ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಏರಿಕೆ ಕಾಣುತ್ತಿದ್ದು, ಜಿಲ್ಲಾದ್ಯಂತ ವಿಶೇಷ ನಿಗಾ ವಹಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸುವ ಉದ್ದೇಶದಿಂದ ಲಾರ್ವಾ ಸಮೀಕ್ಷೆಯನ್ನು ಮತ್ತಷ್ಟು ತೀವ್ರಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ ದ.ಕ. ಜಿಲ್ಲೆಯಲ್ಲಿ 263 ಡೆಂಗ್ಯೂ ಪ್ರಕರಣ ಈ ವರ್ಷ ದಾಖಲಾಗಿದೆ. ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದ್ದು, ಇದರಿಂದ ಸೊಳ್ಳೆ ಉತ್ಪತ್ತಿಯಾಗಿ ಡೆಂಗ್ಯೂ ಹೆಚ್ಚಳಕ್ಕೆ ಕಾರಣವಾಗುತ್ತಿದೆ.
ಡೆಂಗ್ಯೂ ನಿಯಂತ್ರಣದ ಕುರಿತು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದಿದ್ದು, ಅದರಲ್ಲಿ ಸಚಿವರು ನೀಡಿದ ಸೂಚನೆಯನ್ನು ಪಾಲಿಸಿ, ಅನುಷ್ಠಾನಕ್ಕೆ ತರಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ತಿಳಿಸಿದ್ದಾರೆ.
ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲೇ ಹೆಚ್ಚಿನ ಡೆಂಗ್ಯೂ ಪ್ರಕರಣವಿದೆ. ಈ ಹಿನ್ನೆಲೆಯಲ್ಲಿ ಯಾವ ವಾರ್ಡ್ ಗಳಲ್ಲಿ ಪ್ರಕರಣ ತೀವ್ರಗತಿಯಲ್ಲಿ ಎಂದು ರೂಟ್ ಮ್ಯಾಪ್ ತಯಾರಿಸಿ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ ಸೊಳ್ಳೆ ಉತ್ಪತ್ತಿ ತಾಣ ನಾಶ ಮಾಡುವ ಮೂಲಕ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಎಚ್‌ಒ ಡಾ| ತಿಮ್ಮಯ್ಯ “ಉದಯವಾಣಿ’ಗೆ ತಿಳಿಸಿದ್ದಾರೆ.
ಒಂದೇ ದಿನ 30 ಮಂದಿಗೆ ಡೆಂಗ್ಯೂ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.4ರಂದು 331 ಮಂದಿ ತಪಾಸಣೆ ಮಾಡಿದ್ದು, ಈ ಪೈಕಿ 30 ಮಂದಿಯಲ್ಲಿ ಡೆಂಗ್ಯೂ ಇರುವುದು ದೃಢಪಟ್ಟಿದೆ. ಜನವರಿಯಿಂದ ಈವರೆಗೆ ಒಟ್ಟು 1,725 ಮಂದಿಯನ್ನು ತಪಾಸಣೆ ನಡೆಸಿದ್ದು, 263 ಮಂದಿಯಲ್ಲಿ ಡೆಂಗ್ಯೂ ಪತ್ತೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ ಯಾವುದೇ ಸಾವು ದಾಖಲಾಗಿಲ್ಲ.