Advertisement

Dakshina Kannada ಕ್ಷೇತ್ರಕ್ಕೆ ಬಿಜೆಪಿಯಿಂದ ಹೊಸಮುಖ; ಪುತ್ತಿಲ ಪರಿವಾರ್‌ ಥಂಡಾ?

01:25 AM Mar 14, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಎಚ್ಚರಿ ಕೆಯ ಹೆಜ್ಜೆ ಇಡುವ ಮೂಲಕ ಬಿಜೆಪಿ ವರಿಷ್ಠರು ಹೊಸ ಹಾಗೂ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

Advertisement

42ರ ಹರೆಯದ ಭೂಸೇನೆಯ ಮಾಜಿ ಅಧಿಕಾರಿ ಕ್ಯಾ| ಬೃಜೇಶ್‌ ಚೌಟ ಅವರನ್ನು ದ.ಕ. ಲೋಕಸಭಾ ಕ್ಷೇತ್ರದಿಂದ ಉಮೇದುವಾರರನ್ನಾಗಿಸಿದ್ದು ಕ್ಷೇತ್ರದಲ್ಲಿ ಕಾರ್ಯಕರ್ತರ ಒಂದು ವಲಯದಲ್ಲಿ ಇದ್ದ ಅಸಮಾಧಾನದ ಹೊಗೆಯನ್ನು ಆರಿಸಿದಂತಾಗಿದೆ.

ಪ್ರಸ್ತುತ ಹಿಂದುತ್ವದ ಭದ್ರಕೋಟೆ ಯಾಗಿರುವ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯಾರೆನ್ನುವುದೂ ಕುತೂಹಲಕಾರಿ ವಿಷಯ. ಬಿಲ್ಲವ ಮುಖಂಡರಾದ ಪದ್ಮರಾಜ್‌ ಆರ್‌. ಅವರು ಪ್ರಯತ್ನ ನಡೆಸಿದ್ದಾರೆ. ಅವರೂ ರಾಜಕೀಯದಲ್ಲಿ ಹೊಸಮುಖ. ಈ ನಡುವೆ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಅವರ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಒಲವು ತೋರಿದ್ದಾರೆ.

ಹಿಂದೆ ಎರಡು ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿ ದವರು ಸೊರಕೆ, ಬಳಿಕ ಉಡುಪಿಗೆ ಹೋಗಿದ್ದ ಅವರು ಕಾಪು ಕ್ಷೇತ್ರದಿಂದ ಗೆದ್ದರು. 2013ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾ ದರು. ಅಲ್ಲಿ ಎರಡನೇ ಬಾರಿಯ ಸ್ಪರ್ಧೆ ಯಲ್ಲಿ ಅವರಿಗೆ ಸೋಲಾಯಿತು. ಈಗ ಮತ್ತೆ ದ.ಕ. ಕ್ಕೆ ಬರುವ ಸಾಧ್ಯತೆ ಇದೆ.

ದ.ಕ.ದಲ್ಲಿ 3 ಬಾರಿ ನಳಿನ್‌ ಸತತ
ಗೆಲುವು ಸಾಧಿಸಿದ್ದಾರೆ. ಪ್ರತೀ ಬಾರಿ ಗೆಲುವಿನ ಅಂತರ ಹೆಚ್ಚಿಸುತ್ತಾ ಸಾಗಿದ್ದು 2019ರಲ್ಲಿ 2.74 ಲಕ್ಷ ಅಂತರದಲ್ಲಿ ಗೆಲುವು ಸಾಧಿಸಿ ದ್ದರು. ಸಾಮಾನ್ಯವಾಗಿ ಕಾರ್ಯ ಕರ್ತರು ಹಾಗೂ ಜನರ ಪ್ರತಿರೋಧ ಎದುರಿಸುವಾಗ ಹೊಸ ಮುಖ ಇಳಿಸುವ ತಂತ್ರ ಫಲ ನೀಡು ತ್ತದೆ. ಅದೇ ತಂತ್ರ ಈಗ ಇಲ್ಲೂ ಕೆಲಸ ಮಾಡುವ ಹಾಗಿದೆ.

Advertisement

ಪುತ್ತಿಲ ಪರಿವಾರ್‌ ಥಂಡಾ?
ಹಾಲಿ ಸಂಸದರಿಗೆ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಅವರ ಪರಿವಾರ ತೀವ್ರ ಪ್ರತಿ ರೋಧ ತೋರಿತ್ತು. ನಳಿನ್‌ಗೆ ಮತ್ತೆ ಅವಕಾಶ ಕೊಟ್ಟರೆ ಪಕ್ಷೇತರರಾಗಿ ಸ್ಪರ್ಧಿಸುವುದು ಖಚಿತ ಎನ್ನಲಾಗಿತ್ತು. ಆದರೆ ಈಗ ಚೌಟ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ಪುತ್ತಿಲ ಅವರು ವಿಟ್ಲದಲ್ಲಿ ಸುದ್ದಿಗಾರರೊಂದಿಗೆ, ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದು ಹೇಳಿದ್ದಾರೆ. ಅದನ್ನು ಕಾದು ನೋಡಬೇಕಿದೆ. ಇನ್ನೋರ್ವ ಹಿಂದೂ ಮುಖಂಡ ಸತ್ಯಜಿತ್‌ ಸುರತ್ಕಲ್‌ ಕೂಡ ಬಿಜೆಪಿ ಟಿಕೆಟ್‌ ಬಯಸಿದವರು. ಅವರ ಈಗಿನ ನಿಲುವು ಸ್ಪಷ್ಟವಾಗಬೇಕಿದೆ.

ಮಾಜಿ ರಾಜ್ಯಾಧ್ಯಕ್ಷರಿಗೆ ತಪ್ಪಿತು ಟಿಕೆಟ್‌
ಮೂರು ಅವಧಿಗಳಲ್ಲಿ ನಿರಂತರವಾಗಿ ಬಿಜೆಪಿಯಿಂದ ಗೆಲ್ಲುತ್ತಾ ಬಂದವರು ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲು. ಎರಡನೇ ಅವಧಿಯ ಬಳಿಕ ಅವರಿಗೆ ರಾಜ್ಯಾಧ್ಯಕ್ಷ ಜವಾಬ್ದಾರಿಯೂ ಬಂತು. ಆ ಹೊತ್ತಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತಿಲ್ಲ ಎಂಬ ವಿಷಯದಲ್ಲಿ ಸಾಮಾಜಿಕ ಜಾಲ ತಾಣಗಳಲ್ಲಿ ಟೀಕೆ ಬರಲಾರಂಭಿಸಿತ್ತು. ಮೂರನೇ ಅವಧಿಯ ಕೊನೆಯಲ್ಲಿ ಒಂದು ವಲಯದ ಕಾರ್ಯಕರ್ತರಿಂದಲೇ ನಳಿನ್‌ಗೆ ಪ್ರತಿರೋಧ ಎದುರಾಗಿತ್ತು. ಆದರೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮೊದಲ ಭೇಟಿ ಸಂದರ್ಭ ಮತ್ತೆ ನಳಿನ್‌ ಅವರೇ ಅಭ್ಯರ್ಥಿ ಎಂದು ಘೋಷಿಸಿದ್ದರು. ಅದಕ್ಕೂ ಅಸಮಾಧಾನ ಹೊಗೆಯಾಡತೊಡಗಿತ್ತು. ಇದರ ನಡುವೆ ವರಿಷ್ಠರ ಖಾಸಗಿ ಸಮೀಕ್ಷಾ ತಂಡ ಬಂದು ಅಭಿಪ್ರಾಯ ಸಂಗ್ರಹಿಸಿತ್ತು. ಅಂತಿಮವಾಗಿ ಅಳೆದು ತೂಗಿ ನಿರ್ಧಾರ ತೆಗೆದುಕೊಂಡಿದೆ.

ಕ್ಯಾ| ಬೃಜೇಶ್‌ ಚೌಟ ಗೆಲುವಿಗೆ ಶ್ರಮ: ನಳಿನ್‌
ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗುವ ಮೂಲಕ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿದೆ. ಪಕ್ಷದ ಯಾರೇ ಕಾರ್ಯಕರ್ತರಿಗೂ ಲೋಕಸಭೆಯ ಟಿಕೆಟ್‌ ನೀಡಿದರೂ ಖುಷಿ ಇದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕ್ಯಾ| ಬೃಜೇಶ್‌ ಚೌಟ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವಿಗಾಗಿ ಪ್ರತಿಯೊಬ್ಬ ಕಾರ್ಯಕರ್ತರೂ ಶ್ರಮಿಸ ಬೇಕಾಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅಭಿಪ್ರಾಯಪಟ್ಟರು.

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕ್ಯಾ| ಬೃಜೇಶ್‌ ಚೌಟ ಅವರನ್ನು ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದು, ಅವರ ಗೆಲುವಿಗಾಗಿ ಶ್ರಮಿಸುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಮತ್ತೂಮ್ಮೆ ಅ ಧಿಕಾರಕ್ಕೆ ಬರಬೇಕು. ಮೋದಿಯವರು ಮತ್ತೆ ಪ್ರಧಾನಿಯಾಗಬೇಕು ಎಂದರು.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದನಾಗಿ ಸುದೀರ್ಘ‌ 15 ವರ್ಷಗಳ ಕಾಲ ಸೇವೆ ಸಲ್ಲಿಸುವ ಭಾಗ್ಯ ದೊರೆತಿದೆ. ಹಿರಿಯ ರಾಜಕಾರಣಿಗಳಾದ ಬಿ.ಜನಾರ್ದನ ಪೂಜಾರಿ, ವಿ.ಧನಂಜಯ ಕುಮಾರ್‌ ಅವರಿಗಿಂತಲೂ ಅಧಿಕ ವರ್ಷ ನನಗೆ ಸಂಸದ ಸ್ಥಾನದ ಭಾಗ್ಯವನ್ನು ಮತದಾರರು ನೀಡಿದ್ದಾರೆ. ನನ್ನ ಅವಧಿಯಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗಿವೆ. ರೂ. 1 ಲಕ್ಷ ಕೋಟಿಗೂ ಅಧಿಕ ಅನುದಾನವನ್ನು ಮೋದಿ ಯವರು ನೀಡಿದ್ದಾರೆ ಎಂದರು.

ಸತತ 3 ಬಾರಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಬಿಜೆಪಿ ರಾಜ್ಯಾಧ್ಯಕ್ಷನಾಗಿಯೂ ನಾಲ್ಕೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಅಲ್ಲದೆ ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಪಕ್ಷದ ಹಿರಿಯರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರು ನನಗೆ ಅವಕಾಶ ಕಲ್ಪಿಸಿದ್ದರು. ಅವರ ಮಾರ್ಗದರ್ಶನದಂತೆ ನಡೆದಿದ್ದೇನೆ. ಇದಕ್ಕೆ ಕಾರಣರಾದ ಬಿಜೆಪಿ ಕಾರ್ಯಕರ್ತರಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನವ ಯುವಕರಿಗೆ ಅವಕಾಶ
ಪಕ್ಷಕ್ಕೆ ಹೊಸ ಯುವಕರು ಬರಬೇಕು ಎಂಬ ಕಾರಣದಿಂದ ಹಿರಿಯರು ಯುವ ನಾಯಕರನ್ನು ಗುರುತಿಸಿ ಅವಕಾಶ ನೀಡುತ್ತಿದ್ದಾರೆ. ಕ್ಯಾ| ಚೌಟ ಅವರನ್ನು ಪಕ್ಷ ಗುರುತಿಸಿ ದ.ಕ. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗುವ ಅವಕಾಶ ನೀಡಿದೆ. ಅವರ ಗೆಲುವಿಗೆ ಒಟ್ಟಾಗಿ ಶ್ರಮಿಸಲಿದ್ದೇವೆ ಎಂದು ನಳಿನ್‌ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next