Advertisement

Dakshina Kannada: ಕರಾವಳಿಯಲ್ಲಿ ಕಲಿತವರಿಗೆ ಕರಾವಳಿಯಲ್ಲೇ ಉದ್ಯೋಗ-ಪದ್ಮರಾಜ್‌.ಆರ್

03:14 PM Apr 05, 2024 | Team Udayavani |

ತುಳುನಾಡು ಖ್ಯಾತಿಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಹೊಸಬರಾದ ಪದ್ಮರಾಜ್‌ ಆರ್‌. ಮತ್ತು ಕ್ಯಾ| ಬೃಜೇಶ್‌ ಚೌಟ ಸ್ಪರ್ಧೆಗಿಳಿದಿದ್ದಾರೆ. ಪದ್ಮರಾಜ್‌ 1995ರಲ್ಲಿ ಕಾನೂನು ವೃತ್ತಿಯ ಅಭ್ಯಾಸವನ್ನು ಹಿರಿಯ ನಾಯಕ ಜನಾರ್ದನ ಪೂಜಾರಿ ಅವರೊಂದಿಗೆ ಪ್ರಾರಂಭಿಸಿದರು. ಕೆಪಿಸಿಸಿ ಕಾರ್ಯದರ್ಶಿಯಾಗಿರುವ ಅವರು 25
ವರ್ಷಗಳಿಂದ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿಯಾಗಿದ್ದಾರೆ.

Advertisement

*ಮೊದಲ ಬಾರಿಗೆ ಚುನಾವಣ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದು ಪ್ರಥಮ ಬಾರಿ ಆದರೂ, ಇಲ್ಲಿಯವರೆಗೆ ಹಲವು ಚುನಾವಣೆಯಲ್ಲಿ ಕಾಂಗ್ರೆಸ್‌ ಪರವಾಗಿ ದುಡಿದ ಅನುಭವವಿದೆ. ಜಿಲ್ಲೆಯ ಕಾಂಗ್ರೆಸ್‌ನ ನಾಯಕರು, ಕಾರ್ಯಕರ್ತರ ಸಹಕಾರ ಇರುವುದು ವಿಶ್ವಾಸ ಮೂಡಿಸಿದೆ.

*ಚುನಾವಣೆಗೆ ಸ್ಪರ್ಧಿಸಬೇಕು ಎಂದು ಅನ್ನಿಸಿದ್ದು ಯಾವಾಗ, ಯಾಕೆ ಹಾಗೂ ಪ್ರೇರಣೆ ಏನು?
ಜಿಲ್ಲೆಯಲ್ಲಿ ಕಾಂಗ್ರೆಸ್‌ ಸಂಸದರು 1991ರ ವರೆಗೆ ಇದ್ದಾಗಿನ ಸುಧಾರಣೆ ಆ ಬಳಿಕ ವೇಗ ಪಡೆಯಲೇ ಇಲ್ಲ. ಇಲ್ಲಿನ ವಿಮಾನ ನಿಲ್ದಾಣ, ಎನ್‌ಎಂಪಿಟಿ, ಎನ್‌ಐಟಿಕೆ, ರೈಲು ನಿಲ್ದಾಣ, ಎಂಆರ್‌ಪಿಎಲ್‌ ಸಹಿತ ಎಲ್ಲವೂ ಬಂದಿದ್ದು ಕಾಂಗ್ರೆಸ್‌ ಸಂಸದರ
ಕಾಲದಲ್ಲಿ. ಅನಂತರ ಬಂದ ಬಿಜೆಪಿ ಜನರ ಮಧ್ಯೆ ಕಂದಕವನ್ನು ನಿರ್ಮಿಸಿ ಜಾತಿ-ಧರ್ಮದ ಹೆಸರಿನಲ್ಲಿ ಅಶಾಂತಿ ವಾತಾವರಣ ಸೃಷ್ಟಿಸಿದೆ. ಇದನ್ನು ಸರಿಪಡಿಸಿ ತುಳುನಾಡಿನಲ್ಲಿ ಸಾಮರಸ್ಯದ ಗತ ವೈಭವವನ್ನು ಮರುಸ್ಥಾಪಿಸಿ, ಕಲಿತವರಿಗೆ ಇಲ್ಲಿಯೇ ಉದ್ಯೋಗ ಒದಗಿಸುವುದು ನನ್ನ ಕರ್ತವ್ಯ ಎಂಬ ಸಂಕಲ್ಪದಿಂದ ದೇಶಪ್ರೇಮಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ.

*ರಾಜಕೀಯದಲ್ಲಿ ಗಾಡ್‌ಫಾದರ್‌ ಯಾರು ಮತ್ತು ಯಾಕೆ?
ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರೇ ನನ್ನ ಗಾಡ್‌ ಫಾದರ್‌. ದೇಶದ ದಕ್ಷ, ಪ್ರಾಮಾಣಿಕ ರಾಜಕೀಯದ ಮೂಲಕವೇ ಮನೆಮಾತಾದ ಅವರ ಮಾದರಿ ವ್ಯಕ್ತಿತ್ವವೇ ಕಾರಣ.

Advertisement

*ಮೊದಲ ಪ್ರಯತ್ನದಲ್ಲೇ ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ಜಿಲ್ಲೆಯಲ್ಲಿ ಅಭಿವೃದ್ಧಿ ಎಂಬುದು 1991ರ ಬಳಿಕ ಸ್ಥಗಿತಗೊಂಡಿದೆ. ಇದನ್ನು ಮತ್ತೆ ಹಳಿಗೆ ತರುವ ಸವಾಲು ಸ್ವೀಕರಿಸಿ ಚುನಾವಣೆಗೆ ಅಣಿಯಾಗಿದ್ದೇನೆ.

*ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ಕಾನೂನು ಪದವೀಧರನಾಗಿ ಸಮಾಜ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಸಮಿತಿಯಲ್ಲಿದ್ದು, ಎಲ್ಲ ಜಾತಿ, ಧರ್ಮದ ಜನರ ಜತೆಗೆ ಸೌಹಾರ್ದ ಬಾಂಧವ್ಯ ಹೊಂದಿರುವೆ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವಾದರ್ಶದಂತೆ ಅಶಕ್ತ ಕುಟುಂಬಕ್ಕೆ ನೆರವಾಗಲು ಗುರು ಬೆಳದಿಂಗಳು ಟ್ರಸ್ಟ್‌ ಸ್ಥಾಪಿಸಿ ಸೇವೆ ಮಾಡುತ್ತಿರುವೆ. ಎಲ್ಲರನ್ನೂ ಜತೆಯಾಗಿ ಕರೆದೊಯ್ಯುವ ಮನೋಭಾವಕ್ಕೆ ಶಕ್ತಿ ತುಂಬಲು, ಅಭಿವೃದ್ಧಿಯ ದಕ್ಷಿಣ ಕನ್ನಡ ಜಿಲ್ಲೆಯ ಆಶಯಕ್ಕೆ ಬಲ ನೀಡಲು ಮತದಾರರು ನನಗೆ ಆಶೀರ್ವದಿಸುವರೆಂಬ ವಿಶ್ವಾಸವಿದೆ.

*ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? ಪ್ರಮುಖ 5 ಕಾರಣ ತಿಳಿಸಿ.
ನನ್ನದು ಪ್ರೀತಿ ವಿಶ್ವಾಸದ ರಾಜಕೀಯವೇ ಹೊರತು ದ್ವೇಷ ಕಾರುವ ರಾಜಕೀಯವಲ್ಲ. ಅಭಿವೃದ್ಧಿಗಾಗಿ ಜನರು ಕಾಂಗ್ರೆಸ್‌ ಅನ್ನು ಬೆಂಬಲಿಸುವ ವಾತಾವರಣವಿದೆ. ಎಲ್ಲಜಾತಿ-ಧರ್ಮದವರ ಜತೆಗೆ ಪರಸ್ಪರ ಗೌರವ, ಪ್ರೀತಿ ವಿಶ್ವಾಸದಿಂದ ಬದುಕಲು ಮುಖ್ಯ ಆದ್ಯತೆ ನೀಡುವುದು. ಪ್ರವಾಸೋದ್ಯಮ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಯ ಮೆರುಗು ಇನ್ನಷ್ಟು ಹೆಚ್ಚಿಸಲು ಜನರಿಗೆ ಮನವರಿಕೆ ಮಾಡಿ ಅವರ ಮನಸ್ಸನ್ನು ಗೆಲ್ಲುವೆ.

*ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಅಂತ ಇದ್ದೀರಿ?
ಸರ್ವರೂ ಸಹಬಾಳ್ವೆಯಿಂದ ಬದುಕಲು ವಿವಿಧ ಕ್ಷೇತ್ರಗಳಲ್ಲಿನ ಗಣ್ಯರು, ಪರಿಣಿತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶದಲ್ಲೇ ಅತ್ಯಂತ ಸದೃಢ, ಬಲಿಷ್ಠ ಜಿಲ್ಲೆಯಾಗಿ ದಕ್ಷಿಣ ಕನ್ನಡವನ್ನು ರೂಪಿಸುವುದು ನನ್ನ ಆಶಯ. ಇದಕ್ಕಾಗಿ ಸಮರ್ಥ ಕಾರ್ಯಸೂಚಿ ರೂಪಿಸಲಾಗುವುದು.

*ಗೆದ್ದರೆ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ಉದ್ಯೋಗ ಸೃಷ್ಟಿಯೇ ಮೊದಲ ಆದ್ಯತೆ. ನಮ್ಮ ಜಿಲ್ಲೆಗಿರುವ ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆಪಟ್ಟಿ ತೆಗೆದು ಹಾಕಿ ಸಾಮರಸ್ಯದ ಗತ ವೈಭವ ಮರುಕಳಿಸಿ ಕೈಗಾರಿಕೆಗಳನ್ನು ಆಕರ್ಷಿಸಲು ಒತ್ತು ನೀಡಲಾಗುವುದು.

*ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ಸಾಮರಸ್ಯ ಸ್ಥಾಪನೆ, ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳನ್ನು ಆಕರ್ಷಿಸುವುದು, ಇಲ್ಲಿ ಕಲಿತವರಿಗೆ ಇಲ್ಲಿಯೇ ಉದ್ಯೋಗ ದೊರಕಿಸಿಕೊಡಲು ಪ್ರಯತ್ನಿಸುವುದು, ವೆನ್ಲಾಕ್‌, ಲೇಡಿಗೋಶನ್‌ ಸಹಿತ ಎಲ್ಲ ಆರೋಗ್ಯ ಕೇಂದ್ರಗಳನ್ನು ಕೇಂದ್ರ ಹಾಗೂ ಇತರ ಅನುದಾನದ ನೆಲೆಯಲ್ಲಿ ಬಡವರಿಗೆ ಅತ್ಯುತ್ತಮ ಆರೋಗ್ಯ ಸೇವೆಗೆ ಒತ್ತು ನೀಡುವುದು, ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ವಿಸ್ತರಿಸಿ ಮತ್ತಷ್ಟು ವಿದೇಶಿ ವಿಮಾನ ಕರಾವಳಿ ಸಂಪರ್ಕಕ್ಕೆ ಸಿಗುವಂತಾಗಿ ಪ್ರವಾಸೋದ್ಯಮ, ಮೆಡಿಕಲ್‌ ಕ್ಷೇತ್ರದಲ್ಲಿ ಅದ್ವಿತೀಯ ಬೆಳವಣಿಗೆ ಆಶಯ.

*ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ಜಿಲ್ಲೆಯ ಪಕ್ಷದ ಸರ್ವ ಸಮ್ಮತದ ಅಭ್ಯರ್ಥಿಯಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಎಐಸಿಸಿ, ಕೆಪಿಸಿಸಿ ಹಾಗೂ ಜಿಲ್ಲಾ ಘಟಕದ ನಾಯಕರ ಬೆಂಬಲವಿದೆ. ಹೀಗಾಗಿ ನಾನು ಅದೃಷ್ಟವಂತ.

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next