Advertisement
ಮಲೆನಾಡಿನಲ್ಲಿ ಸಾಮಾನ್ಯವಾಗಿ ಜೂನ್ ಮೊದಲ ವಾರ ಮುಂಗಾರು ಪ್ರವೇಶವಾಗಿ ಮಳೆ ಸುರಿಯುವುದು ವಾಡಿಕೆಯಾಗಿದೆ. ಆದರೆ, ಈ ಬಾರಿ ಹವಮಾನ ವೈಪರೀತ್ಯದಿಂದ ಮೇ 2ನೇ ವಾರದಿಂದಲೇ ಮಳೆ ಆರಂಭವಾಗಿದೆ. ಇದು ಕೃಷಿಕರಿಗೆ ಖುಷಿ ತಂದರೆ, ಇತರ ಕೆಲಸಗಳಿಗೆ ಅಡ್ಡಿಯುಂಟಾಗಿದೆ. ಕಾಫಿ ತೋಟಗಳಲ್ಲಿ ಗಿಡಕಸಿಸಿ, ಮರಕಸಿ, ಗೊಬ್ಬರ ಹಾಕುವ ಕೆಲಸಗಳು ನಡೆಯುತ್ತಿದ್ದು, ಇನ್ನು ಮಳೆಯಿಂದಾಗಿ ಕಟ್ಟಡ ಕಾಮಗಾರಿಗಳಿಗೆ ಬಹಳ ಅಡ್ಡಿಯುಂಟಾಗಿದೆ.
Related Articles
Advertisement
ಪ್ರವಾಸಿಗರ ಸಂಖ್ಯೆ ಹೆಚ್ಚಳ: ಶಾಲಾ ಮಕ್ಕಳಿಗೆ ರಜೆ ಇರುವುದರಿಂದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಪ್ರವಾಸಿ ತಾಣಗಳಾದ ಮೂಕನಮನೆ ಜಲಪಾತ, ಮಂಜ್ರಾಬಾದ್ ಕೋಟೆ, ಬಿಸ್ಲೆ ಘಾಟ್, ಬೆಟ್ಟದ ಬೈರವೇಶ್ವರ ದೇವಸ್ಥಾನ ಸೇರಿದಂತೆ ಇತರ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಲು ಬರುತ್ತಿದ್ದಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ರೈನ್‌ಕೋಟ್ ಹಾಕಿಕೊಂಡು ಸುರಿಯುವ ಮಳೆಯಲ್ಲೇ ಎಮ್ಮೆ, ದನ, ಕರುಗಳನ್ನು ಮೇಯಿಸುವ ದೃಶ್ಯ ತಾಲೂಕಿನ ಕಂಡು ಬರುತ್ತಿದೆ. ಸುರಿಯುತ್ತಿರುವ ಮಳೆಯಿಂದಾಗಿ ಜಲಮೂಲಗಳು ಭರ್ತಿಯಾಗಿದ್ದು, ಜಲಪಾತಗಳಲ್ಲಿ ನೀರು ಉಕ್ಕಿ ಹರಿಯಲು ಆರಂಭವಾಗಿದೆ.
ಒಟ್ಟಾರೆಯಾಗಿ ಬಿಸಿಲಿನ ಧಗೆಯಿಂದ ಕಂಗೆಟ್ಟಿದ್ದ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬಿಸಿಲಿನ ವಾತಾವರಣ ಹೋಗಿ ತಂಪಾದ ವಾತಾವರಣ ಮೂಡಿದ್ದು, ಜನರಲ್ಲಿ ಸಂತೋಷ ತಂದಿದೆ.
ದಿನವಿಡೀ ಮೋಡ ಕವಿದ ವಾತಾವರಣ:
ಬಂಗಾಳ ಕೊಲ್ಲಿಯಲ್ಲಿ ಶೀಘ್ರದಲ್ಲಿ ಚಂಡಮಾರುತ ಅಪ್ಪಳಿಸಲಿದ್ದು, ಇದರಿಂದ ಈ ವಾರ ಪೂರ್ಣ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಇದಾದ ನಂತರ ಮೇ 31ರಂದು ಕೇರಳಕ್ಕೆ ಮುಂಗಾರು ಪ್ರವೇಶ ಮಾಡಿ, ರಾಜ್ಯ ಪ್ರವೇಶ ಮಾಡಲಿದೆ ಎಂದು ಹವಮಾನ ತಜ್ಞರು ಹೇಳಿದ್ದಾರೆ. ಇದರಿಂದ ಸದ್ಯಕ್ಕೆ ಮಳೆ ಬಿಡುವುದು ಅನುಮಾನವಾಗಿದೆ. ಶುಕ್ರವಾರ ರಾತ್ರಿ ಮಳೆ ಸುರಿದಿದ್ದು, ಶನಿವಾರ ದಿನವಿಡೀ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಮಳೆ ಸುರಿಯುವ ನಿರೀಕ್ಷೆಯಿದೆ.
–ಸುಧೀರ್.ಎಸ್.ಎಲ್