Advertisement
ಜು. 18ರ ರಾಜ್ಯ ಕೋವಿಡ್ ಬುಲೆಟಿನ್ ವರದಿಯ ಪ್ರಕಾರ ದ.ಕ. ಜಿಲ್ಲೆಯಲ್ಲಿ 3,306 ಕೊರೊನಾ ಪ್ರಕರಣಗಳ ಪೈಕಿ ಮೃತಪಟ್ಟವರು ಬರೋಬ್ಬರಿ 60 ಮಂದಿ. ಹೀಗಾಗಿ ರಾಜಧಾನಿ ಬೆಂಗಳೂರು ಮಾದರಿಯಲ್ಲಿ ದ.ಕ. ಜಿಲ್ಲೆಯಲ್ಲಿ ಕೋವಿಡ್ ಸಾವಿನ ಪ್ರಮಾಣ ಗರಿಷ್ಠ ಪ್ರಮಾಣದಲ್ಲಿರುವುದು ಜನರನ್ನು ಚಿಂತೆಗೀಡು ಮಾಡಿದೆ. ನೆರೆ ಜಿಲ್ಲೆ ಉಡುಪಿಯಲ್ಲಿ ಒಟ್ಟು 2,089 ಕೋವಿಡ್ ಪ್ರಕರಣಗಳ ಪೈಕಿ ಮೃತಪಟ್ಟವರ ಸಂಖ್ಯೆ 8. ಪಕ್ಕದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ದಿಂದ ಮೃತಪಟ್ಟವರ ಸಂಖ್ಯೆ ಕೇವಲ 1. ಹೀಗಾಗಿ ಪಕ್ಕದ ಎರಡೂ ಜಿಲ್ಲೆಗಳಲ್ಲಿ ಆಗದಿರುವ ಮರಣ ಪ್ರಮಾಣ ದ.ಕ. ಜಿಲ್ಲೆಯಲ್ಲಿಯೇ ಸಂಭವಿಸಿದ್ದು ಯಾಕೆ? ಎಂಬ ಪ್ರಶ್ನೆ ಜನರದ್ದು. ಆದರೆ ಧಾರವಾಡದಲ್ಲಿ ಒಟ್ಟು 1,917 ಸೋಂಕಿತರ ಪೈಕಿ 58 ಮಂದಿ ಸಾವು, ಮೈಸೂರಿನಲ್ಲಿ 1,514 ಪ್ರಕರಣಗಳ ಪೈಕಿ 59 ಸಾವು, ಬೀದರ್‌ನಲ್ಲಿ 1,332 ಪ್ರಕರಣಗಳಲ್ಲಿ 54 ಸಾವು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ದ.ಕ. ಜಿಲ್ಲೆಗಿಂತ ಕಡಿಮೆ ಕೊರೊನಾ ಪ್ರಕರಣವಿದ್ದರೂ ಅಲ್ಲಿಯೂ ಸಾವಿನ ಪ್ರಮಾಣ ಏರಿಕೆಯಿದೆ ಎಂಬುದು ಉಲ್ಲೇಖನೀಯ.
ಆರೋಗ್ಯ ಇಲಾಖೆಯ ಪ್ರಕಾರ, “ದ.ಕ. ಜಿಲ್ಲೆ ಯಲ್ಲಿ ಸಾವನ್ನಪ್ಪಿದವರ ಪೈಕಿ ಬಹುತೇಕ ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರು. ಜತೆಗೆ ಬೇರೆ
ಕಾಯಿಲೆಯಿಂದ ಬಳಲುತ್ತಿದ್ದು ಅದೇ ಕಾರಣದಿಂದ ಸಾವನ್ನಪ್ಪಿದ ಪ್ರಕರಣಗಳಲ್ಲಿ ಕೊರೊನಾ ಇರುವುದು ದೃಢಪಟ್ಟವರು. ಹೀಗಾಗಿ ಕೊರೊನಾದಿಂದಾಗಿಯೇ ಮೃತಪಟ್ಟ ವರ ಸಂಖ್ಯೆ ಕಡಿಮೆ. ಜತೆಗೆ ಉಳಿದ ಜಿಲ್ಲೆಯಲ್ಲಿಯೂ ಸೋಂಕಿತರ ಪ್ರಮಾಣ ನಮಗಿಂತ ಕಡಿಮೆ ಇದ್ದರೂ ಅಲ್ಲಿ ಮರಣ ಸಂಖ್ಯೆ ನಮ್ಮಷ್ಟೇ ಇದೆ. ಈ ಮಧ್ಯೆ ಹೊರ ಜಿಲ್ಲೆಗಳಿಂದ ಹೆಚ್ಚಿನ ಚಿಕಿತ್ಸೆಗಾಗಿ ದ.ಕ. ಜಿಲ್ಲೆಯ ಖಾಸಗಿ/ಸರಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿ ಇಲ್ಲಿಯವರೆಗೆ ಮರಣ ಹೊಂದಿದ 12 ಪ್ರಕರಣಗಳಲ್ಲಿ ಕೊರೊನಾ ಸೋಂಕು ಇರುವುದು ಕಂಡುಬಂದಿದೆ. ಈ ಪೈಕಿ ಭಟ್ಕಳದ ನಾಲ್ವರು, ಚಿಕ್ಕಮಗಳೂರಿನ ಇಬ್ಬರು, ಶಿರಸಿ, ರಾಮದುರ್ಗಾ, ಸಕಲೇಶಪುರ, ಚೆನ್ನಗಿರಿ, ಕುಂದಾಪುರ, ಮಡಿಕೇರಿಯ ತಲಾ ಓರ್ವರು ಮೃತಪಟ್ಟಿದ್ದಾರೆ. ಒಟ್ಟು ಸಂಖ್ಯೆಯಲ್ಲಿ ಇದೂ ಕೂಡ ಸೇರ್ಪಡೆಯಾಗಿದೆ. ಈ ಕಾರಣದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಣ ಪ್ರಮಾಣ ಏರಿಕೆ ಎನ್ನಲಾಗುವುದು ಎನ್ನುತ್ತಾರೆ. ದ.ಕ. ಜಿಲ್ಲೆಯಲ್ಲಿ ಕೋವಿಡ್ ದಿಂದಲೇ ಸಾವನ್ನಪ್ಪಿದವರ ಸಂಖ್ಯೆ ಬಹಳಷ್ಟು ಕಡಿಮೆ. ಬದಲಾಗಿ, ಕಿಡ್ನಿ, ಮಧುಮೇಹ, ಕ್ಯಾನ್ಸರ್ ಸೇರಿದಂತೆ ವಿವಿಧ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದವರು ಸಾವನ್ನಪ್ಪಿದ್ದಾರೆ. ಆದರೆ ಅವರ ಗಂಟಲದ್ರವ ಪರಿಶೀಲಿಸಿದಾಗ ಅವರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಹೀಗಾಗಿ ಬಹಳಷ್ಟು ಪ್ರಕರಣ ಕೊರೊನಾದಿಂದಲೇ ಎಂದು ಹೇಳಲು ಆಗದು.
– ಡಾ| ರತ್ನಾಕರ್, ದ.ಕ. ಡಿಎಚ್‌ಒ (ಪ್ರಭಾರ)