Advertisement

ಗಾಲ್ಫ್ ಕ್ಲಬ್‌ಗಳಿಗೆ 100 ಕೋಟಿ ರೂ. ನಷ್ಟ ; ಸ್ಪರ್ಧೆಗಳು ರದ್ದು

09:15 AM Apr 16, 2020 | Hari Prasad |

ಹೊಸದಿಲ್ಲಿ: ಗಾಲ್ಫ್ ಅಂಕಣಗಳಲ್ಲಿ ಸಿಗುತ್ತಿದ್ದ ದಿನನಿತ್ಯದ ಹಣವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಯಾಡಿಗಳ (ಕೆಲಸಗಾರರು) ಬದುಕು ದುರ್ಬರವಾಗಿದೆ. ಆದರೆ ಸಂಕಷ್ಟವಿರುವುದು ಬರೀ ಕ್ಯಾಡಿಗಳಿಗೆ ಮಾತ್ರವಲ್ಲ, ಗಾಲ್ಫ್ ಕೂಟವನ್ನೇ ನಂಬಿಕೊಂಡು ಬದುಕುತ್ತಿದ್ದ ಕ್ಲಬ್‌ಗಳಿಗೂ ದುಃಸ್ಥಿತಿ ಎದುರಾಗಿದೆ. ಗಾಲ್ಫ್ ಕೂಟಗಳು ರದ್ದಾಗಿರುವುದು, ಮುಂದೂಡಿಕೆಯಾಗಿರುವುದು ಸೇರಿದರೆ 100 ಕೋಟಿ ರೂ. ನಷ್ಟವಾಗಿದೆ ಎಂದು ಭಾರತ ಗಾಲ್ಫ್ ಕ್ಲಬ್‌ಗಳ ಅಧ್ಯಕ್ಷ (ಜಿಐಎ) ರಿಷಿ ನಾರಾಯಣನ್‌ ತಿಳಿಸಿದ್ದಾರೆ.

Advertisement

ದೇಶದಲ್ಲಿ 240ಕ್ಕೂ ಅಧಿಕ ಗಾಲ್ಫ್ ಕ್ಲಬ್‌ಗಳಿವೆ. ಕಳೆದ ವರ್ಷ ಆರ್ಥಿಕ ಕುಸಿತದಿಂದ ಈ ಕ್ಲಬ್‌ಗಳು ನಷ್ಟ ಅನುಭವಿಸಿದ್ದವು. ಕಂಪೆನಿಗಳು ಪ್ರಾಯೋಜಕತ್ವದಿಂದ ಹಿಂದೆ ಸರಿದಿದ್ದವು. ಕೆಲವು ಕೂಟಗಳೇ ನಿಂತು ಹೋಗಿದ್ದವು. ಈ ಬಾರಿ ಕೋವಿಡ್ 19 ವೈರಸ್ ದಾಳಿಯಾದ ಮೇಲೆ, ಸಂಪೂರ್ಣ ಪರಿಸ್ಥಿತಿ ಪಾತಾಳಕ್ಕೆ ಹೋಗಿದೆ. 4 ಪಿಜಿಟಿಐ (ಪ್ರೊಫೆಶನಲ್‌ ಗಾಲ್ಫ್ ಟೂರ್‌ ಆಫ್ ಇಂಡಿಯಾ) ಕೂಟಗಳು ರದ್ದಾಗಿವೆ, ಇನ್ನು 5-6 ಕೂಟಗಳು ಮುಂದೂಡಿಕೆಯಾಗಿವೆ. ಐಜಿಯು (ಇಂಡಿಯನ್‌ ಗಾಲ್ಫ್ ಯೂನಿಯನ್‌) ಕೂಟಗಳದ್ದೂ ಇದೇ ಕಥೆ.
ಹೀಗಾಗಿ ಕ್ಲಬ್‌ಗಳಿಗೆ ಬರಬೇಕಾಗಿದ್ದ ಪ್ರವೇಶ ಶುಲ್ಕ, ಆತಿಥೇಯತ್ವ ಶುಲ್ಕ, ಆಹಾರ-ಪಾನೀಯ-ಸಾಧನಗಳ ಶುಲ್ಕ ಹೀಗೆ ಕ್ಲಬ್‌ಗಳು ಸಿಕ್ಕಾಪಟ್ಟೆ ಕಳೆದುಕೊಳ್ಳುತ್ತಿವೆ. ಇದರಿಂದ ಕ್ಲಬ್ಬನ್ನೇ ನಂಬಿಕೊಂಡಿದ್ದ ವ್ಯಕ್ತಿಗಳನ್ನು ಸಾಕುವುದು ಕಷ್ಟವಾಗಿದೆ.

ಗಾಲ್ಫ್ ಅಂಕಣದ ಕ್ಯಾಡಿಗಳ ಸಂಕಟ
ಸದ್ಯದ ದಿಗ್ಬಂಧನ ಎಲ್ಲರನ್ನೂ ಕಾಡುತ್ತಿದೆ. ಬಹುಶಃ ಪರಿಸ್ಥಿತಿ ಸುಧಾರಿಸದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಕಷ್ಟದ ದಿನಗಳು ಕಾದಿರಬಹುದು. ಆದರೆ ದೇಶದ ಗಾಲ್ಫ್ ಅಂಕಣಗಳಲ್ಲಿ, ದಿನದಿನದ ಪಾವತಿಯನ್ನೇ ನಂಬಿಕೊಂಡು ಕೆಲಸ ಮಾಡುವ ಕೆಲಸಗಾರರ ಪರಿಸ್ಥಿತಿ ಈಗಾಗಲೇ ಪಾತಾಳಕ್ಕೆ ಮುಟ್ಟಿದೆ. ಅವರನ್ನೆಲ್ಲ ಕ್ಯಾಡಿಗಳೆಂದು ಕರೆಯಲಾಗುತ್ತದೆ.

ಅವರು ಮನೆ ಬಾಡಿಗೆ ಕಟ್ಟಬೇಕು, ಸಂಸಾರ ಸಾಗಿಸಬೇಕು. ಅವೆಲ್ಲವನ್ನೂ ದಿನದಿನದ ಹಣ ನಂಬಿಕೊಂಡೇ ಮಾಡಬೇಕು. ಈಗ ದೇಶದ ಗಾಲ್ಫ್ ಕ್ಲಬ್‌ಗಳೆಲ್ಲ ಬಾಗಿಲು ಹಾಕಿರುವುದರಿಂದ ಅವರೆಲ್ಲ ಏನು ಮಾಡಬೇಕು?
ರಾಜಧಾನಿ ದಿಲ್ಲಿಯಲ್ಲೇ 2,500ರಿಂದ 3,000 ಕ್ಯಾಡಿಗಳು ಕೆಲಸ ಮಾಡುತ್ತಿದ್ದಾರೆ.

ಅದರಲ್ಲಿ ಎಲ್ಲೋ 100, 200 ಮಂದಿಯನ್ನು ಬಿಟ್ಟರೆ ಉಳಿದವರು ಪೂರ್ಣಕಾಲಿಕವಾಗಿ ಈ ಸಂಪಾದನೆಯನ್ನೇ ನಂಬಿಕೊಂಡವರು. ಇಡೀ ದೇಶದಲ್ಲಿ ಶೇ.95ರಷ್ಟು ಮಂದಿ ಕ್ಯಾಡಿಗಳು ಈಗ ಸಂಕಷ್ಟದಲ್ಲಿದ್ದಾರೆ. ಇನ್ನೊಂದು ಐದರಷ್ಟು ಮಂದಿ ತಿಂಗಳಿಗೆ 20ರಿಂದ 25,000 ದುಡಿಯುತ್ತಿದ್ದವರು ಪರವಾಗಿಲ್ಲ ಎಂಬ ಸ್ಥಿತಿಯಲ್ಲಿದ್ದಾರೆ!

Advertisement

ಏಷ್ಯಾ ಟೂರ್‌ ವಿಜೇತ, ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಎಲ್ಲ ಸಂಭಾವ್ಯತೆ ಹೊಂದಿರುವ ರಶೀದ್‌ ಖಾನ್‌ ಅವರೇ ಇದನ್ನು ಖಚಿತಪಡಿಸಿದ್ದಾರೆ. ಸ್ವತಃ ಅವರ ಕ್ಯಾಡಿ, ಸ್ವಲ್ಪ ಹಣಕಾಸಿನ ನೆರವು ನೀಡಿ ಎಂದು ಮನವಿ ಮಾಡಿದ್ದಾರಂತೆ.

ಕ್ಯಾಡಿಗಳು ಅಂದರೇನು?
ಇವರು ಗಾಲ್ಫರ್‌ಗಳ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಾರೆ ಅದರಂತೆ ಆಟಗಾರರ ಬ್ಯಾಗ್‌ಗಳನ್ನು ಹೊತ್ತುಕೊಂಡು ಅವರ ಹಿಂದೆ ಹೋಗುತ್ತಾರೆ. ಮತ್ತು ಸ್ಪರ್ಧೆಗಳು ನಡೆಯುವಾಗ ಅಲ್ಲಿನ ಪರಿಸ್ಥಿತಿ ಬಗ್ಗೆ ಗಾಲ್ಫರ್‌ಗಳಿಗೆ ಮಾಹಿತಿ ನೀಡುತ್ತಾರೆ. ಒಂದರ್ಥದಲ್ಲಿ ಕ್ಯಾಡಿಗಳು ಗಾಲ್ಫರ್‌ಗಳಿಗೆ ಕೋಚ್‌ಗಳಾಗಿ ಸಹಕರಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next