ಮಂಗಳೂರು: ರಾಜ್ಯದ ಪ್ರಮುಖ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಗಳಲ್ಲೊಂದಾಗಿ ಗುರುತಿಸಿಕೊಂಡಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಮಂಡಳಿಗೆ ಮೇ 12ರಂದು ಚುನಾವಣೆ ನಡೆಯಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇನ್ನೊಂದು ಪ್ರತಿಷ್ಠಿತ ಸಹಕಾರಿ ಚುನಾವಣೆಗೆ ಸಾಕ್ಷಿಯಾಗುತ್ತಿದ್ದು, ಕುತೂಹಲ ಗರಿಗೆದರಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿರುವ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ 5 ವರ್ಷಗಳ ಅವಧಿಯ ನಿರ್ದೇಶಕರ ಮಂಡಳಿಗೆ ಈ ಚುನಾವಣೆ. ಎ.27ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದ್ದು, ಮೇ 4 ಕೊನೆಯ ದಿನ. ಮೇ5ರಂದು ಪರಿಶೀಲನೆ, ಮೇ 6 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನ. ಅವಶ್ಯಬಿದ್ದರೆ ಮೇ 12ರಂದು ಚುನಾವಣೆ ನಡೆಯಲಿದೆ.
ಅಂದೇ ಸಂಜೆ ಮತ ಎಣಿಕೆ, ಫಲಿತಾಂಶ ಪ್ರಕಟ. ಒಕ್ಕೂಟವು ಮಂಗಳೂರು ಮತ್ತು ಬಂಟ್ವಾಳ ತಾಲೂಕುಗಳನ್ನು ಒಳಗೊಂಡ ಮಂಗಳೂರು ಉಪವಿಭಾಗ, ಪುತ್ತೂರು, ಬೆಳ್ತಂಗಡಿ, ಸುಳ್ಯಗಳನ್ನು ಒಳಗೊಂಡ ಪುತ್ತೂರು ಉಪವಿಭಾಗ, ಕುಂದಾಪುರ,ಉಡುಪಿ ಮತ್ತು ಕಾರ್ಕಳಗಳನ್ನು ಒಳಗೊಂಡ ಕುಂದಾಪುರ ಉಪವಿಭಾಗಗಳನ್ನು ಹೊಂದಿದೆ. ಮಂಗಳೂರು ಉಪವಿಭಾಗದಿಂದ 3, ಪುತ್ತೂರಿನಿಂದ 4, ಕುಂದಾಪುರದಿಂದ 7 ಮತ್ತು ಎರಡು ಮಹಿಳಾ ಸ್ಥಾನಗಳನ್ನು ಒಳಗೊಂಡು ಒಟ್ಟು 16 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ. ಪ್ರಸ್ತುತ ರವಿರಾಜ ಹೆಗ್ಡೆ ಅಧ್ಯಕ್ಷರು ಮತ್ತು ಸುಚರಿತ ಶೆಟ್ಟಿ ಉಪಾಧ್ಯಕ್ಷರಾಗಿದ್ದಾರೆ.
ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧ್ಯಕ್ಷರು ಒಕ್ಕೂಟದ ಸದಸ್ಯರಾಗಿರುತ್ತಾರೆ. ಮಂಗಳೂರು ತಾಲೂಕಿನಲ್ಲಿ 79, ಬಂಟ್ವಾಳದಲ್ಲಿ 77, ಪುತ್ತೂರಿನಲ್ಲಿ 78, ಸುಳ್ಯ 44, ಕುಂದಾಪುರ 108, ಉಡುಪಿ ಜಿಲ್ಲೆಯಲ್ಲಿ 124 ಮತ್ತು ಕಾರ್ಕಳ ತಾಲೂಕಿನಲ್ಲಿ 64 ಸಹಕಾರಿ ಸಂಘಗಳು ಸೇರಿದಂತೆ ಒಟ್ಟು 643 ಮತದಾರರನ್ನು ಒಕ್ಕೂಟ ಹೊಂದಿದೆ.
ಕಳೆದ ಅವಧಿಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಬಾರಿಯೂ ಒಮ್ಮತದ ಆಯ್ಕೆ ಕುರಿತು ಜಿಲ್ಲೆಯ ಪ್ರಮುಖ ಸಹಕಾರಿ ಧುರೀಣರ ನಡುವೆ ಮಾತುಕತೆ ನಡೆಯುತ್ತಿದೆ. ಮೇ 2ರ ವೇಳೆಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಎಸ್‌ಸಿಡಿಸಿಸಿ ಬ್ಯಾಂಕ್, ಕ್ಯಾಂಪ್ಕೋ ಮತ್ತು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅವಿಭಜಿತ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದಿವೆ. ಎಸ್‌ಸಿಡಿಸಿಸಿ ಬ್ಯಾಂಕ್‌ಗೆ ಈಗಾಗಲೇ ಚುನಾವಣೆ ನಡೆದಿದ್ದು ಡಾ| ರಾಜೇಂದ್ರ ಕುಮಾರ್ ನೇತೃತ್ವದ ಸಹಕಾರ ಬಳಗ ಜಯ ಸಾಧಿಸಿದೆ.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಚುನಾವಣೆ ಮೇ 12ರಂದು ನಡೆಯಲಿದ್ದು, ನಾಮಪತ್ರ ಸ್ವೀಕಾರ ಆರಂಭಗೊಂಡಿದೆ. ಎ.29ರ ವರೆಗೆ ಪುತ್ತೂರು ಸಾಮಾನ್ಯ ಕ್ಷೇತ್ರದಿಂದ ಒಂದು ಮತ್ತು ಕುಂದಾಪುರ ಸಾಮಾನ್ಯ ಕ್ಷೇತ್ರದಿಂದ 1 ಸೇರಿ ಒಟ್ಟು 2 ನಾಮಪತ್ರಗಳು ಸಲ್ಲಿಕೆಯಾಗಿವೆ. ಮೇ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.
– ಎಸ್.ಸಿ. ಮಹೇಶ್ ಚುನಾವಣಾಧಿಕಾರಿ ಮತ್ತು ಜಿ.ಪಂ. ಉಪಕಾರ್ಯದರ್ಶಿ