Advertisement

ಮಂಗಳೂರು: ಕೋಸ್ಟ್‌ಗಾರ್ಡ್‌ ಕ್ಷಮತೆ ಪ್ರದರ್ಶಿಸಿದ “ಎ ಡೇ ಎಟ್‌ ಸೀ’

12:14 AM Feb 03, 2023 | Team Udayavani |

ಮಂಗಳೂರು: ತಣ್ಣನೆ ಹರಡಿರುವ ನೀಲ ಸಮುದ್ರದಲ್ಲಿ ಧುತ್ತನೆ ಉಂಟಾಗುವ ಸಂದಿಗ್ಧ ಪರಿಸ್ಥಿತಿಗಳನ್ನು ನಿಭಾಯಿಸುವುದಕ್ಕೆ ಇರುವುದು ಕೋಸ್ಟ್‌ಗಾರ್ಡ್‌. ತನ್ನ ಸುಸಜ್ಜಿತ ಕಣ್ಗಾವಲು ನೌಕೆಗಳು, ಅತ್ಯಾಧುನಿಕ ಹೆಲಿಕಾಪ್ಟರ್‌, ಡಾರ್ನಿಯರ್‌ ವಿಮಾನಗಳು, ಅತಿವೇಗದಲ್ಲಿ ತೆರಳಿ ರಕ್ಷಣೆ ಮಾಡಬಲ್ಲ ಇಂಟರ್‌ಸೆಪ್ಟರ್‌ ಬೋಟ್‌ಗಳೆಲ್ಲದರ ಶಕ್ತಿ ಪ್ರದರ್ಶನವನ್ನು “ಎ ಡೇ ಅಟ್‌ ಸೀ-ಸಮುದ್ರದಲ್ಲೊಂದು ದಿನ’ ಎನ್ನುವ ಹೆಸರಿನಲ್ಲಿ ಗುರುವಾರ ಅರಬಿ ಸಮುದ್ರದಲ್ಲಿ ಬಹಿರಂಗಪಡಿಸಿತು. ಈ ವಿಭಿನ್ನ ಕಾರ್ಯಕ್ರಮಕ್ಕೆ ಕೋಸ್ಟ್‌ಗಾರ್ಡ್‌ ಹಡಗಿನಲ್ಲೇ ಇದ್ದು ಸಾಕ್ಷಿಯಾದವರು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಮತ್ತು ಆಹ್ವಾನಿತರಾಗಿದ್ದ ಕೆಲವು ನಾಗರಿಕರು.

Advertisement

ತಾಲೀಮಿನಲ್ಲಿ ಅತ್ಯಾಧುನಿಕ ಕಾವಲು ನೌಕೆಗಳಾದ ಸಚೇತ್‌, ವರಾಹ, ವೇಗದ ನೌಕೆಗಳಾದ ರಾಜ್‌ದೂತ್‌ ಸೇರಿದಂತೆ ಒಟ್ಟು 6 ನೌಕೆಗಳು ಭಾಗವಹಿಸಿದ್ದವು.

ಕಡಲ ತೀರ ಅಂತಾರಾಷ್ಟ್ರೀಯ ಸಮುದ್ರ ಗಡಿಭಾಗದಲ್ಲಿ ಕಣ್ಗಾವಲು, ಶೋಧ ಮತ್ತು ಸಂರಕ್ಷಣೆಯ ಹೊಣೆ ಹೊತ್ತಿರುವ ಕೋಸ್ಟ್‌ ಗಾರ್ಡ್‌ ಸಿಬಂದಿ ಯಾವುದೇ ಕಠಿನ ಪರಿಸ್ಥಿತಿಯನ್ನೂ ನಿಭಾಯಿಸುವುದಕ್ಕೆ ಸಜ್ಜು ಎನ್ನುವ ಸಂದೇಶದೊಂದಿಗೆ ವಿವಿಧ ಕಸರತ್ತುಗಳನ್ನು ಅಣಕು ಪ್ರದರ್ಶನಗಳನ್ನು ಮಾಡಿ ತೋರಿಸಿದರು.

ಕಡಲ್ಗಳ್ಳರಿಂದ ನೌಕೆಯ ರಕ್ಷಣೆ
ನವಮಂಗಳೂರು ಬಂದರಿನಿಂದ ಬೆಳಗ್ಗೆ ಹೊರಟು 15 ಕಿ.ಮೀ. ಸಮುದ್ರ ದಲ್ಲಿ ತೆರಳಲಾಯಿತು. ಮುಂದೆ ಸಮುದ್ರದಲ್ಲಿ ಹಡಗೊಂದನ್ನು ಕಡಲ್ಗಳ್ಳರು ಆಕ್ರಮಿಸಿರುವ ಮಾಹಿತಿಯನ್ನು ಕೋಸ್ಟ್‌ಗಾರ್ಡನ ಡಾರ್ನಿಯರ್‌ ವಿಮಾನಗಳು ನೀಡುತ್ತವೆ. ತತ್‌ಕ್ಷಣ ಎರಡು ಇಂಟರ್‌ಸೆಪ್ಟರ್‌ ಬೋಟ್‌ಗಳನ್ನು ಪರಿಶೀಲನೆಗೆ ಕಳುಹಿಸಲಾಗುತ್ತದೆ. ಕಡಲ್ಗಳ್ಳರಿರುವ ಹಡಗನ್ನು ಅವು ಸುತ್ತುವರಿಯುತ್ತವೆ. ಇದೇ ವೇಳೆ ಸುರಕ್ಷೆಯ ಕ್ರಮವಾಗಿ ಹೆಲಿಕಾಪ್ಟರ್‌ ಮೇಲಿಂದ ನಿಗಾ ಇರಿಸುತ್ತದೆ. ಸ್ಥಳಕ್ಕೆ ಧಾವಿಸುವ ನೌಕೆ ರಾಜ್‌ದೂತ್‌ ಕಡಲ್ಗಳ್ಳರಿರುವ ನೌಕೆಯ ಮುಂದೆ ಎಚ್ಚರಿಕೆಯ ಗನ್‌ ಫೈರ್‌ ಮಾಡಿ ಅದನ್ನು ನಿಲ್ಲಿಸುತ್ತದೆ. ಬಳಿಕ ಸಚೇತ್‌ ನೌಕೆಯಿಂದ ಇಳಿದ ಸಿಬಂದಿ ತೆರಳಿ ಪೈರೇಟ್‌ಗಳನ್ನು ಬಂಧಿಸುತ್ತಾರೆ. ಇದೇ ವೇಳೆ ಕಡಲ್ಗಳ್ಳರಿಂದ ತಳ್ಳಲ್ಪಟ್ಟು ಕಡಲಿಗೆ ಬಿದ್ದ ಕೋಸ್ಟ್‌ಗಾರ್ಡ್‌ ಸಿಬಂದಿಗಳನ್ನು ವರಾಹ ಹಡಗಿನಿಂದ ತೆರಳುವ ಸ್ಪಿಡ್‌ ಬೋಟ್‌ ರಕ್ಷಣೆ ಮಾಡುತ್ತದೆ. ಇನ್ನೋರ್ವ ಸಿಬಂದಿಯನ್ನು ಹೆಲಿಕಾಪ್ಟರ್‌ನಿಂದ ಹಗ್ಗ, ರಕ್ಷಣ ತೊಟ್ಟಿಲನ್ನಿಳಿಸಿ, ರಕ್ಷಣೆ ಮಾಡಲಾಗುತ್ತದೆ.

Advertisement

ನೌಕೆಗೆ ಬೆಂಕಿ!
ಇನ್ನೊಂದೆಡೆ ಕರಾವಳಿ ಪೊಲೀಸರ ನೌಕೆಗೆ ಬೆಂಕಿ ಬೀಳುತ್ತದೆ, ಅದರ ಸೂಚಕವಾಗಿ ಹಡಗನ್ನಿಡೀ ಹೊಗೆ ವ್ಯಾಪಿಸಿಕೊಂಡಿತು. ಸಚೇತ್‌ ನೌಕೆಯಲ್ಲಿ ಅಗ್ನಿಶಾಮಕ ಯಂತ್ರವೂ ಇದ್ದು, ಅದರ ಮೂಲಕ ದೂರದ ವರೆಗೂ ನೀರಿನ ಜೆಟ್‌ ಚಿಮ್ಮಿಸುವ ಮೂಲಕ ಬೆಂಕಿಯನ್ನಾರಿಸುತ್ತಾರೆ.

ಅಕ್ಕಪಕ್ಕದಲ್ಲೇ ಸಚೇತ್‌ ಹಾಗೂ ವರಾಹ ಹಡಗುಗಳನ್ನು ನಿಧಾನವಾಗಿ ಚಲಾಯಿಸುತ್ತಾ ಜನರನ್ನು ಒಂದರಿಂದ ಇನ್ನೊಂದಕ್ಕೆ ಸಾಗಿಸುವ ಕಸರತ್ತು, ಹೆಲಿಕಾಪ್ಟರ್‌ಗಳ ವಿವಿಧ ಹೆಲಿಬ್ಯಾಸ್ಟಿಕ್‌ ಸಾಹಸಗಳು, ದೂರದ ಗುರಿಯನ್ನು ಭೇದಿಸುವ ಅತ್ಯಾಧುನಿಕ ನೌಕಾ ಫಿರಂಗಿ ಗಳಿಂದ ಫೈರಿಂಗ್‌ ಗಮನ ಸೆಳೆದವು.

ಕೊನೆಯಲ್ಲಿ ಒಂದರ ಹಿಂದೆ ಒಂದರಂತೆ ನೌಕೆಗಳು ಸಾಗಿ ಬರುವ ಶಿಸ್ತಿನ ಫಾರ್ಮೇಶನ್‌, ಆ ಬಳಿಕ ರಾಜ್ಯಪಾಲರಿಗೆ ಸಮುದ್ರ ಮಧ್ಯೆಯೇ ಸಾಲಾಗಿ ಒಂದೊಂದಾಗಿ ಗೌರವ ನಮನ ಸಲ್ಲಿಸುತ್ತಾ ತೆರಳಿದರೆ ಮೇಲ್ಭಾಗದಲ್ಲಿ ಡಾರ್ನಿಯರ್‌ ವಿಮಾನಗಳೂ ಹೆಲಿಕಾಪ್ಟರ್‌ಗಳೂ ಫ್ಲೆಪಾಸ್ಟ್‌ ನಡೆಸಿದವು.

ಸುಮಾರು 2 ಗಂಟೆ ಕಾಲ ನೀಲ ಸಮುದ್ರದಲ್ಲಿ ತಮ್ಮ ಕಾರ್ಯ ಚಟುವಟಿಕೆ ಗಳನ್ನು, ಶಕ್ತಿ ಸಾಮರ್ಥ್ಯ, ಭದ್ರತೆ, ಸುರಕ್ಷತೆ ಒದಗಿಸುವ ಕೌಶಲ ಇವೆಲ್ಲವನ್ನೂ ಕೋಸ್ಟ್‌ ಗಾರ್ಡ್‌ ಸಿಬಂದಿ ಪ್ರದರ್ಶಿಸುವ ಮೂಲಕ ಪಾರಮ್ಯ ಮೆರೆದರು.

ಕೋಸ್ಟ್‌ಗಾರ್ಡ್‌ ಸಪ್ತಾಹ
ಫೆ. 1ರಿಂದ 7ರ ವರೆಗೆ ಕೋಸ್ಟ್‌ ಗಾರ್ಡ್‌ ಸಪ್ತಾಹವಾಗಿದ್ದು ಅದರ ಅಂಗವಾಗಿ ಈ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಕೋಸ್ಟ್‌ಗಾರ್ಡ್‌ನ ಕರ್ನಾಟಕ ಕಮಾಂಡರ್‌ ಪ್ರವೀಣ್‌ ಕುಮಾರ್‌ ಮಿಶ್ರಾ, ನೌಕೆಗಳ ಕಮಾಂಡರ್‌ಗಳಾದ ಆಕಾಶ್‌ ಶರ್ಮಾ, ಅಂಕಿತ್‌ ಕಯಾತ್‌ ಭಾಗವಹಿಸಿದ್ದರು.

“ಗಡಿ ರಕ್ಷಣೆಗೆ ಕೋಸ್ಟ್‌  ಗಾರ್ಡ್‌ ಪ್ರಮುಖ ಕೊಡುಗೆ’
ಪಣಂಬೂರು: ಕೋಸ್ಟ್‌ ಗಾರ್ಡ್‌ ಭಾರತೀಯ ಸೇನೆಯ ಭಾಗವಾಗಿರುವ ಸಶಸ್ತ್ರ ಪಡೆ. ವಿಶ್ವದಲ್ಲೇ ಅತೀ ದೊಡ್ಡ ಕೋಸ್ಟ್‌ ಗಾರ್ಡ್‌ ಪಡೆಗಳಲ್ಲಿ ಒಂದಾಗಿರುವ ಭಾರತೀಯ ಕೋಸ್ಟ್‌ ಗಾರ್ಡ್‌ ಸಮುದ್ರ ಗಡಿಗಳನ್ನು ರಕ್ಷಿಸುವಲ್ಲಿ ಪ್ರಮುಖ ಕೊಡುಗೆ ನೀಡುತ್ತಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಹೇಳಿದರು.

ದೇಶದ ಕಡಲ ಗಡಿಯ ಸುಮಾರು 7,500 ಕಿ.ಮೀ. ರಕ್ಷಣೆ, ಪರಿಹಾರ ಮತ್ತು ರಕ್ಷಣೆಯ ಜವಾಬ್ದಾರಿ ಹೊಂದಿರುವ ಕೋಸ್ಟ್‌ ಗಾರ್ಡ್‌ ತನ್ನ ಕರ್ತವ್ಯಗಳನ್ನು ಅತ್ಯಂತ ಸಮರ್ಪಣೆ, ಭಕ್ತಿ ಮತ್ತು ಧೈರ್ಯದಿಂದ ನಿರ್ವಹಿಸುತ್ತಿದೆ ಎಂದರು.

ಸುರಕ್ಷ ಕ್ರಮಗಳ ಬಗ್ಗೆ ಮಾಹಿತಿ
ಭಾರತೀಯ ಕೋಸ್ಟ್‌ ಗಾರ್ಡ್‌ ನೈಸರ್ಗಿಕ ವಿಕೋಪಗಳಲ್ಲಿ ಗಮನಾರ್ಹ ಕೊಡುಗೆ ನೀಡಿದೆ ಮತ್ತು ಕರ್ನಾಟಕಕ್ಕೆ ಅಪ್ಪಳಿಸಿದ ಟೌಟ್‌, ಗುಲಾಬ್‌ ಮತ್ತು ಶಾಹೀನ್‌ ಚಂಡಮಾರುತಗಳ ಸಮಯದಲ್ಲಿ ಜೀವ ಮತ್ತು ಆಸ್ತಿಯನ್ನು ಉಳಿಸಿದೆ. ಕೋಸ್ಟ್‌ ಗಾರ್ಡ್‌ ಮೀನುಗಾರರನ್ನು ರಕ್ಷಿಸುವುದು ಮಾತ್ರವಲ್ಲದೆ ಸಮುದಾಯ ಸಂವಾದ ಕಾರ್ಯಕ್ರಮಗಳ ಮೂಲಕ ವಿವಿಧ ರಕ್ಷಣಾ ಮತ್ತು ಸುರಕ್ಷ ಕ್ರಮಗಳ ಬಗ್ಗೆ ಮೀನುಗಾರರಿಗೆ ತಿಳಿಸುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next