ನವದೆಹಲಿ: ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಭೂಮಿ ವಿವಾದದ ಅಂತಿಮ ವಿಚಾರಣೆ ಬುಧವಾರ ಮುಕ್ತಾಯಗೊಳ್ಳುವ ಸಾಧ್ಯತೆ ಇದ್ದಿರುವುದಾಗಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಮಂಗಳವಾರ ತಿಳಿಸಿದ್ದಾರೆ.
ಅಯೋಧ್ಯೆ ಪ್ರಕರಣದ ಈ ಅಂತಿಮ ವಿಚಾರಣೆ ನಿಗದಿಯಂತೆ ಅಕ್ಟೋಬರ್ 17ಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ಅವರು ನವೆಂಬರ್ 17ರಂದು ನಿವೃತ್ತಿಯಾಗುವ ಮೊದಲು ಬಹುನಿರೀಕ್ಷಿತ ಅಯೋಧ್ಯೆ ಕುರಿತ ಅಂತಿಮ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ರಾಮ್ ಲಲ್ಲಾ ವಿರಾಜ್ ಮಾನ್ ಪರ ಹಿರಿಯ ವಕೀಲರಾದ ಕೆ.ಪರಾಶರನ್ ವಾದ ಮಂಡಿಸಿದ್ದು, ರಾಮ ಜನಿಸಿದ್ದಾನೆ ಎಂದು ನಂಬಿರುವ ಜಾಗಕ್ಕಾಗಿ ಹಿಂದೂಗಳು ಶತಮಾನಗಳಿಂದ ಹೋರಾಡುತ್ತಲೇ ಬಂದಿದ್ದಾರೆ. ಮುಸ್ಲಿಮರಿಗೆ ಬೇಕಾದರೆ ಯಾವ ಮಸೀದಿಯಲ್ಲಿಯೂ ಪ್ರಾರ್ಥನೆ ಸಲ್ಲಿಸಬಹುದು ಎಂದು ಹೇಳಿದರು.
ಮುಸ್ಲಿಮರು ಯಾವುದೇ ಮಸೀದಿಗಳಲ್ಲಿಯೂ ಪ್ರಾರ್ಥನೆ ಸಲ್ಲಿಸಬಹುದು. ಅಯೋಧ್ಯೆಯಲ್ಲಿಯೇ 55ರಿಂದ 60 ಮಸೀದಿಗಳಿವೆ. ಆದರೆ ಹಿಂದೂಗಳಿಗೆ ರಾಮನ ಜನ್ಮಸ್ಥಳವೇ ಮುಖ್ಯವಾಗಿದೆ. ನಮಗೆ ಜನ್ಮ ಸ್ಥಳವನ್ನು ಬದಲಾಯಿಸಲು ಸಾಧ್ಯವಿಲ್ಲ. ಹಿಂದೂಗಳಿಗೆ ಇದು ರಾಮನ ಜನ್ಮಸ್ಥಳ, ಮುಸ್ಲಿಮರಿಗೆ ಇದೊಂದು ಐತಿಹಾಸಿಕ ಮಸೀದಿ. ಎಲ್ಲಾ ಮಸೀದಿಗಳೂ ಮುಸ್ಲಿಮರಿಗೆ ಒಂದೇಯಾಗಿದೆ. ಆದರೆ ಹಿಂದೂಗಳು ಜನ್ಮಸ್ಥಳವನ್ನು ಬದಲಾಯಿವುದಿಲ್ಲ ಎಂದು ವಾದ ಮಂಡಿಸಿದರು.
ಏತನ್ಮಧ್ಯೆ ಮುಸ್ಲಿಮ್ ಅರ್ಜಿದಾರರ ಪರ ವಕೀಲರಾದ ರಾಜೀವ್ ಧವನ್ ಅವರಿಗೆ ಮುಖ್ಯ ನ್ಯಾಯಮೂರ್ತಿ ಗೋಗೊಯಿ, ಹಿಂದೂ ಪರ ವಕೀಲರಿಗೆ ಕೇಳಿದ ಪ್ರಶ್ನೆಗಳು ಸಾಕಾ ಎಂದು ಕೇಳಿದ್ದರು. ಇದನ್ನು ಲಘುವಾಗಿ ಪರಿಗಣಿಸಬೇಕು, ಎಲ್ಲವನ್ನೂ ನೀವು(ವಕೀಲರು) ಗಂಭೀರವಾಗಿ ಪರಿಗಣಿಸಬಾರದು. ಇಂದು 39ನೇ ದಿನದ ವಿಚಾರಣೆಯಾಗಿದೆ ಎಂದು ಹೇಳಿದರು.
ಈ ಮೊದಲಿನ ವಾದದಲ್ಲಿ ವಕೀಲರಾದ ಪರಾಶರನ್ ಅವರು, ಇದು ಸಾರ್ವಜನಿಕ ಪೂಜೆಯ ಸ್ಥಳ ಎಂದು ಹಿಂದೂವಾಗಲಿ ಅಥವಾ ಮುಸ್ಲಿಮರಾಗಲಿ ಹಕ್ಕನ್ನು ಹೇಳಿಕೊಂಡಿರಲಿಲ್ಲವಾಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಮ್ ಪರ ವಕೀಲರಾಗಿದ್ದ ರಾಜೀವ್ ಧವನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಪರಾಶರನ್ ಧವನ್ ಮಧ್ಯಪ್ರವೇಶವನ್ನು ನಿರ್ಲಕ್ಷಿಸಿ, ತಾನು ಕೋರ್ಟ್ ಆಕ್ಷೇಪಕ್ಕೆ ಮಾತ್ರ ಉತ್ತರ ನೀಡುವುದಾಗಿ ಪ್ರತಿಕ್ರಿಯೆ ನೀಡಿದ್ದರು.
ಅಯೋಧ್ಯೆ ಜಾಗದ ವಿವಾದಕ್ಕೆ ಸಂಬಂಧಿಸಿದ ತೀರ್ಪು ನೀಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರ ಅಯೋಧ್ಯೆ ಜಿಲ್ಲೆಯಾದ್ಯಂತ ಐಪಿಸಿ ಸೆಕ್ಷನ್ 144 ಅನ್ನು ಜಾರಿಗೊಳಿಸಿದೆ. ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೊಯಿ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಆಗಸ್ಟ್ 6ರಿಂದ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಲು ಆರಂಭಿಸಿತ್ತು.