ಚುನಾವಣೆ ಬಂತೆಂದರೆ ರಾಜಕಾರಣಿಗಳಿಗೆ ನಿಜಕ್ಕೂ ಅಗ್ನಿ ಪರೀಕ್ಷೆ. ಅದರಲ್ಲೂ ಯಾವುದಾದರೂ ವಿವಾದಕ್ಕೆ ಸಿಲುಕಿಕೊಂಡೋ, ಹಗರಣದಲ್ಲಿ ಸಿಕ್ಕಿ ಬಿಧ್ದೋ, ಸಿ.ಡಿ-ಗೀಡಿ ಗಲಾಟೆಯಲ್ಲಿ ಹೆಸರು ಕೇಳಿಬಂದರಂತೂ ಡಬ್ಬಲ್ ಅಗ್ನಿ ಪರೀಕ್ಷೆ. ಅಂದರೆ ಹಿಂದಿ ಸಿಂಗಂ ಸಿನಿಮಾದಲ್ಲಿ ಒಂದು ಡೈಲಾಗ್ ಇದೆಯಲ್ಲ-“ಇವನನ್ನು (ವಿಲನ್) ಎರಡು ಮಹಡಿಯಿಂದ ಕೆಳಗೆಸೆದರೆ ಸಾಯುವುದು ಕಷ್ಟ. ಅದಕ್ಕೇ ಎರಡು ಬಾರಿ ಹಾಕಿದ್ರೆ ನಾಲ್ಕು ಫ್ಲೋರ್ ನಿಂದ ಹಾಕಿದಂತಾಗುತ್ತಲ್ಲ!” ಎನ್ನುವ ಹಾಗೆ.
ಪ್ರತಿ ಬಾರಿಯೂ ಕೆಲವರಿಗೆ ಎರಡೆರಡು ಬಾರಿ ಅಗ್ನಿ ಹಾರುವ ಸಂಕಷ್ಟ ಎದುರಾಗುತ್ತದೆ. ಕೆಲವರು ಹಾರಿಯೂ ಸೈ ಎನಿಸಿಕೊಳ್ಳುತ್ತಾರೆ. ಇನ್ನು ಕೆಲವರು ಹಾರಲು ಹೋಗಿ ಆಹುತಿಯಾಗುತ್ತಾರೆ. ಇನ್ನೂ ಕೆಲವರು “ಬೇರೆಯವರನ್ನು ಹಾರಿಸಿ” ತಾವು ಹಾರಿದಂತೆ ಡ್ನೂಪ್ ಮಾಡುತ್ತಾರೆ. ನಮ್ ಸಿನಿಮಾಗಳಲ್ಲಿ ಕೆಲವು ಹೀರೋಗಳು ಮಾಡುತ್ತಾರಲ್ಲ ಹಾಗೆಯೇ..ಕೊನೆಗೆ ಅವರೇ ಹೀರೋಗಳು !
ಈಗ ಮತ ಕ್ಷೇತ್ರಗಳಲ್ಲಿನ ಮತದಾರರಿಗೂ ಈ ಅಗ್ನಿ ಪರೀಕ್ಷೆ, ಅಶ್ವಮೇಧ, ಕೊನೇ ಚುನಾವಣೆ, ಇದೊಂದು ಬಾರಿ ಗೆಲ್ಲಿಸಿ ಇಂಥವುಗಳನ್ನು ಕೇಳಿದರೆ ಅನಾಸಕ್ತಿಯೋಗದಲ್ಲಿ ಇದ್ದವರಂತೆ ಮಾಡತೊಡಗಿದ್ದಾರಂತೆ. ಏನ್ರೀ ಮೊದಲ ಚುನಾವಣೆಯಿಂದಲೂ ಈಗಲೂ ಅದೇ ಕುದುರೆ, ಆದೇ ಅಗ್ನಿ ಏನ್ರೀ? ಸ್ವಲ್ಪ ಚೇಂಜ್ ಬೇಡವೇ? ಎಂದು ಕೇಳುತ್ತಿದ್ದಾರಂತೆ.
ಅದಕ್ಕೆ ನಮ್ಮ ಹಳ್ಳಿಯ ಬುದ್ಧಿವಂತನೊಬ್ಬ “ಹೌದು, ಅವರೂ ಹೇಳ್ಳೋದೂ ನಿಜವೇ. ಟೆಕ್ನಾಲಜಿ ಯುಗದಲ್ಲಿ ಯುದ್ಧಗಳೇ ಬದಲಾಗ್ತಿವೆ. ಈ ಕುದುರೆ, ಅಗ್ನಿ ಬದಲಾಗದಿದ್ದರೆ ಹೇಗೆ?” ಎಂದವನೇ ಹೊಸ ಐಡಿಯಾ ಕೊಟ್ಟ.
ಅವನ ಪ್ರಕಾರ ಈ ಅಗ್ನಿ ಪರೀಕ್ಷೆ ಎಲ್ಲವೂ ಹಳತಾಯಿತಂತೆ, ಶಾಖವೂ ಆರಿ ಹೋಗಿದೆಯಂತೆ. ಈಗೇನಿದ್ದರೂ ಹವಾಮಾನ ವೈಪರೀತ್ಯದ ಕಾಲ. ಏಕ್ ದ್‌ಂ ಹೀಟ್ ಹೆಚ್ಚಾಗಿ ಬಿಡುತ್ತೆ, ಏಕ್ ದಂ ಕೋಲ್ಡ್ ಆಗಿ ಬಿಡುತ್ತೆ. ಅದಕ್ಕೇ ನಾವು ಈ ಅಗ್ನಿ ಪರೀಕ್ಷೆ ಅನ್ನೋದಿಕ್ಕೂ ಆಗೋದಿಲ್ಲ, ಅದರ ಬದಲು ಜಲ ಪರೀಕ್ಷೆ ಎನ್ನೋದಕ್ಕೂ ಆಗೋದಿಲ್ಲ. ಯಾಕೆ ಅಂತಾ ಗೊತ್ತಿದೆಯಲ್ಲ ಇವರು ಅಗ್ನಿ ಪರೀಕ್ಷೆ ಅಂತ ಹಾರುವ ಹೊತ್ತಿಗೆ ಬೆಂಕಿ ಆರಿ ತಣ್ಣಗೆ ಆಗ್ ಬಿಡಬಹುದು ! ಹಾಗೇನೇ ಜಲ ಪರೀಕ್ಷೆ ಅಂತ ಹಾರಲಿಕ್ಕೆ ಹೋದ ಅಂದುಕೊಳ್ಳಿ, ಅಷ್ಟರಲ್ಲಿ ನೀರೆಲ್ಲಾ ಮಂಜುಗೆಡ್ಡೆ ರೀತಿ ಆಗಿಬಿಟ್ಟಿದ್ದರೆ ಅವರು ಸೀದಾ ನಡೆದು ಕೊಂಡು ಹೋಗಿಬಿಡ್ತಾರೆ, ಇನ್ನು ಹಾರುವುದು ಎಲ್ಲಿಂದ ಬಂತು?
ಅದಕ್ಕೇ ಇನ್ನೇನಿದ್ದರೂ ವಾಯು ಪರೀಕ್ಷೆ, ಅಗ್ನಿಯಾದರೂ ಕಣ್ಣಿಗೆ ಕಾಣುತ್ತೆ, ಆರಿಸಬಹುದು. ಆದರೆ ವಾಯು ಹೇಗೆ ಎಂದೇ ತಿಳಿಯೋದಿಲ್ಲ. ಕೊರೊನಾ ಹಾಗೇ ತಾನೇ ಬಂದಿದ್ದು ಸರಕಾರ, ಸಮಾಜ ಎಲ್ಲದರ ಪರೀಕ್ಷೆ ಮಾಡಿದ್ದು. ಹಾಗಾಗಿ ಇನ್ನು ಮುಂದೆ ವಾಯು ಪರೀಕ್ಷೆ ಎನ್ನೋಣ, ಅಗ್ನಿಗೆ ವಯಸ್ಸಾಯಿತು, ಟಿಕೆಟ್ ನಿರಾಕರಿಸಿ ಯಂಗ್ ಫೇಸ್ ವಾಯುವಿಗೆ ಮುಂದಕ್ಕೆ ತರೋಣ. ಹೇಗಿದ್ದರೂ ನಮ್ಮಲ್ಲಿ 75 ಪ್ಲಸ್ ನವರಿಗೆ ವಿರಾಮ ಕೊಡ್ತೀದ್ದವಲ್ಲಾ !