ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರದ ಇಬ್ಬರೂ ಅಭ್ಯರ್ಥಿಗಳು ಮತದಾನ ಮಾಡಿದ ಬಳಿಕ ಕೆಲವು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಮತದಾನ ಪ್ರಕ್ರಿಯೆ ಗಮನಿಸಿದರಲ್ಲದೇ, ಮತ ಯಾಚಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಬೆಳಗ್ಗೆ ಕುಟುಂಬ ಸಮೇತರಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ, ಶ್ರೀ ನಾರಾಯಣ ಗುರುಗಳ ಆಶೀರ್ವಾದ ಪಡೆದರು. ಬಳಿಕ ಕಪಿತಾನಿಯೋ ಶಾಲೆಯಲ್ಲಿ ಮತ ಚಲಾಯಿಸಿ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿದರು.
ಹಾಗೆಯೇ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಬೆಳಗ್ಗೆ 7 ಗಂಟೆಗೆ ಕದ್ರಿ ಶ್ರೀ ಮಂಜುನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಬಳಿಕ ಶರವು ಮಹಾಗಣಪತಿ ಕ್ಷೇತ್ರ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನ, ಶ್ರೀ ಮಂಗಳಾದೇವಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ರಥಬೀದಿಯ ಸರಕಾರಿ ಹೆಣ್ಮಕ್ಕಳ ಶಾಲೆಗೆ ತೆರಳಿ ಮತ ಚಲಾಯಿಸಿದರು. ಅನಂತರ ಕಪಿತಾನಿಯೋ ಬೂತ್‌ಗೆ ಭೇಟಿ ನೀಡಿದರು. ಅಪಘಾತಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮತದಾರರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ, ಕಾರ್ಯಕರ್ತರನ್ನು ಭೇಟಿಯಾದರು.
ಮತದಾರರು ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ದೇಶದ ಅಖಂಡತೆಗೆ ನರೇಂದ್ರ ಮೋದಿ ಗ್ಯಾರಂಟಿ. ಅವರನ್ನು ದೇಶದ ಜನತೆ ಮತ್ತೂಮ್ಮೆ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದವರು ಕ್ಯಾ. ಬ್ರಿಜೇಶ್ ಚೌಟ.
ಮತದಾರರು ಹಬ್ಬದಂತೆ ಈ ದಿನವನ್ನು ಆಚರಿಸಿದ್ದಾರೆ. ಮತದಾರರು ನನಗೆ ಆಶೀರ್ವದಿಸಿದ್ದು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದು ಹೇಳಿದವರು ಪದ್ಮರಾಜ್ ಆರ್. ಪೂಜಾರಿ.