಹೂಳು ತುಂಬಿದ್ದರಿಂದ ಮಳೆ ನೀರು ಸರಾಗವಾಗಿ ಹರಿಯಲು ತಡೆ ಉಂಟಾದ ಪರಿಣಾಮ ರಸ್ತೆಯಲ್ಲಿ ನೀರು ಹರಿಯಿತು. ಕೆಲವು ಕಾಲ ಸಂಚಾರಕ್ಕೂ ತೊಂದರೆಯಾಯಿತು. ಹೆದ್ದಾರಿಯ ಇನ್ನೊಂದು ಬದಿಯಲ್ಲಿದ್ದ ಮನೆಗಳಿಗೂ ನೀರು ನುಗ್ಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next