ಹೊಸದಿಲ್ಲಿ: ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಾ ಸಾಗಿದ್ದು, ಈಗ 60 ಸಾವಿರಕ್ಕಿಂತಲೂ ಕೆಳಗಿಳಿದಿದೆ. ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆಗಳಲ್ಲಿ 55,342 ಮಂದಿಗೆ ಸೋಂಕು ದೃಢಪಟ್ಟು, 706 ಮಂದಿ ಸಾವಿಗೀಡಾಗಿದ್ದಾರೆ.
ಪ್ರಸ್ತುತ ದೇಶದಲ್ಲಿ 8,38,729 ಸಕ್ರಿಯ ಸೋಂಕಿತರಿದ್ದು, ಸತತ 5ನೇ ದಿನವೂ ಸಕ್ರಿಯ ಸೋಂಕಿತರ ಸಂಖ್ಯೆ 9 ಲಕ್ಷಕ್ಕಿಂತಲೂ ಕಡಿಮೆಯಿದೆ. ಈವರೆಗೆ ಒಟ್ಟಾರೆ 71.75 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗಲಿದೆ. ಈ ಪೈಕಿ 62 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಇದೇ ವೇಳೆ, ಸೋಂಕಿನ ಪಾಸಿಟಿವಿಟಿ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದಿದೆ.
ಪ್ರಯೋಗಕ್ಕೆ ಒಳಗಾದ ಕನ್ನಡಿಗ: ಮುಂಬಯಿನಲ್ಲಿ ಆಕ್ಸ್‌ಫರ್ಡ್ ವಿವಿಯ ಆಸ್ಟ್ರಾಜೆನೆಕಾ ಲಸಿಕೆಯ ಪ್ರಯೋಗಕ್ಕೆ ಕನ್ನಡಿಗ ಅನಿಲ್ ಹೆಬ್ಟಾರ್ ಸೇರಿದಂತೆ 100 ಮಂದಿ ಸ್ವಯಂಸೇವಕರು ಒಳಗಾಗಿದ್ದಾರೆ. ಮೊದಲ ಹಂತದ ಪ್ರಯೋಗದಲ್ಲಿ 56 ವರ್ಷದ ಹೆಬ್ಟಾರ್ ಭಾಗಿಯಾಗಿ ದ್ದಾರೆ. ಅ.8ರಂದೇ ಲಸಿಕೆ ಪ್ರಯೋಗಿಸಲಾಗಿದ್ದು, ಅದಾದ ಬಳಿಕ ಸ್ವಲ್ಪಮಟ್ಟಿಗೆ ಸುಸ್ತು ಮತ್ತು ಮೈಕೈ ನೋವು ಕಾಣಿಸಿಕೊಂಡಿದೆ. ತಾವು ಈ ಪ್ರಯೋಗಕ್ಕೆ ಒಳಗಾಗುತ್ತಿರುವ ವಿಚಾರವನ್ನು ಕುಟುಂಬಕ್ಕೆ ತಿಳಿಸಿಲ್ಲ ಎಂದಿದ್ದಾರೆ ಹೆಬ್ಟಾರ್.
ಹಲವು ಮೂಲಗಳಿಂದ ಲಸಿಕೆ: ಮುಂದಿನ ವರ್ಷದ ಆರಂಭದಲ್ಲಿ ಕೋವಿಡ್ ಲಸಿಕೆ ಲಭ್ಯವಾಗಲಿದೆ. ಅಲ್ಲದೆ, ಒಂದಕ್ಕಿಂತ ಹೆಚ್ಚಿನ ಮೂಲಗಳಿಂದ ಲಸಿಕೆ ಸಿಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. ಪ್ರಸ್ತುತ 4 ಲಸಿಕೆಗಳು ಪ್ರಯೋಗದ ಹಂತದಲ್ಲಿವೆ. ಈ ನಡುವೆ, ಜಾನ್ಸನ್ ಆ್ಯಂಡ್ ಜಾನ್ಸನ್ ಸಂಸ್ಥೆಯು ಕೊರೊನಾ ಲಸಿಕೆಯ ಪ್ರಯೋಗವನ್ನು ಅರ್ಧಕ್ಕೇ ಸ್ಥಗಿತಗೊಳಿಸಿದೆ.
ಆರೋಗ್ಯ ಸೇತುಗೆ ಮೆಚ್ಚುಗೆ
ಸೋಂಕು ಪತ್ತೆಗೆ ಕೇಂದ್ರ ಸರಕಾರ ಅಭಿವೃದ್ಧಿಪಡಿಸಿದ ಆರೋಗ್ಯ ಸೇತು ಆ್ಯಪ್‌ಗೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸಂಸ್ಥೆಯ ಮಹಾನಿರ್ದೇಶಕ ಟೆಡೋìಸ್ ಅಧೋನಮ್ ಗೇಬ್ರಿಯೋಸೆಸ್ ಮಾತನಾಡಿ “ಆ್ಯಪ್‌ನಿಂದಾಗಿ ನಗರ ಆಡಳಿತ ವ್ಯವಸ್ಥೆಗೆ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಇರುವ ಸ್ಥಳ ಪತ್ತೆ ಹಚ್ಚಿ, ಪರೀಕ್ಷೆ ನಡೆಸಲು ಅನುಕೂಲವಾಗಲಿದೆ’ ಎಂದು ಹೇಳಿದ್ದಾರೆ.