Advertisement

ಡಕೋಟಾ ಎಕ್ಸ್‌ಪ್ರೆಸ್‌ ಸಂಚಾರ

11:23 AM Jul 20, 2019 | Suhan S |

ಗಜೇಂದ್ರಗಡ: ಕುಳಿತುಕೊಳ್ಳಲು ಅಸಮರ್ಪಕ ಆಸನ, ಅಲುಗಾಡುವ ಕಿಟಕಿ, ಎಲ್ಲೆಂದರಲ್ಲಿ ಕೆಟ್ಟು ನಿಲ್ಲುವ ವಾಹನ, ಮಳೆ ಬಂದರೆ ಸೋರುವ ಬಸ್‌ ಇದು ಗಜೇಂದ್ರಗಡ ಸಾರಿಗೆ ಘಟಕದ ಡೊಕೋಟಾ ಬಸ್‌ಗಳ ದುಸ್ಥಿತಿ.

Advertisement

ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ‘ಡಕೋಟಾ ಬಸ್‌’ ಓಡುತ್ತಿವೆ. ಸುಧಾರಣೆಗೊಂಡ ರಸ್ತೆಗಳಲ್ಲೂ ಡಕೋಟಾ ಬಸ್‌ಗಳನ್ನೇ ಓಡಿಸುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಗಜೇಂದ್ರಗಡದಿಂದ ಗದಗ ನಗರಕ್ಕೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಾಗಿಯೇ ಸಾರಿಗೆ ಘಟಕವು ಈ ರೂಟ್‌ಗೆ ಹೆಚ್ಚಿನ ಬಸ್‌ ಸೌಕರ್ಯ ಕಲ್ಪಿಸಿದ್ದಾರೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ಬಹುತೇಕ ಬಸ್‌ಗಳ ಸ್ಥಿತಿ ಸರಿಯಿಲ್ಲದಂತಾಗಿದೆ.

ಈ ಬಸ್‌ಗಳ ಸ್ಥಿತಿಯನ್ನು ಕಣ್ಣಾರೆ ನೋಡಲೇಬೇಕು. ದಾರ (ಸೆಣಬು) ಕಟ್ಟಿದ ಬಾಗಿಲು, ಬೇಗನೇ ಚಾಲೂ ಆಗದ ಬಸ್‌, ಗಢ ಗಢ ನಡುಗುವ ಕಿಟಕಿ, ಗಾಜು, ಮೇಲಿನ ಲಗೇಜ್‌ ಸ್ಟ್ಯಾಂಡ್‌, ಹರಿದು ಮುರಿದ ಸೀಟುಗಳು ಈ ಬಸ್‌ಗಳದ್ದಾಗಿವೆ. ಗಜೇಂದ್ರಗಡ ಬಸ್‌ ಡಿಪೋ ಆರಂಭಕ್ಕೂ ಮುನ್ನ ಬೇರೆ ಡೀಪೋದಲ್ಲಿ ಓಡಾಡಿದ ಬಸ್‌ಗಳು ಇನ್ನೂ ಸಂಚರಿಸುತ್ತಿವೆ. ಕಳೆದ 12 ವರ್ಷಕ್ಕೂ ಹಳೆಯ ಡಕೋಟಾ ಬಸ್‌ಗಳ ಸ್ಥಿತಿ ಹೇಳ ತೀರದಾಗಿದೆ. ಗಜೇಂದ್ರಗಡ ಡಿಪೋದಿಂದ 65 ರೂಟ್‌ಗಳಾನ್ನಾಗಿ ಮಾಡಿ 70 ಬಸ್‌ಗಳನ್ನು ಸಂಚಾರಕ್ಕೆ ಬಿಡಲಾಗಿದೆ. ನಿತ್ಯ 5ರಿಂದ 6 ಲಕ್ಷ ಆದಾಯ ಘಟಕಕ್ಕೆ ಬರುತ್ತದೆ.

ಬಸ್‌ ಬದಲಾವಣೆಯಲ್ಲಿ ಡಿಪೋ ಅಧಿಕಾರಿಗಳು ನಿಯಮ ಪಾಲನೆ ಮಾಡುತ್ತಿಲ್ಲ. ಸುಮಾರು 6-8 ಬಸ್ಸುಗಳು ಹಳೆಯದ್ದೇ ಇವೆ. ಯರಗೇರಿ, ಕುಂಬಳಾವತಿ, ಜಿಗೇರಿ, ಗುಡೂರ, ಅಮೀನಗಡ, ಹನಮನಾಳ ಅಲ್ಲದೇ ಗದಗ ನಗರಕ್ಕೆ ತೆರಳುವ ಬಹುತೇಕ ಬಸ್ಸುಗಳ ಸ್ಥಿತಿ ಹೇಳ ತೀರಾಗಿದೆ. ಬಸ್ಸುಗಳು ಕೆಲವು ಸಲ ಕೆಟ್ಟು ನಿಂತಾಗ ಪ್ರಯಾಣಿಕರೇ ಇಳಿದು ಬಸ್‌ನ್ನು ತಳ್ಳಿ ಎಂಜಿನ್‌ ಆರಂಭಿಸಿದ ಉದಾಹರಣೆಗಳು ಇವೆ.

Advertisement

ಹಳೇ ಬಸ್‌ ಓಡಿಸಿದರೆ ಬಡ್ತಿ!:ಹಳೆಯದಾದ ಗರಿಷ್ಠ ಕಿ.ಮೀ ಓಡಿಸಿದ ಬಸ್‌ಗಳನ್ನು ಬಳಸಿದ ಡಿಪೋ ಅಧಿಕಾರಿಗಳಿಗೆ ಇಲಾಖೆ ಉತ್ತಮ ಅಧಿಕಾರಿಯೆಂದು ಪ್ರಮೋಶನ್‌ ನೀಡುತ್ತದೆ. ಹೀಗಾಗಿ ಅಧಿಕಾರಿಗಳು ಹಳೆ ಬಸ್ಸುಗಳನ್ನು ತೆಗೆಯುವುದಿಲ್ಲ. ಬದಲಾಗಿ ಹೊಸ ಬಸ್ಸುಗಳನ್ನು ತರಿಸಿದರೆ ಮೇಲಾಧಿಕಾರಿಗಳು ಆ ಬಸ್‌ಗಳ ಗರಿಷ್ಠ ಆದಾಯ ನಿರೀಕ್ಷಿಸುತ್ತಾರೆ. ಇದು ಅಧಿಕಾರಿಗಳಿಗೆ ತಲೆನೋವಾಗುವುದರಿಂದ ಕೆಲ ಅಧಿಕಾರಿಗಳು ಹೊಸ ಬಸ್‌ ತರಿಸುವ ಸಾಹಸಕ್ಕೆ ಕೈ ಹಾಕುವುದಿಲ್ಲ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಹಿರಿಯ ಬಸ್‌ ಚಾಲಕರೊಬ್ಬರು.

ದುರಸ್ತಿಗೊಂಡ 10 ಬಸ್‌ಗಳನ್ನು ಕಳೆದ ತಿಂಗಳು ಗುಜರಿಗೆ ಕಳುಹಿಸಲಾಗಿದೆ. ಎಲ್ಲ ಮಾರ್ಗಗಳಿಗೆ ಉತ್ತಮ ಬಸ್‌ಗಳನ್ನು ಬಿಡಲಾಗಿದೆ. ಜೊತೆಗೆ ಈಚೆಗೆ ಎರಡು ಹೊಸ ಬಸ್‌ಗಳನ್ನು ಸಹ ರಸ್ತೆಗಿಳಿಸಲಾಗಿದೆ. ಕೆಲವೊಂದು ಬಸ್‌ಗಳಲ್ಲಿ ಅಲ್ಪಸ್ವಲ್ಪ ದುರಸ್ತಿಗಳಿರಬಹುದು. ಅವುಗಳನ್ನು ಸರಿಪಡಿಸಲಾಗುತ್ತದೆ.•ರಾಜಶೇಖರ ಮಸ್ಕಿ, ಗಜೇಂದ್ರಗಡ ವಾಕರ ಸಾರಿಗೆ ಘಟಕ ವ್ಯವಸ್ಥಾಪಕ

ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟು ಮಾಡುವ ಡಕೋಟ್ ಬಸ್‌ಗಳನ್ನು ರಸ್ತೆಗಿಳಿಸುವ ಮೂಲಕ ಸಾರಿಗೆ ಘಟಕ ಅಧಿಕಾರಿಗಳು ಪ್ರಯಾಣಿಕರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಕೂಡಲೇ ಡಕೋಟಾ ಬಸ್‌ಗಳನ್ನು ತೆಗೆದು ಉತ್ತಮ ಬಸ್‌ಗಳನ್ನು ಓಡಾಟಕ್ಕೆ ಬಿಡದಿದ್ದರೆ ಸಂಘಟನೆ ವತಿಯಿಂದ ಬಸ್‌ ನಿಲ್ದಾಣ ಮುಂದೆ ಉಗ್ರ ಪ್ರತಿಭಟನೆ ಮಾಡಲಾಗುವುದು.•ರಾಜು ಸಾಂಗ್ಲಿಕಾರ, ಕಜವೇ ರಾಜ್ಯ ಸಂಚಾಲಕ

ಗಜೇಂದ್ರಗಡ ಸಾರಿಗೆ ಘಟಕ ಜಿಲ್ಲೆಯಲ್ಲಿ ಅತಿಹೆಚ್ಚು ಆದಾಯ ತರುವ ಕೇಂದ್ರವಾದರೂ ಹೊಸ ಬಸ್‌ಗಳನ್ನು ಜನಸೇವೆಗೆ ನೀಡದೇ ಗುಜರಿ ಸೇರಬೇಕಾದ ಬಸ್‌ಗಳನ್ನು ಓಡಾಟಕ್ಕೆ ಬಿಟ್ಟಿರುವುದು ಖಂಡನೀಯ. ಜೊತೆಗೆ ಬಸ್‌ ನಿಲ್ದಾಣದಲ್ಲಿ ದ್ವೀಚಕ್ರ ವಾಹನ ನಿಲುಗಡೆಗೆ ಸರಿಯಾದ ಪಾರ್ಕೀಗ್‌ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು.•ಸಿ.ಎಸ್‌. ವಾಲಿ, ಸ್ಥಳೀಯ

Advertisement

Udayavani is now on Telegram. Click here to join our channel and stay updated with the latest news.

Next