Advertisement

ಸರಕಾರದ ನೆರವಿನ ನಿರೀಕ್ಷೆಯಲ್ಲಿ ಹೈನುಗಾರರು

11:57 PM May 31, 2023 | Team Udayavani |

ಆರೋಗ್ಯಕ್ಕೆ ಪರ್ಯಾಯ ವ್ಯವಸ್ಥೆ ಸಾಧ್ಯವಿಲ್ಲ; ಶುದ್ಧ ಆಹಾರ ಸೇವನೆಯಿಂದ ಮಾತ್ರ ಆರೋಗ್ಯವನ್ನು ಕಾಪಾಡಿ ವೃದ್ಧಿಸಿಕೊಳ್ಳಲು ಸಾಧ್ಯ. ಇದನ್ನು ನೈಸರ್ಗಿಕವಾದ ಆಹಾರ ಪದಾರ್ಥಗಳ ಸೇವನೆಯಿಂದ ಪಡೆಯಬಹುದು. ಸ್ವಾಭಾವಿಕ ಪೌಷ್ಠಿಕ ಆಹಾರವಾಗಿರುವ ಹಾಲು ಮಾನವನ ಪಾಲಿಗೆ ಆರೋಗ್ಯಕರವಾದ ಸಾರ್ವಕಾಲಿಕ ಆಹಾರ.

Advertisement

ಹಾಲು ಆರೋಗ್ಯಕ್ಕೆ ಅತ್ಯುತ್ತಮ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹಾಲು ಸೇರಿರುವುದು ಅತ್ಯವಶ್ಯಕ. ಹಾಲಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ವಿವಿಧ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ. ಹಾಲಿನಲ್ಲಿ ಕ್ಯಾಲಿಯಂ ವಿಟಮಿನ್‌, ಅ, ಆ, ಉ ಇತ್ಯಾದಿ ಪೋಷಕಾಂಶಗಳಿದ್ದು ನಿಯಮಿತ ಹಾಲಿನ ಸೇವನೆಯಿಂದ ಮೂಳೆ, ಹಲ್ಲುಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಹಾಲು ಸೇವನೆ ಸಹಕಾರಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಾಲು ಸೇವನೆ ಆರೋಗ್ಯಕರ. ಇವೆಲ್ಲದರ ಹಿನ್ನೆಲೆಯಲ್ಲಿ ಹಾಲಿನ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತೀ ವರ್ಷ ಜೂನ್‌ 1ರಂದು “ವಿಶ್ವ ಹಾಲಿನ ದಿನ’ ವನ್ನು ಆಚರಿಸಲಾಗುತ್ತದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2001ರಿಂದ ಈ ದಿನವನ್ನು ವಿಶ್ವ ಕ್ಷೀರ ದಿನವನ್ನಾಗಿ ಆಚರಿಸಲು ಆರಂಭಿಸಿತು. ಜಗತ್ತಿನೆಲ್ಲೆಡೆ ಆರೋಗ್ಯಕರ ಆಹಾರವಾದ ಹಾಲಿನ ಮಹತ್ವದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಡೇರಿ ಉದ್ಯಮವನ್ನು ಉತ್ತೇಜಿಸಲು ವಿಶ್ವ ಕ್ಷೀರ ದಿನವನ್ನು ಆಚರಿಸುತ್ತ ಬರಲಾಗಿದೆ. ಪ್ರಪಂಚದಾದ್ಯಂತ ಸುಮಾರು ಒಂದು ಶತಕೋಟಿಗಿಂತಲೂ ಹೆಚ್ಚು ಜನರಿಗೆ ಹೈನುಗಾರಿಕೆ ಆದಾಯದ ಮೂಲವಾಗಿದೆ. ವಿಶ್ವ ಹಾಲು ದಿನದ ಪ್ರಾಥಮಿಕ ಗುರಿ ನಮ್ಮ ಜೀವನದಲ್ಲಿ ಹಾಲು ಮತ್ತು ಡೇರಿ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸಿ ಉಪಕಸುಬಾದ ಹೈನುಗಾರಿಕೆಯನ್ನು ಉದ್ಯಮವನ್ನಾಗಿ ಮಾಡುವುದಾಗಿದೆ.

1947ರಲ್ಲಿ ದೇಶ ಸ್ವಾತಂತ್ರ್ಯಗೊಂಡಾಗ ನಮ್ಮ ಜನತೆಗೆ ಅವಶ್ಯವಾದಷ್ಟು ಆಹಾರ ಧಾನ್ಯಗಳನ್ನು ದೇಶದಲ್ಲಿ ಬೆಳೆಯಲಾಗುತ್ತಿರಲಿಲ್ಲ. ಇದನ್ನು ನಿವಾರಿಸಲು ಬೃಹತ್‌ ಕೃಷಿ ಕ್ಷೇತ್ರಗಳ ಬಳಕೆ, ಆಧುನಿಕ ಯಂತ್ರೋಪಕರಣಗಳು, ರಸಗೊಬ್ಬರ, ಹೈಬ್ರಿಡ್‌ ತಳಿಗಳು ಇತ್ಯಾದಿಗಳನ್ನು ಬಳಸಿ ಹಸುರು ಕ್ರಾಂತಿ ನಡೆಸಲು ಜನರನ್ನು ಉತ್ತೇಜಿಸಲಾಯಿತು. 70ರ ದಶಕದಲ್ಲಿ ಇದಕ್ಕೆ ವೇಗ ದೊರೆತು, ಭಾರತ ಆಹಾರ ಧಾನ್ಯಗಳ ವಿಚಾರದಲ್ಲಿ ಸ್ವಾವಲಂಬಿಯಾಯಿತು. ಇದೇ ಆವಧಿಯಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಜತೆಯಲ್ಲಿ ಜನರನ್ನು ಸ್ವಾವಲಂಬಿಗಳನ್ನಾಗಿಸಲು ಕ್ಷೀರ ಕ್ರಾಂತಿ ಅರ್ಥಾತ್‌ ಹಾಲಿನ ಕ್ರಾಂತಿಯೂ ನಡೆಯಿತು. ಹಸುರು ಕ್ರಾಂತಿಯ ಮುಂಚೂಣಿಯಲ್ಲಿ ಡಾ| ಸ್ವಾಮಿನಾಥನ್‌ ಇದ್ದರೆ, ಕ್ಷೀರ ಕ್ರಾಂತಿಯ ಮುನ್ನೆಲೆಯಲ್ಲಿ ಡಾ| ವರ್ಗೀಸ್‌ ಕುರಿಯನ್‌ ಇದ್ದರು.

ಇಂದು ಭಾರತ ಹಾಲಿನ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ ಗಮ ನಾರ್ಹ ಸಾಧನೆ ಮಾಡಿದೆ. ಗ್ರಾಮೀಣ ಅರ್ಥಿಕತೆಯಲ್ಲಿ ಎರಡು ಬೆನ್ನೆಲುಬುಗಳಲ್ಲಿ ಒಂದು ಕೃಷಿ ಆಗಿದ್ದರೆ, ಇನ್ನೊಂದು ಹೈನುಗಾರಿಕೆ ಆಗಿದೆ. ಹಸು, ಎಮ್ಮೆಗಳು ಹಾಲಿನ ಜತೆಗೆ ಉಪಉತ್ಪನ್ನಗಳನ್ನು ನೀಡಿ ತಲೆತಲಾಂತರಗಳಿಂದ ಕೃಷಿ ಕ್ಷೇತ್ರ ಮತ್ತು ಮಾನವ ಆರೋಗ್ಯವನ್ನು ಪೊರೆದಿವೆ. ಹೈನುಗಾರಿಕೆ ನಮಗೆ ಕೇವಲ ಉದ್ಯೋಗವಷ್ಟೇ ಅಲ್ಲದೆ ಜೀವನಶೈಲಿಯೂ ಆಗಿದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ತಮ್ಮ ದನಕರುಗಳನ್ನು ದೇವರೆಂದೇ ಭಾವಿಸುತ್ತಾರೆ. ದೇಶದ ಶೇ. 25ರಷ್ಟು ಗ್ರಾಮೀಣ ಮಹಿಳೆಯರು ಹೈನುಗಾರಿಕೆಯಿಂದ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.
ಪ್ರಸ್ತುತ ದೇಶದ 27 ರಾಜ್ಯಗಳಲ್ಲಿ ಹೈನು ಮಹಾ ಮಂಡಲಗಳು, ಸರಿಸುಮಾರು 1,77,000ಕ್ಕಿಂತಲೂ ಹೆಚ್ಚು ಹಾಲು ಉತ್ಪಾದಕ ಸಂಘಗಳಿದ್ದು ಅಂದಾಜು 2 ಕೋಟಿಯಷ್ಟು ಹಾಲು ಉತ್ಪಾದಕರಿದ್ದಾರೆ.

Advertisement

ರಾಷ್ಟ್ರದಲ್ಲಿ 2ನೇ ಅತೀ ದೊಡ್ಡ ಹಾಲು ಒಕ್ಕೂಟವಾಗಿ ಕರ್ನಾಟಕ ಹಾಲು ಮಹಾಮಂಡಳ ಮೂಡಿಬಂದಿದ್ದು, ಅದರ ಆಶ್ರಯದಲ್ಲಿ 16 ಒಕ್ಕೂಟಗಳು ಕಾರ್ಯಾಚರಿಸುತ್ತಿದ್ದು, ಸರಿಸುಮಾರು 15,000 ಹಾ. ಉ. ಸಹಕಾರಿ ಸಂಘಗಳ ಮೂಲಕ 25.85 ಲಕ್ಷ ಉತ್ಪಾದಕ ಸದಸ್ಯರಿಂದ ಪ್ರತಿನಿತ್ಯ ಅಂದಾಜು 90 ಲಕ್ಷ ಲೀ. ಹಾಲು ಶೇಖರಣೆಗೊಂಡು 25 ಕೋಟಿ ರೂ. ಗಿಂತಲೂ ಹೆಚ್ಚಿನ ಹಣವನ್ನು ಪ್ರತಿನಿತ್ಯ ರೈತರಿಗೆ ಬಟವಾಡೆ ಮಾಡಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಹಾಲು ಉತ್ಪಾದನೆಯ ವೆಚ್ಚ ಒಂದೇ ಸಮನೆ ಹೆಚ್ಚುತ್ತಿದೆ. ಆದರೆ ಹೈನುಗಾರರಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ ಲಭಿಸುತ್ತಿಲ್ಲ. ಪಶುಪಾಲನೆ ಈಗ ವೆಚ್ಚದಾಯಕವಾಗಿದ್ದು, ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಹೈನುಗಾರರು ಪೂರೈಸುವ ಹಾಲಿಗೆ ಸೂಕ್ತ ಧಾರಣೆ ಲಭಿಸಿದಲ್ಲಿ ಮಾತ್ರವೇ ಅವರು ನೆಮ್ಮದಿಯ ಮತ್ತು ಸ್ವಾವಲಂಬನೆಯ ಬದುಕನ್ನು ಕಾಣಲು ಸಾಧ್ಯ. ರೈತರಿಂದ ಖರೀದಿಸುತ್ತಿರುವ ಹಾಲಿಗೆ ನೀಡಲಾಗುತ್ತಿರುವ ಬೆಲೆಯಲ್ಲಿ ಹೆಚ್ಚಳ ಮಾಡದೇ ಹೋದಲ್ಲಿ ಮುಂದಿನ 6 ತಿಂಗಳಿನಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿದು ಕ್ಷೀರಕ್ಷಾಮ ತಲೆದೋರುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲದೆ ರೈತರು ಹೈನುಗಾರಿಕೆಯಿಂದ ಸಂಪೂರ್ಣವಾಗಿ ವಿಮುಖರಾಗುವ ಭೀತಿ ಇದೆ. ಹೀಗಾದದ್ದೇ ಆದಲ್ಲಿ ಕೃಷಿ ಕ್ಷೇತ್ರದ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಬೇಸಾಯ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ಹೈನುಗಾರರ ಸಂಕಷ್ಟವನ್ನು ಸರಕಾರ ಇನ್ನಾದರೂ ಅರ್ಥೈಸಿಕೊಂಡು, ಸಮಸ್ಯೆಯ ಗಂಭೀರತೆಯನ್ನು ಅರಿತು ಬೆಲೆ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಮುಂದೊಂದು ದಿನ “ಮಿಲ್ಕ್ ಮ್ಯಾನ್‌ ಆಫ್ ಇಂಡಿಯಾ” ಖ್ಯಾತಿಯ ವರ್ಗೀಸ್‌ ಕುರಿಯನ್‌ ದೇಶದಲ್ಲಿ “ಕ್ಷೀರ ಕ್ರಾಂತಿ’ಗೆ ಬರೆದ ಮುನ್ನುಡಿಗೆ ತಿಲಾಂಜಲಿ ನೀಡುವ ಸಂದರ್ಭ ಬಂದರೆ ಅಚ್ಚರಿ ಇಲ್ಲ.

ಕನ್ನಾರು ಕಮಲಾಕ್ಷ ಹೆಬ್ಟಾರ್‌

Advertisement

Udayavani is now on Telegram. Click here to join our channel and stay updated with the latest news.

Next