ಕುಂದಾಪುರ: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ರಾಜ್ಯದ ಹದಿನಾಲ್ಕು ಒಕ್ಕೂಟಗಳಲ್ಲೇ ಅಗ್ರ ಪಂಕ್ತಿಯಲ್ಲಿದ್ದು, ಗುಣಮಟ್ಟದ ಹಾಲು ಪೂರೈಕೆ ಹಾಗೂ ಹೈನುಗಾರರಿಗೆ ಗರಿಷ್ಠ ಮಟ್ಟದ ಸಹಕಾರ ನೀಡುತ್ತಿರುವ ಏಕೈಕ ಒಕ್ಕೂಟ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
ಅವರು ಕುಂದಾಪುರ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇವರ ಆಶ್ರಯದಲ್ಲಿ ಕುಂದಾಪುರ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಒಕ್ಕೂಟ ರೂ. 5.57 ಕೋಟಿ ನಿವ್ವಳ ಲಾಭ ಗಳಿಸಿದ್ದು ಪ್ರಸ್ತುತ 3.86 ಲಕ್ಷ ಲೀಟರ್ ಹಾಲು ಉತ್ಪಾದನಾ ಸಾಮರ್ಥ್ಯಹೊಂದಿದೆ. ಅಲ್ಲದೇ 23ಲಕ್ಷ ಲೀಟರ್ ಹಾಲು ಹುಡಿಯನ್ನು ಉತ್ಪಾದಿಸುತ್ತಿದೆ. ಹೈನುಗಾರರು ಹಾಗೂ ಸಿಬಂದಿಗಳಿಗೆ ಅನೇಕ ಸೌಕರ್ಯಗಳನ್ನು ನೀಡಲಾಗುತ್ತಿದೆ. ಒಕ್ಕೂಟದ ಸದಸ್ಯರಿಗಾಗಿ ವಿಮಾ ಯೋಜನೆಗೆ ರೂ. 28 ಲಕ್ಷ ಮೊತ್ತ ವಿನಿಯೋಗಿಸಲಾಗಿದೆ . ಹಾಗೂ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಯೋಜನೆಗಾಗಿ ರೂ.75 ಲಕ್ಷ ವಿನಿಯೋಗಿಸಿದೆ ಎಂದರು.
ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಸೂರ್ಯ ಶೆಟ್ಟಿ, ನೀರೆ ಕೃಷ್ಣ ಶೆಟ್ಟಿ, ಜಾನಕಿ ಹಂದೆ, ಉದಯ ಕೋಟ್ಯಾನ್, ನವೀನcಂದ್ರ ಜೈನ್, ಅಶೋಕ್ ಕುಮಾರ್ ಶೆಟ್ಟಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ| ಸತ್ಯನಾರಾಯಣ, ನಿತ್ಯಾನಂದ ಭಕ್ತ, ಮಾರುಕಟ್ಟೆ ವ್ಯವಸ್ಥಾಪಕ ಶಿವಶಂಕರ್ ಸ್ವಾಮಿ ಉಪಸ್ಥಿತರಿದ್ದರು.
ಒಕ್ಕೂಟದ ಪ್ರೋತ್ಸಾಹ ಧನ, ಸವಲತ್ತು ವಿತರಣೆ, ವಿದ್ಯಾರ್ಥಿ ವೇತನ ವಿತರಿಸಲಾಯಿತು.
ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ ಸ್ವಾಗತಿಸಿದರು. ವಿಸ್ತರಣಾಧಿಕಾರಿ ರಾಜಾರಾಮ ಕಾರ್ಯಕ್ರಮ ನಿರ್ವ ಹಿಸಿದರು. ನಿರ್ದೇಶಕ ಸೂರ್ಯ ಶೆಟ್ಟಿ ವಂದಿಸಿದರು.