Advertisement

ದ.ಕ.: 8, ಉಡುಪಿ: 11 ಮಂದಿಗೆ ಕೋವಿಡ್ ಪಾಸಿಟಿವ್‌ ; ಮಹಿಳಾ ಪೊಲೀಸ್‌ಗೆ ಸೋಂಕು

01:41 AM Jun 24, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ 19ನಿಂದ ಓರ್ವ ವೃದ್ಧ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

Advertisement

ಇದೇ ವೇಳೆ 8 ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಒಟ್ಟು ಸೋಂಕು ಪೀಡಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.

ವೆನ್ಲಾಕ್‌ಗೆ ಜೂ. 10ರಂದು ದಾಖಲಾಗಿದ್ದ 70 ವರ್ಷದ ವೃದ್ಧ ನಿಧನ ಹೊಂದಿದವರು. ಅವರು ಮಧುಮೇಹ, ನ್ಯುಮೋನಿಯಾದಿಂದ ಬಳಲುತ್ತಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಬಾಧಿತರಿವರು
ಈ ಹಿಂದೆ ಕೋವಿಡ್ 19 ದೃಢಪಟ್ಟ ವ್ಯಕ್ತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ 28 ವರ್ಷದ ಯುವತಿ, 17 ವರ್ಷದ ಯುವಕ, 25 ವರ್ಷದ ಯುವತಿ, 50 ವರ್ಷದ ವ್ಯಕ್ತಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅವರೆಲ್ಲರನ್ನೂ ಕ್ವಾರಂಟೈನ್‌ ಮಾಡಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 49 ವರ್ಷದ ವ್ಯಕ್ತಿ, 59 ವರ್ಷದ ವ್ಯಕ್ತಿ, ಇನ್‌ಫ್ಲೂಯೆನ್ಝಾ ಲೈಕ್‌ ಇಲ್‌ನೆಸ್‌ನಿಂದ ಬಳಲುತ್ತಿದ್ದ 27 ವರ್ಷದ ಯುವತಿ ಹಾಗೂ ಜೂ. 17ರಂದು ಕುವೈಟ್‌ನಿಂದ ಆಗಮಿಸಿದ್ದ 27 ವರ್ಷದ ಯುವಕನಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಎಲ್ಲರನ್ನೂ ವೆನ್ಲಾಕ್‌ಗೆ ದಾಖಲಿಸಲಾಗಿದೆ.

6 ಮಂದಿ ಬಿಡುಗಡೆ
ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿ ಗುಣಮುಖರಾಗಿ ಮಂಗಳವಾರ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಗೊಂಡವರ ಪೈಕಿ 38 ವರ್ಷದ ಗರ್ಭಿಣಿ ಮಹಿಳೆ ಜೂ. 11ರಂದು ಆಸ್ಪತ್ರೆಗೆ ದಾಖಲಾಗಿದ್ದು, ಮಂಗಳವಾರ ಬೆಳಗ್ಗೆ ಸಿಸೇರಿಯನ್‌ ಹೆರಿಗೆಯಾಗಿದೆ. ಜೂ. 22ರಂದು ಅವರ ದ್ವಿತೀಯ ಹಂತದ ಗಂಟಲ ದ್ರವ ಮಾದರಿ ವರದಿಯಲ್ಲಿ ಕೋವಿಡ್ 19 ಸೋಂಕು ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರವೇ ಬಿಡುಗಡೆಗೊಳಿಸಲಾಗಿದೆ.

Advertisement

179 ವರದಿ ಬಾಕಿ
ವೆನ್ಲಾಕ್‌ನಲ್ಲಿ ಮಂಗಳವಾರ ಒಟ್ಟು 142 ಮಂದಿಯ ಗಂಟಲ ದ್ರವ ಮಾದರಿ ವರದಿಯನ್ನು ಸ್ವೀಕರಿಸಲಾಗಿದ್ದು, 8 ಪಾಸಿಟಿವ್‌, 134 ನೆಗೆಟಿವ್‌ ಬಂದಿವೆ. 179 ಮಂದಿಯ ವರದಿ ಬರಲು ಬಾಕಿ ಇದ್ದು, ಹೊಸದಾಗಿ 286 ಮಂದಿಯ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಉಳ್ಳಾಲದ ಮಹಿಳೆಗೆ ಸೋಂಕು
ಅಝಾದ್‌ನಗರದ 57ರ ಹರೆಯದ ಮಹಿಳೆಗೆ ಕೋವಿಡ್ 19 ಪಾಸಿಟಿವ್‌ ಬಂದಿದ್ದು, ಸೋಂಕಿನ ಮೂಲ ಮಾತ್ರ ನಿಗೂಢವಾಗಿದೆ. ಮಹಿಳೆಯು 10 ದಿನಗಳ ಹಿಂದೆ ಭೇದಿ ಸಮಸ್ಯೆಯ ಕಾರಣ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. 8 ದಿನಗಳ ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗಂಟಲ ದ್ರವ ಪರೀಕ್ಷೆಯ ವೇಳೆ ಸೋಂಕು ದೃಢವಾಗಿದೆ. ಮಹಿಳೆಯನ್ನು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಒಂದೇ ಕಾಂಪೌಂಡ್‌ನ‌ಲ್ಲಿರುವ ಎರಡು ಮನೆಗಳನ್ನು ಸೀಲ್‌ಡೌನ್‌ ಮಾಡಲು ಜಿಲ್ಲಾಡಳಿತಕ್ಕೆ ವರದಿ ಕಳುಹಿಸಲಾಗಿದೆ. ಮಹಿಳೆ ವಾಸವಿರುವ ಮನೆಯಲ್ಲಿ ಒಟ್ಟು 15 ಮಂದಿ, ಇನ್ನೊಂದರಲ್ಲಿ ನಾಲ್ವರು ವಾಸವಾಗಿದ್ದು, ಎಲ್ಲರಿಗೂ ಕ್ವಾರಂಟೈನ್‌ ಅನ್ವಯವಾಗಲಿದೆ.

ಆಸ್ಪತ್ರೆ ಸಿಬಂದಿಗೆ ಭೀತಿ
ಮಹಿಳೆ 8 ದಿನಗಳ ಕಾಲ ಇದ್ದ ತೊಕ್ಕೊಟ್ಟಿನ ಆಸ್ಪತ್ರೆಯ ಸಿಬಂದಿಗಳಿಗೂ ಕೋವಿಡ್ 19 ಸೋಂಕು ಭೀತಿ ಉಂಟಾಗಿದೆ. ಚಿಕಿತ್ಸೆ ನೀಡಿದ ಸಿಬಂದಿ ಸೇರಿದಂತೆ ಆಸ್ಪತ್ರೆಯ ಹೆಚ್ಚಿನವರ ಗಂಟಲ ದ್ರವ ಪರೀಕ್ಷೆ ನಡೆಯಲಿದೆ.

ಅವಗಣನೆ ಆರೋಪ: ವೆನ್ಲಾಕ್‌ ನಿರಾಕರಣೆ
ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕು ಬಾಧಿತರಿಗೆ ವ್ಯವಸ್ಥಿತವಾದ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಆರೋಪದ ವೀಡಿಯೋ ವೈರಲ್‌ ಆಗಿದೆ. ಆದರೆ ವೆನ್ಲಾಕ್‌ ಅಧೀಕ್ಷಕರು ಇದನ್ನು ನಿರಾಕರಿಸಿದ್ದಾರೆ. ಒಂದೇ ವಾರ್ಡ್‌ನಲ್ಲಿ ಎಲ್ಲ ಕೋವಿಡ್ 19 ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವುದರಿಂದ ಬೇಗ ಗುಣಮುಖರಾಗಲು ಸಾಧ್ಯವಾಗುವುದಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ಅಂದರೆ ಕೇಳುತ್ತಿಲ್ಲ.

ಒಂದೇ ವಾರ್ಡ್‌ನಲ್ಲಿ ಇರುವ ಕೆಲವೇ ಶೌಚಾಲಯ, ಸ್ನಾನ ಗೃಹಗಳನ್ನು 50ಕ್ಕೂ ಹೆಚ್ಚು ಮಂದಿ ಬಳಸಬೇಕಾಗುತ್ತದೆ. ವಾರ್ಡ್‌ ಬಾಗಿಲು ಕೂಡ ತೆರೆದೇ ಇರುವುದರಿಂದ ರೋಗಿಗಳು ಯಾವಾಗ ಬೇಕಾದರೂ ಹೊರ ಹೋಗಬಹುದು. ಯಾವುದೇ ಸುರಕ್ಷೆ ಇಲ್ಲಿಲ್ಲ ಎಂಬುದಾಗಿ ರೋಗಿಗಳು ಆರೋಪಿಸಿದ್ದಾರೆ. ಅವಧಿ ಮುಗಿದ ಮಾತ್ರೆಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ವಾರ್ಡ್‌ಗೆ ಭೇಟಿ ನೀಡುವ ವೈದ್ಯರಲ್ಲಿ ವಿಚಾರಿಸಿದರೆ ಅವರು ಸ್ಪಂದಿಸುವುದಿಲ್ಲ ಎಂದೂ ಆರೋಪಿಸಲಾಗಿದೆ.

ಆರೋಪ ನಿರಾಕರಣೆ
ವೆನ್ಲಾಕ್‌ನ ವೈದ್ಯಕೀಯ ಅಧೀಕ್ಷಕ ಡಾ| ಸದಾನಂದ ಅವರು ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಆಸ್ಪತ್ರೆಯಲ್ಲಿ ಕೋವಿಡ್ 19 ಸೋಂಕು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅವಧಿ ತೀರಿದ ಮಾತ್ರೆಗಳನ್ನು ನೀಡಲಾಗುತ್ತಿದೆ ಎನ್ನುವುದೂ ಸುಳ್ಳು. ಕೆಲವು ರೋಗಿಗಳು ನಮಗೆ ಯಾವುದೇ ಲಕ್ಷಣಗಳಿಲ್ಲ, ಮನೆಗೆ ಕಳುಹಿಸಿ ಎಂದು ಆಗ್ರಹಿಸುತ್ತಿದ್ದು, ಮನೆಗೆ ಕಳುಹಿಸದ ಕಾರಣಕ್ಕಾಗಿ ವೃಥಾರೋಪ ಮಾಡುತ್ತಿದ್ದಾರೆ. ಮರು ಪರೀಕ್ಷೆಯಲ್ಲಿ ಕೋವಿಡ್ 19 ನೆಗೆಟಿವ್‌ ಬರುವವರೆಗೆ ನಾವು ಯಾರನ್ನೂ ಮನೆಗೆ ಕಳುಹಿಸುವಂತಿಲ್ಲ ಎಂದಿದ್ದಾರೆ.

ಮೀನು ಮಾರುತ್ತಿದ್ದ ಯುವಕನಿಗೆ ಸೋಂಕು
ಮಂಗಳೂರು ಮೂಲದ 27 ವರ್ಷದ ಯುವಕನಿಗೆ ಸೋಮವಾರ ಕೋವಿಡ್ 19 ಸೋಂಕು ದೃಢಪಟ್ಟಿದ್ದು, ಆತ ಐಎಲ್‌ಐಯಿಂದ ಬಳಲುತ್ತಿದ್ದಾನೆ. ಶೀತ ಇದ್ದ ಹಿನ್ನೆಲೆಯಲ್ಲಿ ಸ್ವಯಂ ತಪಾಸಣೆಗೊಳಪಟ್ಟಾಗ ಸೋಂಕು ದೃಢಪಟ್ಟಿತ್ತು. ಆತ ಮನೆ ಮನೆಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದನೆಂದು ಹೇಳಲಾಗುತ್ತಿದ್ದು, ಆತನ ಸಂಪರ್ಕವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ: ಮಹಿಳಾ ಪೊಲೀಸ್‌ಗೆ ಸೋಂಕು
ಜಿಲ್ಲೆಯಲ್ಲಿ ಮಂಗಳವಾರ ಮಹಿಳಾ ಪೊಲೀಸ್‌ ಸಿಬಂದಿ ಮತ್ತು ಅವರ ಮನೆಯ ಸದಸ್ಯರೊಬ್ಬರ ಸಹಿತ 11 ಜನರಿಗೆ ಕೋವಿಡ್ 19 ಸೋಂಕು ಪಾಸಿಟಿವ್‌ ವರದಿಯಾಗಿದೆ. ಇದೇ ವೇಳೆ 9 ಮಂದಿ ಗುಣಮುಖರಾಗಿ ಆಸ್ಪತ್ರೆ ಯಿಂದ ಬಿಡುಗಡೆಗೊಂಡಿದ್ದಾರೆ. ಬೈಂದೂರು ಠಾಣೆಯ ಮಹಿಳಾ ಸಿಬಂದಿಗೆ ಈ ಹಿಂದೆ ಪಾಸಿಟಿವ್‌ ಬಂದ ಪೊಲೀಸ್‌ ಸಿಬಂದಿಯಿಂದ ಸೋಂಕು ಹರಡಿದೆ. 11 ಮಂದಿಯಲ್ಲಿ ಇಬ್ಬರು ಕುವೈಟ್‌ನಿಂದ ಬಂದವರು, ತಲಾ ಒಬ್ಬರು ಸೌದಿ ಅರೇಬಿಯಾ ಮತ್ತು ದುಬಾೖಯಿಂದ, ಐವರು ಮಹಾರಾಷ್ಟ್ರದಿಂದ ಬಂದವರು. ಇನ್ನೊಬ್ಬರು ಪೊಲೀಸ್‌ ಸಿಬಂದಿ, ಅವರ ಸಂಬಂಧಿಕರು.

ನಾಲ್ವರು ಪುರುಷರು, ಮೂವರು ಮಹಿಳೆಯರು, ಮೂವರು ಗಂಡು ಮಕ್ಕಳು, ಒಂದು ಹೆಣ್ಣು ಮಗುವಿದೆ. ಒಬ್ಬರು ಉಡುಪಿ ತಾಲೂಕಿನವರು, 10 ಮಂದಿ ಕುಂದಾಪುರ ತಾಲೂಕಿನವರಾಗಿದ್ದಾರೆ. ಐವರು ಕುಂದಾಪುರ ತಾಲೂಕು ಆಸ್ಪತ್ರೆಯಿಂದ, ಮೂವರು ಉದ್ಯಾವರ ಕುತ್ಪಾಡಿ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಿಂದ, ಒಬ್ಬರು ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಿಂದ ಒಟ್ಟು 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡವರು.

ಮಂಗಳವಾರ 202 ಜನರ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿದ್ದು 47 ಜನರಿಗೆ ನೆಗೆಟಿವ್‌, 11 ಮಂದಿಗೆ ಪಾಸಿಟಿವ್‌ ವರದಿಯಾಗಿದೆ. ಇದುವರೆಗೆ ಸಂಗ್ರಹಿಸಿದ 13,626 ಮಾದರಿಗಳಲ್ಲಿ 12,182 ನೆಗೆಟಿವ್‌, 1,088 ಪಾಸಿಟಿವ್‌ ಪ್ರಕರಣ ವರದಿಯಾಗಿದೆ.

ಒಟ್ಟು 978 ಮಂದಿ ಬಿಡುಗಡೆಗೊಂಡಿದ್ದು 108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 356 ಮಂದಿಯ ಮಾದರಿಗಳ ವರದಿ ಬರಬೇಕಾಗಿದೆ. ಪ್ರಸ್ತುತ 702 ಜನರು ಮನೆಗಳಲ್ಲಿ, 80 ಮಂದಿ ಐಸೊಲೇಶನ್‌ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. 10 ಮಂದಿ ಐಸೊಲೇಶನ್‌ ವಾರ್ಡ್‌ಗೆ ಸೇರಿದ್ದು ಏಳು ಮಂದಿ ಬಿಡುಗಡೆಗೊಂಡಿದ್ದಾರೆ. 107 ಪ್ರಕರಣಗಳನ್ನು ಹೊಂದಿದ ಬೆಂಗಳೂರು ನಗರ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣ ಕಂಡ ಜಿಲ್ಲೆಯಾಗಿದೆ. ಉಡುಪಿ ಜಿಲ್ಲೆ 7ನೇ ಸ್ಥಾನದಲ್ಲಿದೆ.

ನಗರಸಭೆ ಸದಸ್ಯೆಗೆ ನೆಗೆಟಿವ್‌
ಪುತ್ತೂರು:
ನಗರದ ಜಿಡೆಕಲ್ಲಿನ ರಾಗಿದಕುಮೇರಿನಲ್ಲಿ ವೃದ್ಧರೊಬ್ಬರಿಗೆ ಕೋವಿಡ್ 19 ಸೋಂಕು ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಅವರ ಸೊಸೆ ನಗರ ಸಭೆ ಸದಸ್ಯೆಯ ಗಂಟಲ ದ್ರವದ ಮಾದರಿ ಸಂಗ್ರಹಿಸಿ ಕೋವಿಡ್‌ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದೀಗ ಆ ವರದಿ ನೆಗೆಟಿವ್‌ ಎಂದು ದಾಖಲಾಗುವ ಮೂಲಕ ಸಾರ್ವಜನಿಕರ ಆತಂಕ ದೂರವಾಗಿದೆ.

ನರ್ಸ್‌ಗೆ ಸೋಂಕು
ಶಿರ್ವ:
ಮಾಣಿಬೆಟ್ಟು ನಿವಾಸಿ 28 ವರ್ಷದ ಕೆಎಂಸಿಯ ನರ್ಸ್‌ ಓರ್ವರಿಗೆ ಸೋಂಕು ದೃಢಪಟ್ಟಿದೆ. ಅವರನ್ನು ಉಡುಪಿಯ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಶೀತ ಕಂಡುಬಂದ ಕಾರಣ ಗಂಟಲ ದ್ರವ ಪರೀಕ್ಷೆ ಮಾಡಲಾಗಿತ್ತು. ಕಾಪು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ನೇತೃತ್ವದಲ್ಲಿ ಕಂದಾಯ ಮತ್ತು ಆರೋಗ್ಯ ಅಧಿಕಾರಿಗಳು ಮಂಗಳವಾರ ಅವರ ಮನೆಯನ್ನು ಸೀಲ್‌ಡೌನ್‌ ಮಾಡಿದ್ದಾರೆ. ಮನೆಮಂದಿಯನ್ನು ಹೋಂ ಕ್ವಾರಂಟೈನ್‌ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next