Advertisement

ಸಿ.ಸಿ. ಕೆಮರಾ ಕಣ್ಗಾವಲು : ಲೆಕ್ಕಕ್ಕೆ 93, ಕಾರ್ಯ ನಿರ್ವಹಿಸುತ್ತಿರುವುದು 5 ಮಾತ್ರ!

10:47 PM Feb 21, 2021 | Team Udayavani |

ಮಹಾನಗರ: ಮಂಗಳೂರು ಪೊಲೀಸರು ನಗರದ ಪ್ರಮುಖ ಟ್ರಾಫಿಕ್‌ ಜಂಕ್ಷನ್‌ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ 93 ಸಿ.ಸಿ. ಕೆಮರಾಗಳನ್ನು ಕೆಲವು ವರ್ಷಗಳ ಹಿಂದೆ ಅಳವಡಿಸಿದ್ದರು. ಆದರೆ ಈಗ ಅವುಗಳ ಪೈಕಿ ಬೆರಳೆಣಿಕೆಯ ಅಂದರೆ 5 ಸಿ.ಸಿ. ಕೆಮರಾಗಳು ಮಾತ್ರ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ.

Advertisement

ಇತ್ತೀಚೆಗೆ ಪೊಲೀಸರು ಸ್ವತಃ ಪರಿಶೀಲನೆ ನಡೆಸಿದಾಗ ಈ ವಿಷಯ ಗೊತ್ತಾಗಿದೆ. ವಾರ್ಷಿಕ ನಿರ್ವಹಣೆಯ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ. ನಗರದ ಆಯ್ದ 4- 5 ಕಡೆ ಇರುವ ಸಿ.ಸಿ. ಕೆಮರಾಗಳು ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದು, ಉಳಿದ 88 ಕಡೆಗಳಲ್ಲಿ ಇರುವ ಸಿ.ಸಿ. ಕೆಮರಾಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಇದೀಗ ಅವುಗಳ ನಿರ್ವಹಣೆಗಾಗಿ ಪೊಲೀಸ್‌ ಕಮಿಷನರೆಟ್‌ ವತಿಯಿಂದ ನಿರ್ವಹಣೆಯ ಗುತ್ತಿಗೆದಾರರಿಗೆ ಪತ್ರ ಬರೆಯಲಾಗಿದೆ.

ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪರಾಧ ಕೃತ್ಯಗಳ ಮೇಲೆ ಕಣ್ಗಾವಲು ಇರಿಸಲು ಪೊಲೀಸ್‌ ಕಮಿಷನರೆಟ್‌ ವತಿಯಿಂದ ಕೆಲವು ವರ್ಷಗಳ ಹಿಂದೆ 93 ಸಿ.ಸಿ. ಕೆಮರಾಗಳನ್ನು ಪ್ರಮುಖ ಜಂಕ್ಷನ್‌, ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿತ್ತು. ಇದೀಗ ಈ ಕೆಮರಾಗಳು ಹಳೆಯದಾಗಿವೆ ಮಾತ್ರವಲ್ಲ, ನಿರ್ವಹಣೆಯ ಕೊರತೆಯಿಂದ ಕಾರ್ಯದಕ್ಷತೆಯನ್ನು ಕಳೆದುಕೊಂಡಿವೆ. ಅವುಗಳು ಸೆರೆ ಹಿಡಿಯುವ ಚಿತ್ರಣ ಅಸ್ಪಷ್ಟವಾಗಿದೆ. ರಾತ್ರಿ ವೇಳೆ ನಡೆಯುವ ವಿದ್ಯಮಾನಗಳ ಚಿತ್ರಣವೇ ಸಿಗುತ್ತಿಲ್ಲ. ಕೆಲವು ಜಂಕ್ಷನ್‌ಗಳಲ್ಲಿ ರಸ್ತೆ ಮತ್ತು ಫುಟ್‌ಪಾತ್‌ ಅಭಿವೃದ್ಧಿ ಕಾಮಗಾರಿಗಳ ಸಂದರ್ಭ ತೆರವು ಮಾಡಿದ್ದ ಸಿ.ಸಿ. ಕೆಮರಾಗಳನ್ನು ಇನ್ನೂ ಪುನರ್‌ಸ್ಥಾಪಿಸಿಲ್ಲ.

ಲೇಡಿಹಿಲ್‌, ಲಾಲ್‌ಬಾಗ್‌ ಜಂಕ್ಷನ್‌ಗಳಲ್ಲಿ ಫುಟ್‌ಪಾತ್‌ ಅಭಿವೃದ್ಧಿ ಕಾಮಗಾರಿ ಸಂದರ್ಭ ಅಲ್ಲಿದ್ದ ಸಿ.ಸಿ. ಕೆಮರಾಗಳನ್ನು ತೆರವು ಮಾಡಲಾಗಿದ್ದು, ಈ ಪೈಕಿ ಲೇಡಿಹಿಲ್‌ನಲ್ಲಿ ಅತ್ಯಾಧುನಿಕ ಸಿ.ಸಿ. ಕೆಮರಾ ಅಳವಡಿಸುವ ಕೆಲಸ ಇದೀಗ ನಡೆಯುತ್ತಿದೆ. ಇಷ್ಟೇ ಅಲ್ಲದೆ ಪೊಲೀಸರು ಅಳವಡಿಸಿದ್ದ 93 ಸಿ.ಸಿ. ಕೆಮರಾಗಳ ಪೈಕಿ 18 ಕೆಮರಾಗಳ ಖಾಸಗಿ ಸ್ಥಳಗಳಲ್ಲಿದ್ದ ರಿಸೀವರ್‌ಗಳನ್ನು ಸ್ಥಳೀಯರು ವಿವಿಧ ಕಾರಣಗಳನ್ನು ನೀಡಿ ಕಿತ್ತು ಹಾಕಿದ್ದು, ಇದರಿಂದಾಗಿಯೂ ಸಮಸ್ಯೆ ಎದುರಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಸ್ಮಾರ್ಟ್‌ ಸಿಟಿ ಯೋಜನೆಯಡಿ 15 ಅತ್ಯಾಧುನಿಕ ಸಿ.ಸಿ. ಕೆಮರಾ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಪಾಲಿಕೆ ವ್ಯಾಪ್ತಿಯ 15 ಜಂಕ್ಷನ್‌ಗಳಲ್ಲಿ ಅತ್ಯಾಧುನಿಕ ಗುಣಮಟ್ಟದ ಸಿ.ಸಿ. ಕೆಮರಾ ಅಳವಡಿಕೆ ಮಾಡಲಾಗುತ್ತಿದ್ದು, ಕದ್ರಿ ಮಲ್ಲಿಕಟ್ಟೆ ಜಂಕ್ಷನ್‌ನಲ್ಲಿ ಈಗಾಗಲೇ ಅಳವಡಿಸಲಾಗಿದೆ. ಲೇಡಿಹಿಲ್‌ ಜಂಕ್ಷನಲ್ಲಿ ಈ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದಂತೆ ಪಡೀಲ್‌, ಪಂಪ್‌ವೆಲ್‌, ಮಾರ್ಗನ್ಸ್‌ಗೆàಟ್‌, ರಾವ್‌ ಆ್ಯಂಡ್‌ ರಾವ್‌ ವೃತ್ತ, ಪದವಿನಂಗಡಿ, ಕಾವೂರು, ಕೊಟ್ಟಾರಚೌಕಿ, ಲಾಲ್‌ಬಾಗ್‌, ಮಾರ್ನಮಿಕಟ್ಟೆ, ಆ್ಯಗ್ನೆಸ್‌ ಬಳಿ, ಕಂಕನಾಡಿ, ಬೆಂದೂರ್‌, ಕದ್ರಿ ಸಕೀìಟ್‌ಹೌಸ್‌ನಲ್ಲಿ ಕೆಮರಾ ಅಳವಡಿಲು ನಿರ್ಧರಿಸಲಾಗಿದೆ.

Advertisement

ಎ.ಎಂ.ಸಿ.ಗೆ ಪತ್ರ
ಎಲ್ಲ ಸಿ.ಸಿ. ಕೆಮರಾಗಳ ಕಾರ್ಯ ಕ್ಷಮತೆಯನ್ನು ಪರಿಶೀಲಿಸಿ, ದುರಸ್ತಿ ಪಡಿಸುವಂತೆ ಅಥವಾ ಅಗತ್ಯಬಿದ್ದರೆ ಬದಲಾಯಿಸುವಂತೆ ಬೆಂಗ ಳೂರಿನ ಎ.ಎಂ.ಸಿ. (ವಾರ್ಷಿಕ ನಿರ್ವಹಣ ಗುತ್ತಿಗೆದಾರರಿಗೆ) ಗೆ ಪತ್ರ ಬರೆಯಲಾಗಿದೆ. ಅಲ್ಲದೆ ಸ್ಮಾರ್ಟ್‌ ಸಿಟಿ ಯೋಜನೆಯಡಿ ಸಿ.ಸಿ.ಕೆಮರಾ, ಸಿಗ್ನಲ್‌ ಲೈಟ್‌ ಇತ್ಯಾದಿ ಅಳವಡಿಸಲು ಪ್ರತ್ಯೇಕ ಬಜೆಟ್‌ ಇದ್ದು, 900 ಸಿ.ಸಿ. ಕೆಮರಾ ಅಳವಡಿಸುವಂತೆ ಸ್ಮಾರ್ಟ್‌ ಸಿಟಿ ಸಂಸ್ಥೆಗೆ ವರದಿ ಸಲ್ಲಿಸಲಾಗಿದೆ.
– ವಿನಯ್‌ ಎ. ಗಾಂವ್‌ಕರ್‌, ಡಿಸಿಪಿ.

ಆರೋಪಿ ಪತ್ತೆ ಕಾರ್ಯ ವಿಳಂಬ
ಪೊಲೀಸರು ಇದೀಗ ಅಪರಾಧ ಮತ್ತಿತರ ಪತ್ತೆ ಕಾರ್ಯಗಳಿಗಾಗಿ ಖಾಸಗಿಯವರ ಸಿ.ಸಿ. ಕೆಮರಾಗಳನ್ನು ಅವಲಂಬಿಸ ಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ನವೆಂಬರ್‌ನಲ್ಲಿ ಬಿಜೈ ಮತ್ತು ಕೋರ್ಟ್‌ ರಸ್ತೆಯಲ್ಲಿ ಉಗ್ರರನ್ನು ಬೆಂಬಲಿಸಿ ಕಂಡು ಬಂದ ಗೋಡೆ ಬರಹಗಳ ಆರೋಪಿ ಪತ್ತೆ ಕಾರ್ಯ ವಿಳಂಬವಾಗಲು ರಸ್ತೆಯ ಜಂಕ್ಷನ್‌ನಲ್ಲಿರುವ ಸಿ.ಸಿ. ಕೆಮರಾ ಸರಿ ಇಲ್ಲದಿರುವುದೇ ಮುಖ್ಯ ಕಾರಣ. ಬಳಿಕ ಖಾಸಗಿಯವರು ತಮ್ಮ ಮನೆ, ಕಚೇರಿ, ಕಟ್ಟಡಗಳಲ್ಲಿ ಅಳವಡಿಸಿರುವ ಸಿ.ಸಿ. ಕೆಮರಾಗಳಲ್ಲಿ ದಾಖಲಾದ ಚಿತ್ರಣವು ಪೊಲೀಸರಿಗೆ ಪ್ರಕರಣವನ್ನು ಭೇದಿಸುವಲ್ಲಿ ನೆರವಾಗಿತ್ತು ಎನ್ನುವುದು ಇಲ್ಲಿ ಉಲ್ಲೇಖಾರ್ಹ.

Advertisement

Udayavani is now on Telegram. Click here to join our channel and stay updated with the latest news.

Next