ರಾಣಿಬೆನ್ನೂರ: ರೈತರ ಆದಾಯ ಹೆಚ್ಚಿಸಲು ಹೈನುಗಾರಿಕೆ ಆಧಾರಿತ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಲ್ಲಿ ಬೆಳೆಗಳಿಗೆ ಉತ್ತಮ ಸಾವಯವ ಗೊಬ್ಬರ ಪಡೆಯಲು ಸಾಧ್ಯವಾಗುತ್ತದೆ ಎಂದು ಹಿರಿಯ ವಿಜ್ಞಾನಿ ಹಾಗೂ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಅಶೋಕ ಪಿ. ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಹೈನುಗಾರಿಕೆ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹೈನುಗಾರಿಕೆಯಲ್ಲಿ ರೈತರು ವೈಜ್ಞಾನಿಕ ಪದ್ಧತಿ ಮತ್ತು ಹೊಸದಾಗಿ ಬಂದ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ತಮ್ಮ ಹೈನು ರಾಸುಗಳಿಂದ ಹೆಚ್ಚಿನ ಹಾಲಿನ ಇಳುವರಿಯೊಂದಿಗೆ, ಅವುಗಳ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಹೆಚ್ಚಿನ ಆದಾಯ ಪಡೆಯಬಹುದು ಎಂದು ತಿಳಿಸಿದರು.
ಪಶು ವಿಜ್ಞಾನಿ ಡಾ|ಮಹೇಶ ಕಡಗಿ ಮಾತನಾಡಿ, ನಮ್ಮ ದೇಶಿಯ ಹಾಲಿನ ತಳಿಗಳಾದ ಗಿರ್, ಸಾಯಿವಾಲ್ ಮತ್ತು ಕೆಂಪು ಸಿಂ ಆಕಳುಗಳಿಂದ ಉತ್ತಮ ಹಾಲನ್ನು ಪ್ರತಿ ಸೂಲಿಗೆ 1500 ರಿಂದ 2000 ಕೆಜಿ ವರೆಗೆ ಪಡೆಯಬಹುದು. ಮಿಶ್ರ ತಳಿ ಹಸುಗಳಾದ ಎಚ್‌ಎಫ್ ಮಿಶ್ರ ತಳಿ ಮತ್ತು ಜರ್ಸಿ ಮಿಶ್ರ ತಳಿ ಆಕಳುಗಳಿಂದ ಪ್ರತಿ ಸೂಲಿಗೆ 3000 ದಿಂದ 5000 ಕೆಜಿ ವರೆಗೆ ಹಾಲು ಪಡೆಯಬಹುದು ಎಂದರು.
ಎಮ್ಮೆಯ ಉತ್ತಮ ಹಾಲಿನ ತಳಿಗಳಾದ ಮುರ್ರಾ, ಸ್ಫೂರ್ತಿ, ಜಫರ್ ಬಾದಿ ಎಮ್ಮೆಗಳಿಂದ ಸುಮಾರು ಪ್ರತಿ ಸೂಲಿಗೆ 2000 ಕೆಜಿ ವರೆಗೆ ಹಾಲು ಪಡೆಯಬಹುದು. ಉತ್ತಮ ಹೈನು ತಳಗಳನ್ನು ಆಯ್ಕೆ ಮಾಡುವಾಗ ಅವುಗಳ ಉತ್ತಮ ಹಾಲು ನೀಡುವ ಗುಣಲಕ್ಷಣಗಳಾದ ಮೃದು ಚರ್ಮ, ಹೊಳೆಯುವ ಕಣ್ಣುಗಳು, ಅಗಲ ಹಣೆ, ಸದೃಢ ಮುಂಗಾಲು ಮತ್ತು ಹಿಂಗಾಲುಗಳು, ಕೆಚ್ಚಲು ಮೇಲಿನ ಹಾಲಿನ ನರಗಳು, ಸಮಾನಾಂತರ ಮೊಲೆ ತೊಟ್ಟುಗಳು ಮತ್ತು ಸರಾಸರಿ 3 ಹೊತ್ತಿನ ಹಾಲಿನ ಇಳುವರಿ ನೋಡಬೇಕಾಗುತ್ತದೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಡಾ| ಕಲ್ಲೂಳಗಿ ಮಾತನಾಡಿ, ಹೈನುಗಾರಿಕೆಯಲ್ಲಿ ಏಕ ವಾರ್ಷಿಕ ಮತ್ತು ಬಹು ವಾರ್ಷಿಕ, ಏಕದಳ ಮತ್ತು ದ್ವಿದಳ ಮೇವಿನ ಬೆಳೆಗಳು, ಮೇವಿನ ಸಂರಕ್ಷಣೆ, ಮೇವಿನ ಪೌಷ್ಟಿಕರಣ ಮತ್ತು ರಸ ಮೇವು ತಯಾರಿಸುವ ವಿಧಾನ ತಿಳಿಸಿದರು. ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ| ಪರಮೇಶ ಹುಬ್ಬಳ್ಳಿ, ಡಾ| ನರೇಂದ್ರ ಚೌಡಾಳ, ಡಾ| ಎಂ. ಬಿ. ಅಂಗಡಿ ಮತ್ತು ರೈತರು ಇದ್ದರು. ನಂತರ ರೈತರಿಗೆ ಕೇಂದ್ರದ ಹೈನುಗಾರಿಕಾ ಘಟಕ, ಅಝೋಲಾ ಘಟಕ, ಮೇವಿನ ತಾಕು ಮತ್ತು ಎರೆಹುಳು ಗೊಬ್ಬರ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು.