ವಿಜಯಪುರ: ಹಾಲು ಪ್ರತಿಯೊಬ್ಬರಿಗೂ ಪೌಷ್ಠಿಕ ಆಹಾರ. ಪುಟ್ಟ ಕಂದಮ್ಮಗಳಿಂದ ಮೊದಲುಗೊಂಡು ವೃದ್ಧರವರೆಗೂ ಒಂದು ಪುಷ್ಠಿಕ ಆಹಾರ. ವ್ಯಕ್ತಿಯ ಜೀವನದಲ್ಲಿ ಪ್ರಧಾನ ಆಹಾರ ಎಂದರೂ ತಪ್ಪಿಲ್ಲ. ವಿಶ್ವದ ಅತಿದೊಡ್ಡ ಹಾಲು ಉತ್ಪಾದಕರಲ್ಲಿ ಭಾರತ ದೇಶವೂ ಒಂದು.
ಈ ವರ್ಷ ಅಂದರೆ 2021ರ ವಿಶ್ವ ಹಾಲು ದಿನಾಚರಣೆಯ ವಿಷಯ “ಡೇರಿ ಕ್ಷೇತ್ರದಲ್ಲಿ ಸುಸ್ಥಿರತೆ ಮತ್ತು ಪರಿಸರ, ಪೋಷಣೆ ಮತ್ತು ಸಾಮಾಜಿಕ-ಆರ್ಥಿಕತೆಯನ್ನು ಸಬಲೀಕರಣಗೊಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಡೇರಿ ಕೃಷಿಯನ್ನು ಜಗತ್ತಿಗೆ ಪುನಃ ಪರಿಚಯಿಸುವ ಉದ್ದೇಶ ಹೊಂದಿದೆ.
ಹೈನುಗಾರಿಕೆಗೆ ಹೆಚ್ಚು ಮಹತ್ವ: ಗ್ರಾಮೀಣ ಭಾಗಗಳಲ್ಲಿ ಹೈನುಗಾರಿಕೆಗೆ ಹೆಚ್ಚು ಮಹತ್ವವಿದೆ. ವ್ಯಾಪಾರ, ವ್ಯವಹಾರವನ್ನು ಹೊರತುಪಡಿಸಿ, ಹಳ್ಳಿಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಹಸುವನ್ನು ಸಾಕುವ ಪರಿಪಾಠವಿದೆ. ತಮ್ಮ ಕುಟುಂಬದ ಸದಸ್ಯನಾಗಿ, ಮನೆ ಮಕ್ಕಳಿಗೆ ಹಾಲು ನೀಡುವ ಎರಡನೇ ತಾಯಿಯಾಗಿ ಹಸುವಿಗೆ ಮಹತ್ವ ನೀಡಲಾಗುತ್ತದೆ. ಹಾಲು, ಮೊಸರು, ಬೆಣ್ಣೆ, ತುಪ್ಪ, ಗಂಜಲ, ಸಗಣಿ ಹೀಗೆ ಹಸುವಿನಿಂದ ಸಿಗುವ ಎಲ್ಲವೂ ಮನುಷ್ಯನಿಗೆ ಪ್ರಯೋಜನಕಾರಿ. ಆದ್ದರಿಂದ ಸಾಧುಪ್ರಾಣಿಯಾದ ಗೋವು ಹಿಂದೂಗಳಿಗೆ ಪೂಜನೀಯ.
ಸಂಕಷ್ಟಕ್ಕೆ ಗುರಿಯಾಗಿಲ್ಲ: ಪಟ್ಟಣ ಸಮೀಪದ ಧರ್ಮಪುರದ ನಿವಾಸಿ ಆನಂದಮೂರ್ತಿ ಅವರ ಮನೆಯಲ್ಲಿ 5-6 ಸೀಮೆ ಹಸುಗಳನ್ನು ಸಾಕಿದ್ದಾರೆ. ಅವರ ಪತ್ನಿ, ಮಕ್ಕಳು ಎಲ್ಲರೂ ಗೋಮಾತೆಯ ಸೇವೆ ಮಾಡುತ್ತಿದ್ದಾರೆ. ಅವರ ಕುಟುಂಬದ ಮುಖ್ಯ ಆದಾಯ ಹೈನುಗಾರಿಕೆಯಿಂದಲೇ ಬರುತ್ತದೆ. ಕೊರೊನಾ, ಲಾಕ್‌ಡೌನ್ ಸಂದರ್ಭದಲ್ಲಿಯೂ ರೈತನ ಕೈಹಿಡಿದಿದ್ದು ಹೈನುಗಾರಿಕೆ. ಹಸುಗಳನ್ನು ಸಾಕಿದ ಯಾವ ರೈತರು ಕಂಗಾಲಾಗಲಿಲ್ಲ, ಕೆಲಸ ಕಳೆದುಕೊಳ್ಳಲಿಲ್ಲ, ಸಂಕಷ್ಟಕ್ಕೆ ಗುರಿಯಾಗಲಿಲ್ಲ.
ಕೊಟ್ಟಿಗೆಯಲ್ಲಿ ಫ್ಯಾನ್ ವ್ಯವಸ್ಥೆ: ಆನಂದಮೂರ್ತಿಯವರ ಮನೆಯ ಕೊಟ್ಟಿಗೆ ಮನೆ ಅಂಗಳದಷ್ಟೇ ಸ್ವತ್ಛವಾಗಿದೆ. ಹಸುಗಳಿಗೆ ಸೊಳ್ಳೆ, ನೊಣಗಳ ಕಾಟ ಇರಬಾರದು ಎಂದು ಕೊಟ್ಟಿಗೆಯಲ್ಲಿ ಫ್ಯಾನ್ ವ್ಯವಸ್ಥೆ ಮಾಡಲಾಗಿದೆ. ಹಸುಗಳಿಗೆ ನೀಡುವ ಬೂಸ, ಮೇವು ಅಚ್ಚುಕಟ್ಟಾಗಿದೆ. ಹಸುಗಳ ಮೈ ಸದಾ ಸ್ವತ್ಛವಾಗಿರುವಂತೆ ಕಾಪಾಡಿಕೊಳ್ಳಲಾಗಿದೆ. ಸಾಕಿದ ಹಸುಗಳಲ್ಲಿ ಪ್ರಧಾನವಾದ ಹಸು ಗೌರಿ. ಮನೆಯ ಮಕ್ಕಳಿಗಿಂತ ಹೆಚ್ಚಾಗಿ ಅಕ್ಕರೆಯಿಂದ ನೋಡಿಕೊಳ್ಳುವ ಮಾಲೀಕರನ್ನು ತಾನು ಪ್ರೀತಿಸುವುದಾಗಿ ಗೌರಿ ಮೌನವಾಗಿಯೇ ಹೇಳಿಕೊಳ್ಳುತ್ತಾಳೆ.
ಮನುಷ್ಯ-ಪ್ರಾಣಿ ಎಂಬ ಭೇದವಿಲ್ಲ: ಇನ್ನು ಗರ್ಭ ಧರಿಸಿದ ಹಸುವಿಗೆ ಎಲ್ಲಿಲ್ಲದ ಆರೈಕೆ, ಹುಟ್ಟಿದ ಕ ರುವಿಗೆ ತೋರುವ ಅದಮ್ಯ ಪ್ರೀತಿ ಮನುಷ್ಯ-ಪ್ರಾಣಿ ಎಂಬ ಭೇಧವಿಲ್ಲ. ಎಲ್ಲರೂ ಒಟ್ಟು ಕುಟುಂಬ ಸದಸ್ಯರಂತೆ ಕಂಡುಬರುತ್ತಾರೆ. ಮನೆಯ ಮಕ್ಕಳಿಗೆ ಬೇರೆ ಸ್ನೇಹಿತರೇ ಬೇಕಿಲ್ಲ. ಶಾಲೆಯಿಂದ ಬಂದ ಕೂಡಲೇ ಮಕ್ಕಳು ಹಸುವಿನ ಮೈದಡವಿ, ಕರುವನ್ನು ಮುದ್ದಿಸಿಯೇ ಮನೆಯೊಳಗೆ ಕಾಲಿಡುತ್ತಾರೆ. ಆಟ ಆಡುತ್ತಾ, ಹಸುವಿನ ಪಾಲನೆ ಪೋಷಣೆಯಲ್ಲಿ ಪೋಷಕರ ಜೊತೆ ತಾವು ತೊಡಗಿಕೊಳ್ಳುತ್ತಾರೆ. ಹಸು ಅಂಬಾ ಎಂದು ಕರೆದರೆ ಮನೆಯವರು ಏನೆಂದು ಬಂದು ಕೇಳುವ ಪರಿ ಅಪ್ಯಾಯಮಾನವಾಗಿದೆ.
ಕಾಳಜಿ ವಹಿಸಿ ಗೋಮಾತೆ ಸೇವೆ: ನೂರಾರು ಹಸುಗಳನ್ನು ಒಂದೇ ಸೂರಿನಡಿ ಸಾಕುವ ಅದೆಷ್ಟೋ ಶೆಡ್‌ಗಳು ಕಾಣಸಿಗುತ್ತವೆ. ಆದರೆ, ಮನೆಯಲ್ಲಿ ತಮ್ಮೊಂದಿಗೆ ಐದಾರು ಹಸುಗಳನ್ನು ಸಾಕುವ, ಮುದ್ದಿಸುವ, ಮನೆಯ ಲಕ್ಷ್ಮೀ ಎಂದು ಪೂಜಿಸುವ, ತಮ್ಮ ಮಕ್ಕಳಿಗೂ ಹೈನುಗಾರಿಕೆ, ಹಸುಗಳ ಪಾಲನೆ ಪೋಷಣೆ ಕಲಿಸುವ ಕುಟುಂಬಗಳು ನಿಜಕ್ಕೂ ಅಪರೂಪ. ಅಂತಹ ಆನಂದಮೂರ್ತಿಯವರ ಕುಟುಂಬ ಅವರ ಪತ್ನಿ ಕಾಂತಮ್ಮ, ಮಕ್ಕಳಾದ ಕುಸುಮ, ಪುನೀತ್ ಕುಮಾರ್, ತಮ್ಮ ರಾಜಣ್ಣ, ನಾದಿನಿ ಮಂಜಮ್ಮ ಮಕ್ಕಳಾದ ಚೇತನ್, ತೇಜಸ್ವಿನಿ ಇವರೆಲ್ಲರೂ ಕಾಳಜಿ ವಹಿಸಿ ಗೋಮಾತೆಯ ಸೇವೆಯಲ್ಲಿ ನಿರತರಾಗಿದ್ದಾರೆ.
ಎಷ್ಟೇಕಷ್ಟ ಬಂದರೂ ಗೋಮಾತೆಯನ್ನು ಮಾರುವುದಿಲ್ಲ. ಕೊರೊನಾ ಸಂದರ್ಭದಲ್ಲಿ ನಮ್ಮ ಕುಟುಂಬವನ್ನು ಸಾಕುತ್ತಿರುವ ಲಕ್ಷ್ಮೀ ಎಂಬ ಗೋವಿನಿಂದ ಒಂದು ಬಾರಿಗೆ 25 ಲೀಟರ್ ಹಾಲು ಸಿಗುತ್ತದೆ. ಗೋವುಗಳ ಪೋಷಣೆಯಲ್ಲಿಯಾವುದೇಕೊರತೆ ಬಾರದಂತೆ ನೋಡಿಕೊಳ್ಳುತ್ತೇವೆ.
● ಆನಂದಮೂರ್ತಿ, ಎಂಪಿಸಿಎಸ್ ಅಧ್ಯಕ್ಷ, ಧರ್ಮಪುರ
-ಅಕ್ಷಯ್.ವಿ ವಿಜಯಪುರ